ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್‌: ಭರವಸೆಯಲ್ಲಿ ಭಾರತ ಮಹಿಳೆಯರು

ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿ: ಹರ್ಮನ್‌ಪ್ರೀತ್ ಕೌರ್‌ ಅಲಭ್ಯ
Last Updated 21 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಮುಂಬೈ: ಉತ್ತಮ ಲಯದಲ್ಲಿರುವ ಭಾರತ ಮಹಿಳಾ ತಂಡದವರು ಇಂಗ್ಲೆಂಡ್ ಮಹಿಳಾ ತಂಡದ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಜಯದ ಭರವಸೆಯಲ್ಲಿದ್ದಾರೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಶುಕ್ರವಾರ ಇಲ್ಲಿ ನಡೆಯಲಿದ್ದು ನ್ಯೂಜಿಲೆಂಡ್‌ನಲ್ಲಿ ತೋರಿದ ಸಾಮರ್ಥ್ಯವನ್ನು ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ.

ಸ್ಫೋಟಕ ಬ್ಯಾಟ್ಸ್‌ವುಮನ್‌ ಹರ್ಮನ್‌ಪ್ರೀತ್ ಕೌರ್‌ ಗಾಯಗೊಂಡಿರುವ ಕಾರಣ ಈ ಸರಣಿಯಲ್ಲಿ ಆಡುತ್ತಿಲ್ಲ. ಆದರೂ ಉಳಿದ ಆಟಗಾರ್ತಿಯರ ಮೇಲೆ ತಂಡ ಭರವಸೆ ಇರಿಸಿಕೊಂಡಿದೆ. ಐಸಿಸಿ ಚಾಂಪಿಯನ್‌ಷಿಪ್‌ನ ಭಾಗವಾಗಿ ಈ ಸರಣಿ ನಡೆಯುತ್ತಿದೆ. ನ್ಯೂಜಿಲೆಂಡ್‌ನಲ್ಲಿ ಈಚೆಗೆ ನಡೆದ ಏಕದಿನ ಸರಣಿಯಲ್ಲಿ ಭಾರತ ತಂಡ ಉತ್ತಮ ಸಾಧನೆ ಮಾಡಿತ್ತು.

2021ರಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಗಳಿಸಬೇಕಾದರೆ ಭಾರತ ತಂಡ ಐಸಿಸಿ ರ‍್ಯಾಂಕಿಂಗ್‌ನ ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಬೇಕು. ಇದಕ್ಕೆ ಈ ಸರಣಿಯ ಫಲಿತಾಂಶಗಳು ನೆರವಾಗಲಿವೆ.

ಮೂರೂ ಪಂದ್ಯಗಳಿಗೆ ವಾಂಖೆಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು ಮಿಥಾಲಿ ರಾಜ್ ಬಳಗ, ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಕಳೆದ ವರ್ಷ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯ ಭಾರತ 2–1ರಿಂದ ಗೆಲುವು ಸಾಧಿಸಿತ್ತು.

36 ವರ್ಷದ ಮಿಥಾಲಿ ರಾಜ್ ಅವರು ಭಾರತದ ಪರ 200 ಏಕದಿನ ಪಂದ್ಯಗಳನ್ನು ಆಡಿದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯ ನಂತರ ಭಾರತದಲ್ಲಿ ಅವರು ಕಣಕ್ಕೆ ಇಳಿಯುತ್ತಿರುವ ಮೊದಲ ಸರಣಿ ಇದಾಗಿದೆ. ಆದ್ದರಿಂದ ಅವರಿಂದ ಸ್ಫೋಟಕ ಬ್ಯಾಟಿಂಗ್ ನಿರೀಕ್ಷಿಸಲಾಗಿದೆ.

ಕೌರ್ ಬದಲಿಗೆ ಡಿಯೋಲ್‌: ಹಿಂಗಾಲಿಗೆ ಗಾಯಗೊಂಡಿರುವ ಕಾರಣ ಹರ್ಮನ್‌ಪ್ರೀತ್ ಕೌರ್ ಅವರಿಗೆ ವಿಶ್ರಾಂತಿ ನೀಡಿದ್ದು ಅವರ ಬದಲಿಗೆ ಹರ್ಲೀನ್ ಡಿಯೋಲ್ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಐಸಿಸಿ ವರ್ಷದ ಆಟಗಾರ್ತಿ ಎನಿಸಿಕೊಂಡಿರುವ ಸ್ಮೃತಿ ಮಂದಾನ ಮತ್ತು ಯುವ ಬ್ಯಾಟ್ಸ್‌ವುಮನ್‌ ಜೆಮಿಮಾ ರಾಡ್ರಿಗಸ್‌ ಅವರು ತಂಡಕ್ಕೆ ಬಲ ತುಂಬುವ ನಿರೀಕ್ಷೆ ಇದೆ. ಮಧ್ಯಮ ಕ್ರಮಾಂಕದಲ್ಲಿ ತಂಡ ಸಮಸ್ಯೆ ಎದುರಿಸುತ್ತಿದ್ದು, ಇದನ್ನು ಕೋಚ್ ಡಬ್ಲ್ಯು.ವಿ.ರಾಮನ್ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಬೌಲಿಂಗ್‌ ವಿಭಾಗದಲ್ಲಿ ಆತಿಥೇಯರಿಗೆ ಸಮಸ್ಯೆಗಳಿಲ್ಲ. ಅನುಭವಿ ಜೂಲನ್ ಗೋಸ್ವಾಮಿ ಅವರಿಗೆ ಶಿಖಾ ಪಾಂಡೆ ಮತ್ತು ಮಾನ್ಸಿ ಜೋಶಿ ಉತ್ತಮ ಬೆಂಬಲ ನೀಡಲಿದ್ದಾರೆ. ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ, ಏಕ್ತಾ ಬಿಷ್ಠ್‌ ಮತ್ತು ಪೂನಮ್ ಯಾದವ್ ಅವರು ಇಲ್ಲಿನ ಪಿಚ್‌ನಲ್ಲಿ ವಿಕೆಟ್ ಬೇಟೆಯಾಡುವ ಕನಸು ಕಂಡಿದ್ದಾರೆ.

ಪ್ರಬಲ ಎದುರಾಳಿ: ಪ್ರವಾಸಿ ತಂಡದವರು ಕೂಡ ಎಲ್ಲ ವಿಭಾಗಗಳಲ್ಲೂ ಬಲಿಷ್ಠರಾಗಿದ್ದಾರೆ. ಡ್ಯಾನಿ ವ್ಯಾಟ್‌ ಮತ್ತು ಹಿದರ್‌ ನೈಟ್‌ ಅವರನ್ನು ಕಟ್ಟಿಹಾಕುವುದು ಸವಾಲೇ ಸರಿ. 86 ಪಂದ್ಯಗಳನ್ನು ಆಡಿರುವ ಹಿದರ್‌ 2,331 ರನ್‌ ಕಲೆ ಹಾಕಿದ್ದು ಡ್ಯಾನಿ ವ್ಯಾಟ್‌ 61 ಪಂದ್ಯಗಳಲ್ಲಿ 746 ರನ್‌ ಸಂಪಾದಿಸಿದ್ದಾರೆ. ಮಂಡಳಿ ಅಧ್ಯಕ್ಷರ ಇಲೆವನ್ ಮಹಿಳಾ ತಂಡದ ಎದುರಿನ ಅಭ್ಯಾಸ ಪಂದ್ಯದಲ್ಲಿ ಇವರಿಬ್ಬರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಆಲ್‌ರೌಂಡರ್ ಸೋಫಿ ಎಕ್ಸೆಲಿಸ್ಟೋನ್‌, ವೇಗಿಗಳಾದ ಅನ್ಯಾ ಶ್ರುಬ್‌ಸೋಲ್ ಮತ್ತು ನ್ಯಾಟ್ ಶೀವರ್‌ ಅವರು ಭಾರತದ ಆಟಗಾರ್ತಿಯರಿಗೆ ಸವಾಲೊಡ್ಡಲು ಸಜ್ಜಾಗಿದ್ದಾರೆ.

ತಂಡಗಳು: ಭಾರತ: ಮಿಥಾಲಿ ರಾಜ್‌ (ನಾಯಕಿ), ಜೂಲನ್ ಗೋಸ್ವಾಮಿ, ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ತಾನಿಯ ಭಾಟಿಯ, ಆರ್‌.ಕಲ್ಪನಾ (ವಿಕೆಟ್ ಕೀಪರ್‌ಗಳು), ಮೋನ ಮೇಶ್ರಮ್‌, ಏಕ್ತಾ ಬಿಷ್ಠ್‌, ರಾಜೇಶ್ವರಿ ಗಾಯಕವಾಡ್‌, ಪೂನಮ್ ಯಾದವ್‌, ಶಿಖಾ ಪಾಂಡೆ, ಮಾನ್ಸಿ ಜೋಶಿ, ಪೂನಮ್‌ ರಾವತ್‌, ಹರ್ಲೀನ್‌ ಡಿಯೋಲ್‌.

ಇಂಗ್ಲೆಂಡ್‌: ಟಾಮಿ ಬ್ಯೂಮಾಂಟ್‌, ಕ್ಯಾಥರೀನ್ ಬ್ರುಂಟ್‌, ಕೇಟ್‌ ಕ್ರಾಸ್‌, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೋನ್‌, ಜಾರ್ಜಿಯಾ ಎಲ್ವಿಸ್‌, ಅಲೆಕ್ಸ್‌ ಹಾರ್ಟ್ಲಿ, ಆ್ಯಮಿ ಜೋನ್ಸ್‌, ಹಿದರ್ ನೈಟ್‌, ಲಾರಾ ಮಾರ್ಶ್‌, ನ್ಯಾಟ್ ಶೀವರ್‌, ಅನ್ಯಾ ಶ್ರುಬ್‌ಸೋಲ್‌, ಸಾರಾ ಟೇಲರ್ (ವಿಕೆಟ್ ಕೀಪರ್‌), ಲಾರೆನ್‌, ಡ್ಯಾನಿ ವ್ಯಾಟ್‌.

ಪಂದ್ಯ ಆರಂಭ: ಬೆಳಿಗ್ಗೆ 9.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT