ಭಾನುವಾರ, ನವೆಂಬರ್ 28, 2021
20 °C

ಭಾರತ–ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ: ಬ್ಯಾಟಿಂಗ್ ಕ್ರಮಾಂಕ ನಿರ್ಣಯದ ಕಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ(ಪಿಟಿಐ): ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟಿಂಗ್ ಜೋಡಿಯ ಸಮಸ್ಯೆ ಬಗೆಹರಿದಿದೆ. ಮಧ್ಯಮ ಕ್ರಮಾಂಕವನ್ನು ಸಿದ್ಧಗೊಳಿಸುವ ಸವಾಲು ಇದೆ.

ಬುಧವಾರ ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಅಭ್ಯಾಸ ಪಂದ್ಯದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ನಾಯಕ ವಿರಾಟ್ ಕೊಹ್ಲಿ ಚಿತ್ತ ನೆಟ್ಟಿದ್ದಾರೆ. ಸೋಮವಾರ ಇಂಗ್ಲೆಂಡ್ ಎದುರು ಭರ್ಜರಿ ಜಯ ಸಾಧಿಸಿದ ಭಾರತ ತಂಡವು ಮೊದಲ ಮೂರು ಕ್ರಮಾಂಕವನ್ನು ನಿರ್ಧರಿಸಿದೆ. ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಇನಿಂಗ್ಸ್‌  ಆರಂಭಿಸಲಿದ್ದು, ಮೂರನೇ ಕ್ರಮಾಂಕದಲ್ಲಿ ನಾಯಕ ಕೊಹ್ಲಿ ಕ್ರೀಸ್‌ಗೆ ಬರಲಿದ್ದಾರೆ. 

ರಿಷಭ್ ಪಂತ್ ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆಯುವ ಎಲ್ಲ ಸಾಧ್ಯತೆಗಳೂ ಇವೆ. ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭರ್ಜರಿ 70 ರನ್‌ಗಳನ್ನು ಗಳಿಸಿದ್ದ ಇಶಾನ್ ಕಿಶನ್ ಅವಕಾಶ ಪಡೆಯುವರೇ ಎಂಬ ಕುತೂಹಲವೂ ಇದೆ.

ಆದರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಲಯಕ್ಕೆ ಮರಳಿಲ್ಲ. ಅಲ್ಲದೇ ಅವರು ಬೌಲಿಂಗ್ ಮಾಡುತ್ತಿಲ್ಲ. ಇದರಿಂದಾಗಿ ಅವರನ್ನು ಕಣಕ್ಕಿಳಿಸುವ ಅನುಮಾನವಿದೆ. ಅವರಿಲ್ಲದಿದ್ದರೆ ತಂಡಕ್ಕೆ ಆರನೇ ಬೌಲರ್ ಅನುಪಸ್ಥಿತಿ ಕಾಡಲಿದ್ದು, ಶಾರ್ದೂಲ್ ಠಾಕೂರ್ ಅವಕಾಶ ಪಡೆಯಬಹುದು. ರಾಹುಲ್ ಚಾಹರ್‌ಗಿಂತ ರವೀಂದ್ರ ಜಡೇಜ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ. 

ಮೊದಲ ಅಭ್ಯಾಸ ಪಂದ್ಯದಲ್ಲಿ ರೋಹಿತ್ ವಿಶ್ರಾಂತಿ ಪಡೆದಿದ್ದರು. ಆದರೆ, ಬುಧವಾರ ಅವರು ಕಣಕ್ಕಿಳಿದು ಅಭ್ಯಾಸ ನಡೆಸಲಿದ್ದಾರೆ ಎಂದು ತಂಡದ ಮೂಲಗಳು ಸ್ಪಷ್ಟಪಡಿಸಿವೆ. ಮೊಹಮ್ಮದ್ ಶಮಿ ಮೂರು ವಿಕೆಟ್ ಪಡೆದರೂ ಹೆಚ್ಚು ರನ್‌ಗಳನ್ನು ಕೊಟ್ಟಿದ್ದಾರೆ. ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ ತಮ್ಮ ಬೌಲಿಂಗ್ ಕೌಶಲಗಳನ್ನು ಒರೆಗೆ ಹಚ್ಚಲು ಇದು ಮತ್ತೊಂದು ಅವಕಾಶವಾಗಲಿದೆ.

ಆಸ್ಟ್ರೇಲಿಯಾ ತಂಡವೂ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯಿಸಿದೆ. ಆದರೆ, ಆರಂಭಿಕ ಡೇವಿಡ್ ವಾರ್ನರ್ ಅವರು ಲಯದಲ್ಲಿರದಿರುವುದು ಚಿಂತೆಯ ವಿಷಯ. ಐಪಿಎಲ್‌ನಲ್ಲಿ ಮಿಂಚಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರ ಮೇಲೆ ನಾಯಕ ಆ್ಯರನ್ ಫಿಂಚ್ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ.

 ತಂಡಗಳು:

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ರಾಹುಲ್ ಚಾಹರ್, ಆರ್. ಅಶ್ವಿನ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಆಷ್ಟನ್ ಆಗರ್, ಪ್ಯಾಟ್ ಕಮಿನ್ಸ್ (ಉಪನಾಯಕ), ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯಿನಿಸ್, ಮಿಚೆಲ್ ಸ್ವಿಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು