ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಡಿ ಸೋತ ಶ್ರೇಯಸ್ ಬಳಗ

ಭಾರತ – ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಣ ಏಕದಿನ ಸರಣಿಯಲ್ಲಿ ಆತಿಥೇಯರಿಗೆ ಮೊದಲ ಸೋಲು
Last Updated 5 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ಕೊನೆಯ ಎಸೆತದ ವರೆಗೂ ಕೆಚ್ಚೆದೆಯಿಂದ ಹೋರಾಡಿದ ಭಾರತ ‘ಎ’ ತಂಡ ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರಿನ ಏಕದಿನ ಸರಣಿಯ ಪಂದ್ಯದಲ್ಲಿ 4 ರನ್‌ಗಳಿಂದ ಸೋತಿತು.

ಮಳೆಯಿಂದಾಗಿ ಎರಡು ದಿನ ನಡೆದ ಪಂದ್ಯದಲ್ಲಿ ಗುರುವಾರ ಭಾರತದ ಗೆಲುವಿಗೆ 17.2 ಓವರ್‌ಗಳಲ್ಲಿ 137 ರನ್ ಬೇಕಾಗಿತ್ತು. ಒಂಬತ್ತು ವಿಕೆಟ್‌ಗಳು ಉಳಿದಿದ್ದವು. ಬುಧವಾರ 33 ರನ್ ಗಳಿಸಿ ಅಜೇಯರಾಗಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಗುರುವಾರ ಆಕರ್ಷಕ ಹೊಡೆತಗಳೊಂದಿಗೆ ಗಮನ ಸೆಳೆದರು. ಅರ್ಧಶತಕವನ್ನೂ ಗಳಿಸಿದರು. ಆದರೆ 43 ಎಸೆತಗಳಲ್ಲಿ 52 ರನ್‌ (8 ಬೌಂಡರಿ) ಗಳಿಸಿ ಮಾರ್ಕೊ ಜಾನ್ಸೆನ್‌ಗೆ ವಿಕೆಟ್ ಒಪ್ಪಿಸಿದರು.

ನಂತರ ನಾಯಕ ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆ ಅಮೋಘ ಆಟವಾಡಿ ಭರವಸೆ ಮೂಡಿಸಿದರು. ಇವರಿಬ್ಬರು 51 ರನ್‌ಗಳ ಜೊತೆಯಾಟ ಆಡಿದರು. ಇವರಿಬ್ಬರು ಔಟಾದ ನಂತರ ತಂಡ ಪತನದತ್ತ ಸಾಗಿತು. ರಾಹುಲ್ ಚಾಹರ್ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಮೂಲಕ ಮಿಂಚಿದರು. ಆದರೆ ಅವರಿಗೆ ಪೂರಕ ಸಹಕಾರ ಸಿಗಲಿಲ್ಲ.

ಬುಧವಾರ ಪಂದ್ಯ ಆರಂಭಕ್ಕೆ ಮೊದಲೇ ಮಳೆ ಕಾಡಿದ ಕಾರಣ ಪಂದ್ಯವನ್ನು ತಲಾ 25 ಓವರ್‌ಗಳಿಗೆ ನಿಗದಿ ಮಾಡಲಾಗಿತ್ತು. ದಕ್ಷಿಣ ಆಫ್ರಿಕಾ ‘ಎ’: 25 ಓವರ್‌ಗಳಲ್ಲಿ 1ಕ್ಕೆ 137 ರನ್ ಗಳಿಸಿತ್ತು. ಭಾರತ ‘ಎ’ 7.4 ಓವರ್‌ಗಳಲ್ಲಿ 1 ವಿಕೆಟ್‌ಗೆ 56 ರನ್ ಗಳಿಸಿದ್ದಾಗ ಮಳೆ ಸುರಿದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಗುರುವಾರ ಭಾರತದ ಗೆಲುವಿಗೆ 25 ಓವರ್‌ಗಳಲ್ಲಿ 193 ರನ್‌ ನಿಗದಿ ಮಾಡಲಾಯಿತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ ‘ಎ’: 25 ಓವರ್‌ಗಳಲ್ಲಿ 1ಕ್ಕೆ 137; ಭಾರತ ‘ಎ’: 25 ಓವರ್‌ಗಳಲ್ಲಿ 9ಕ್ಕೆ 188 (ಶಿಖರ್ ಧವನ್ 52, ಶಿವಂ ದುಬೆ 31, ಶ್ರೇಯಸ್ ಅಯ್ಯರ್ 26, ಪ್ರಶಾಂತ್ ಚೋಪ್ರಾ 26, ರಾಹುಲ್ ಚಾಹರ್ ಔಟಾಗದೆ 17; ಆ್ಯನ್ರಿಚ್ ನೋರ್ಜೆ 36ಕ್ಕೆ3, ಮಾರ್ಕೊ ಜಾನ್ಸೆನ್ 35ಕ್ಕೆ3, ಲೂಥೊ ಸಿಪಾಮ್ಲ 55ಕ್ಕೆ3). ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 4 ರನ್‌ಗಳ ಜಯ (ಡಕ್ವರ್ಥ್ ಲೂಯಿಸ್ ನಿಯಮದಡಿ). 5 ಪಂದ್ಯಗಳ ಸರಣಿಯಲ್ಲಿ ಭಾರತ ‘ಎ’ಗೆ 3–1 ಮುನ್ನಡೆ. ಮುಂದಿನ ಪಂದ್ಯ ಶುಕ್ರವಾರ; ಬೆಳಿಗ್ಗೆ 9ರಿಂದ (ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT