ಗುರುವಾರ , ಫೆಬ್ರವರಿ 20, 2020
22 °C
ಏಕದಿನ ಕ್ರಿಕೆಟ್: ಶ್ರೇಯಸ್ ಅಯ್ಯರ್ ಶತಕ; ರಾಹುಲ್ ಅರ್ಧಶತಕ ವ್ಯರ್ಥ; ಸೆಡಾನ್ ಪಾರ್ಕ್‌ನಲ್ಲಿ ಟೇಲರ್ ಮಿಂಚು

IND vs NZ | ಪುಟಿದೆದ್ದ ಕಿವೀಸ್‌, ಭಾರತಕ್ಕೆ ನಿರಾಸೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಹ್ಯಾಮಿಲ್ಟನ್: ಸುಮಾರು 13 ತಿಂಗಳು ಗಳ ನಂತರ ಶತಕ ಬಾರಿಸಿದ ರಾಸ್ ಟೇಲರ್ ಭಾರತ ಕ್ರಿಕೆಟ್‌ ತಂಡದ ಆತ್ಮವಿಶ್ವಾಸದ ಬಲೂನಿಗೆ ಸೂಜಿ ಚುಚ್ಚಿದರು. ಆತಿಥೇಯ ನ್ಯೂಜಿಲೆಂಡ್‌ಗೆ ಜಯದ ಕಾಣಿಕೆ ನೀಡಿದರು.

ಬುಧವಾರ ಸೆಡಾನ್ ಪಾರ್ಕ್‌ನಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕಿವೀಸ್ ಬಳಗವು 4 ವಿಕೆಟ್‌ಗಳಿಂದ ಗೆದ್ದಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು. ಟ್ವೆಂಟಿ–20 ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿದ್ದ ಆತಿಥೇಯ ತಂಡವು ಪುಟಿದೆದ್ದಿತು. ಗಾಯಗೊಂಡಿರುವ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ಟಾಮ್ ಲಥಾಮ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ (103;107ಎಸೆತ, 11ಬೌಂಡರಿ, 1ಸಿಕ್ಸರ್) ಏಕದಿನ ಕ್ರಿಕೆಟ್‌ನಲ್ಲಿ ದಾಖ ಲಿಸಿದ ಚೊಚ್ಚಲ ಶತಕ ಮತ್ತು ಐದನೇ ಕ್ರಮಾಂಕದಲ್ಲಿ ಮತ್ತೊಮ್ಮೆ ಮಿಂಚಿದ ಕನ್ನಡಿಗ ಕೆ.ಎಲ್. ರಾಹುಲ್ (ಔಟಾಗದೆ 88; 64ಎ, 3ಬೌಂ, 6ಸಿ) ಆಟ ಮನಗೆದ್ದಿತು. ಇವರಿಬ್ಬರೂ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಗಳಿಸಿದ 136 ರನ್‌ಗಳ ಬಲದಿಂದ ಭಾರತವು 50 ಓವರ್‌ಗಳಲ್ಲಿ 4ಕ್ಕೆ347 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಕಳಪೆ ಬೌಲಿಂಗ್‌ನ ಲಾಭ ಪಡೆದ ರಾಸ್ ಟೇಲರ್ (ಅಜೇಯ 109; 84ಎ,10ಬೌಂ, 4ಸಿ) ಮತ್ತು ಲಥಾಮ್ (69; 48ಎ,8ಬೌಂ, 2ಸಿ) ಅಟದದಿಂದಾಗಿ ಕಿವೀಸ್ ತಂಡವು 48.1 ಓವರ್‌ಗಳಲ್ಲಿ 6ಕ್ಕೆ348 ರನ್‌ ಗಳಿಸಿ ಗೆದ್ದಿತು.

ಹೋದ ವರ್ಷದ ಜನವರಿ 8ರಂದು ನೆಲ್ಸನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ಎದುರು ಶತಕ ಹೊಡೆದಿದ್ದರು. ಅದರ ನಂತರ ಅವರು ಆಡಿದ ಯಾವುದೇ ಇನಿಂಗ್ಸ್‌ನಲ್ಲಿಯೂ ನೂರರ ಗಡಿ ಮುಟ್ಟಿರಲಿಲ್ಲ. ಆದರೆ ಇಲ್ಲಿ ಅವರ ಆಟದ ಸೊಬಗು ಮತ್ತೊಮ್ಮೆ ಅನಾವರಣಗೊಂಡಿತು.

ಕಿವೀಸ್‌ಗೆ ಮಾರ್ಟಿನ್ ಗಪ್ಟಿಲ್ (32 ರನ್) ಮತ್ತು ಹೆನ್ರಿ ನಿಕೊಲ್ಸ್ (78 ರನ್) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 85 ರನ್‌ ಸೇರಿಸಿದ್ದ ಈ ಜೋಡಿಯನ್ನು ಶಾರ್ದೂಲ್ ಠಾಕೂರ್ 16ನೇ ಓವರ್‌ನಲ್ಲಿ ಬೇರ್ಪಡಿಸಿದರು. ಮೂರು ಓವರ್‌ಗಳ ನಂತರ ವಿರಾಟ್ ಚುರುಕಿನ ಫೀಲ್ಡಿಂಗ್‌ಗೆ ಟಾಮ್ ಬ್ಲಂಡೆಲ್ (9ರನ್) ರನ್‌ಔಟ್ ಆದಾಗ ಭಾರತಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಅವಕಾಶ ಇತ್ತು. ಆದರೆ ಅದಕ್ಕೆ ಟೇಲರ್ ಮತ್ತು ಲಥಾಮ್ ಅವಕಾಶವನ್ನೇ ನೀಡಲಿಲ್ಲ. ಭಾರತದ ಬೌಲರ್‌ಗಳ ‘ಉದಾರತೆ’ಯೂ ಅವರಿಗೆ ನೆರವಾಯಿತು!

ಶ್ರೇಯಸ್ ಚೊಚ್ಚಲ ಶತಕ: ತಮ್ಮ ಪದಾರ್ಪಣೆ ಪಂದ್ಯಗಳಲ್ಲಿ ಇನಿಂಗ್ಸ್‌ ಆರಂಭಿಸಿದ ಪೃಥ್ವಿ ಶಾ (20; 21ಎ 3ಬೌಂ) ಮತ್ತು ಕರ್ನಾಟಕದ ಮಯಂಕ್ ಅಗರವಾಲ್ (32;31ಎ,6ಬೌಂ) ಮೊದಲ ವಿಕೆಟ್‌ಗೆ 50 ರನ್‌ಗಳ ಜೊತೆಯಾಟವಾಡಿ ಉತ್ತಮ ಬುನಾದಿ ಹಾಕಿದರು. ಆದರೆ ಎಂಟನೇ ಓವರ್‌ನಲ್ಲಿ ಪೃಥ್ವಿ ಮತ್ತು ನಂತರದ ಓವರ್‌ನಲ್ಲಿ ಮಯಂಕ್ ಪೆವಿಲಿಯನ್ ಸೇರಿದರು.

ಈ ಹಂತದಲ್ಲಿ ನಾಯಕ ವಿರಾಟ್ ಕೊಹ್ಲಿ  ಮತ್ತು ಶ್ರೇಯಸ್ ಅಯ್ಯರ್ ಜೊತೆಗೂಡಿ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್‌ ಜೊತೆಯಾಟದಲ್ಲಿ 102 ರನ್‌ ಪೇರಿಸಿದರು. ಕೊಹ್ಲಿ ಅರ್ಧಶತಕ (51; 63ಎ, 6ಬೌಂ) ಬಾರಿಸಿದರು. ಈಶ್ ಸೋಧಿಯ ಸ್ಪಿನ್ ಎಸೆತವೊಂದರಲ್ಲಿ  ಕೊಹ್ಲಿ ಬೌಲ್ಡ್ ಆದರು.

ಆಗ ಶ್ರೇಯಸ್ ಜೊತೆಗೂಡಿದ ರಾಹುಲ್ ತಂಡ ದೊಡ್ಡ ಮೊತ್ತ ಗಳಿಸಲು ಕಾರಣರಾದರು. ಶ್ರೇಯಸ್ 101 ಎಸೆತಗಳಲ್ಲಿ ಶತಕ ಗಳಿಸಿದರು. ರಾಹುಲ್ ಕೇವಲ 41 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಶ್ರೇಯಸ್ ಔಟಾದ ಮೇಲೆ ಕೇದಾರ್ ಜಾಧವ್ ಕೂಡ ಕೈಜೋಡಿಸಿದರು. ಇದರಿಂದಾಗಿ ಕೊನೆಯ 27 ಎಸೆತಗಳಲ್ಲಿ 55 ರನ್‌ಗಳು ಹರಿದುಬಂದವು.

13 ವೈಡ್ ಹಾಕಿದ ಬೂಮ್ರಾ

ಅಗ್ರಶ್ರೇಯಾಂಕದ ಬೌಲರ್ ಜಸ್‌ಪ್ರೀತ್ ಬೂಮ್ರಾ 13 ವೈಡ್‌ಗಳನ್ನು ಹಾಕಿದರು. ಆದರೆ ಹತ್ತು ಓವರ್‌ಗಳಲ್ಲಿ ಒಂದು ಮೇಡನ್ ಕೂಡ ಮಾಡಿದ ಅವರು ಕೊಟ್ಟಿದ್ದು 53 ರನ್‌ಗಳನ್ನು ಕೊಟ್ಟರು. ಉಳಿದವರು ಅವರಿಗಿಂತ ಹೆಚ್ಚು ರನ್‌ಗಳನ್ನೂ ಕೊಟ್ಟರು. ಅದರಲ್ಲೂ ಶಾರ್ದೂಲ್ ಠಾಕೂರ್ (80) ಮತ್ತು ಕುಲದೀಪ್ ಯಾದವ್ (84) ಹೆಚ್ಚು ದುಬಾರಿಯಾದರು. ಭಾರತದ ಬೌಲರ್‌ಗಳು ಒಟ್ಟು 24 ವೈಡ್ ಮತ್ತು ಒಂದು ನೋಬಾಲ್ ಹಾಕಿದರು. ಕಿವೀಸ್ ಬೌಲರ್‌ಗಳೂ ಒಟ್ಟು 19 ವೈಡ್‌ಗಳನ್ನು ಹಾಕಿದರು. 

ವಿರಾಟ್ ಬಳಗಕ್ಕೆ ದಂಡ

ಪಂದ್ಯದಲ್ಲಿ ಓವರ್‌ಗಳನ್ನು ಪೂರೈಸಲು ನಿಗದಿಯ  ಅವಧಿಗಿಂತ ಹೆಚ್ಚು ಸಮಯ ತೆಗೆದುಕೊಂಡ ಕಾರಣ ಭಾರತದ ಆಟಗಾರರಿಗೆ ದಂಡ ವಿಧಿಸಲಾಗಿದೆ.

ಆಟಗಾರರು ತಮ್ಮ ಪಂದ್ಯ ಶುಲ್ಕದ ಶೇ 80ರಷ್ಟನ್ನು ದಂಡವಾಗಿ ಪಾವತಿಸಬೇಕಿದೆ. ನಿಗದಿಯ ಅವಧಿಯಲ್ಲಿ ನಾಲ್ಕು ಓವರ್‌ಗಳನ್ನು ಕಡಿಮೆ ಪ್ರಯೋಗಿಸಿದ್ದರಿಂದ ವಿರಾಟ್ ಬಳಗಕ್ಕೆ ಈ ದಂಡ ವಿಧಿಸಲಾಗಿದೆ. ಐಸಿಸಿ ನಿಯಮ 2.22ರ ಪ್ರಕಾರ; ಆಟಗಾರರಿಗೆ ತಲಾ ಒಂದು ಓವರ್‌ಗೆ ಶೇ 20ರಷ್ಟು ದಂಡ ವಿಧಿಸಲಾಗಿದೆ ಎಂದು ಐಸಿಸಿ ಎಲೀಟ್ ಪ್ಯಾನಲ್ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು