ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮೈಲುಗಲ್ಲು ಸ್ಥಾಪಿಸಿದ ನಿತಿನ್‌ ಮೆನನ್‌

ಐಸಿಸಿ ಎಲೀಟ್‌ ಅಂಪೈರ್‌ಗಳ ಸಮಿತಿಯಲ್ಲಿ ಸ್ಥಾನ ಪಡೆದ ಅತೀ ಕಿರಿಯ
Last Updated 29 ಜೂನ್ 2020, 12:06 IST
ಅಕ್ಷರ ಗಾತ್ರ

ದುಬೈ: ಭಾರತದ ನಿತಿನ್‌ ಮೆನನ್‌ ಅವರು ಸೋಮವಾರ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಎಲೀಟ್‌ ಅಂಪೈರ್‌ಗಳ ಸಮಿತಿಯಲ್ಲಿ ಸ್ಥಾನ ಪಡೆದಿರುವ ಅವರು ಈ ಸಾಧನೆ ಮಾಡಿದ ಅತೀ ಕಿರಿಯ ಅಂಪೈರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನಇಂಗ್ಲೆಂಡ್‌ನ ಮೈಕಲ್‌ ಗಫ್‌ (40 ವರ್ಷ) ಈ ಸಾಧನೆ ಮಾಡಿದ್ದರು.

ನಿತಿನ್‌ ಅವರು ಇಂಗ್ಲೆಂಡ್‌ನ ನಿಗೆಲ್‌ ಲಾಂಗ್‌ ಅವರ ಬದಲು ಈ ಸಮಿತಿಯಲ್ಲಿ ಸ್ಥಾನ ಗಳಿಸಿದ್ದಾರೆ. 36 ವರ್ಷ ವಯಸ್ಸಿನ ನಿತಿನ್‌ ಅವರು ಮೂರು ಟೆಸ್ಟ್‌, 24 ಏಕದಿನ ಹಾಗೂ 16 ಟ್ವೆಂಟಿ–20 ಕ್ರಿಕೆಟ್‌ ಪಂದ್ಯಗಳಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ.

ಈ ಸಮಿತಿಯಲ್ಲಿ ಸ್ಥಾನ ಪಡೆದ ಭಾರತದ ಮೂರನೇ ಅಂಪೈರ್‌ ಅವರಾಗಿದ್ದಾರೆ. ಶ್ರೀನಿವಾಸ ವೆಂಕಟರಾಘವನ್‌ ಹಾಗೂ ಸುಂದರಂ ರವಿ ಅವರು ಈ ಮೊದಲು ಸಮಿತಿಯ ಸದ್ಯರಾಗಿ ಕೆಲಸ ಮಾಡಿದ್ದರು. ರವಿ ಅವರನ್ನು ಹೋದ ವರ್ಷ ಸಮಿತಿಯಿಂದ ಹೊರ ಹಾಕಲಾಗಿತ್ತು.

‘ವಿಶ್ವದ ಪ್ರಮುಖ ಅಂಪೈರ್‌ಗಳು ಹಾಗೂ ರೆಫರಿಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಅತೀವ ಖುಷಿಯಾಗಿದೆ. ನನ್ನ ಕನಸು ನನಸಾದ ಕ್ಷಣವಿದು’ ಎಂದು ನಿತಿನ್‌ ಸಂತಸ ವ್ಯಕ್ತಪಡಿಸಿದ್ದಾರೆ.

22ರ ಹರೆಯದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ವಿಮುಖರಾಗಿದ್ದ ನಿತಿನ್‌, 23ನೇ ವಯಸ್ಸಿನಿಂದಲೇ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾನ್ಯತೆ ಹೊಂದಿರುವ ಟೂರ್ನಿಗಳಲ್ಲಿ ಹಿರಿಯ ಅಂಪೈರ್‌ ಆಗಿ ಕೆಲಸ ಶುರುಮಾಡಿದ್ದರು.

ಅವರು ಮಧ್ಯಪ್ರದೇಶ ತಂಡದ ಪರ ಎರಡು ‘ಲೀಸ್ಟ್‌ ಎ’ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದರು.

ಐಸಿಸಿ ಕ್ರಿಕೆಟ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಜಿಯೊಫ್‌ ಅಲಾರ್ಡೈಸ್‌, ಭಾರತದ ಹಿರಿಯ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌, ಪಂದ್ಯದ ರೆಫರಿಗಳಾದ ರಂಜನ್‌ ಮದುಗಲೆ ಹಾಗೂ ಡೇವಿಡ್‌ ಬೂನ್‌ ಅವರನ್ನೊಳಗೊಂಡ ಸಮಿತಿಯು ನಿತಿನ್‌ ಅವರನ್ನು ಆಯ್ಕೆ ಮಾಡಿದೆ.

ನಿತಿನ್ ಈ ಮೊದಲು ಎಮಿರೇಟ್ಸ್‌ ಐಸಿಸಿ ಇಂಟರ್‌ನ್ಯಾಷನಲ್‌ ಅಂಪೈರ್‌ಗಳ ಸಮಿತಿಯ ಸದಸ್ಯರಾಗಿದ್ದರು. ಅವರ ತಂದೆ ನರೇಂದ್ರ ಮೆನನ್‌ ಅವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್‌ ಆಗಿ ಕೆಲಸ ಮಾಡಿದ್ದರು.

‘ಅಂತರರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಕನಸು ಕಂಡಿದ್ದೆ. ಆದರೆ ಅದು ಈಡೇರಲಿಲ್ಲ. 23ನೇ ವಯಸ್ಸಿನಿಂದಲೇ ಅಂಪೈರ್‌ ವೃತ್ತಿ ಆರಂಭಿಸಿದ್ದೆ. 13 ವರ್ಷಗಳ ಕಾಲ ಈ ಕಾಯಕವನ್ನು ಶ್ರದ್ಧೆಯಿಂದ ನಿರ್ವಹಿಸಿಕೊಂಡು ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT