ಶುಕ್ರವಾರ, ಜನವರಿ 22, 2021
24 °C

IND vs AUS Test: ಪೂಜಾರ ಪತನ, ನಾಯಕ ಕೊಹ್ಲಿ ಆಸರೆ; ಭಾರತ 107/3

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಗುರುವಾರ ಇಲ್ಲಿನ ಅಡಿಲೇಡ್ ಓವಲ್‌ನಲ್ಲಿ ಆರಂಭವಾಗಿರುವ ಮೊದಲ ಪಿಂಕ್ ಬಾಲ್  ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ, ಆರಂಭಿಕ ಆಘಾತ ಎದುರಿಸಿರುವ ಟೀಮ್ ಇಂಡಿಯಾ ಪ್ರತಿ ಹೋರಾಟ ನೀಡುತ್ತಿದೆ. 

ತಾಜಾ ವರದಿಗಳ ಪ್ರಕಾರ ಟೀ ಬ್ರೇಕ್ ವೇಳೆಗೆ ಟೀಮ್ ಇಂಡಿಯಾ  55 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ. ವಿರಾಮಕ್ಕೆ ಕೆಲವೇ ಸಮಯ ಬಾಕಿ ಉಳಿದಿರುವಾಗ ಸೆಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ವಿಕೆಟ್ ಕಳೆದುಕೊಂಡಿರುವುದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು.  

ಇದೀಗ ಕ್ರೀಸಿನಲ್ಲಿರುವ ನಾಯಕ ವಿರಾಟ್ ಕೊಹ್ಲಿ (39*) ಹಾಗೂ ಉಪನಾಯಕ ಅಜಿಂಕ್ಯ ರಹಾನೆ (2*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಇದನ್ನೂ ಓದಿ: 

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮಿಚೆಲ್ ಸ್ಟಾರ್ಕ್ ಎಸೆದ ಪಂದ್ಯದ ಮೊದಲ ಓವರ್‌ನಲ್ಲೇ ಕ್ಲೀನ್ ಬೌಲ್ಡ್ ಆದ ಪೃಥ್ವಿ ಶಾ, ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 

ಈ ಹಂತದಲ್ಲಿ ಜೊತೆಗೂಡಿದ ಮಯಂಕ್ ಅಗರವಾಲ್ ಹಾಗೂ ಚೇತೇಶ್ವರ ಪೂಜಾರ ಉತ್ತಮ ಜೊತೆಯಾಟ ಕಟ್ಟುವ ಸೂಚನೆ ನೀಡಿದರು. ಆದರೆ 40 ಎಸೆತಗಳಲ್ಲಿ 17 ರನ್ ಗಳಿಸಿದ ಮಯಂಕ್ ವಿಕೆಟ್ ಉಡಾಯಿಸಿದ ಪ್ಯಾಟ್ ಕಮಿನ್ಸ್ ಭಾರತಕ್ಕೆ ಎರಡನೇ ಆಘಾತ ನೀಡಿದರು.

ಡಿನ್ನರ್ ವಿರಾಮದ ಹೊತ್ತಿಗೆ ಭಾರತ 25 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಜೊತೆಗೂಡಿದ ಭಾರತದ ಅನುಭವಿ ಜೋಡಿಗಳಾದ ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರು. 

ಇದನ್ನೂ ಓದಿ: 

ಈ ಜೋಡಿ ದಿನದಾಟದ ಎರಡನೇ ಅವಧಿಯಲ್ಲಿ ತಂಡವನ್ನು ಎಚ್ಚರಿಕೆಯಿಂದ ಮುನ್ನಡೆಸಿದರು. ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ ಹಾಗೂ ಪೂಜಾರ ತೃತೀಯ ವಿಕೆಟ್‌ಗೆ 68 ರನ್‌ಗಳ ಜೊತೆಯಾಟ ನೀಡಿದರು. ಈ ನಡುವೆ ಅರ್ಧಶತಕದ ಸನಿಹದಲ್ಲಿ ಚೇತೇಶ್ವರ ಪೂಜಾರ ಎಡವಿ ಬಿದ್ದರು. 160 ಎಸೆತಗಳನ್ನು ಎದುರಿಸಿದ ಪೂಜಾರ ಎರಡು ಬೌಂಡರಿಗಳಿಂದ 43 ರನ್ ಗಳಿಸಿದರು.

ಬಳಿಕ ಉಪನಾಯಕ ಅಜಿಂಕ್ಯ ರಹಾನೆ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.   

ಆಡುವ ಬಳಗ ಇಂತಿದೆ: 

ಭಾರತ: ವಿರಾಟ್ ಕೊಹ್ಲಿ (ನಾಯಕ), ಪೃಥ್ವಿ ಶಾ, ಮಯಂಕ್ ಅಗರವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ: ಜೋ ಬರ್ನ್ಸ್, ಮ್ಯಾಥ್ಯೂ ವೇಡ್, ಮಾರ್ನಸ್ ಲಾಬುಷೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಟಿಮ್ ಪೇನ್ (ನಾಯಕ, ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನಥನ್ ಲಿಯನ್, ಜೋಶ್ ಹ್ಯಾಜಲ್‌ವುಡ್. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು