ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಡರ್‌– ಗಾವಸ್ಕರ್‌ ಟೆಸ್ಟ್: ಶಮಿ, ಅಶ್ವಿನ್ ದಾಳಿಗೆ ಕುಸಿದ ಆಸ್ಟ್ರೇಲಿಯಾ

Last Updated 17 ಫೆಬ್ರುವರಿ 2023, 19:17 IST
ಅಕ್ಷರ ಗಾತ್ರ

ನವದೆಹಲಿ: ಪಂದ್ಯದ ಮೊದಲ ದಿನವೇ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುತ್ತಿರುವ ಪಿಚ್‌ನಲ್ಲಿ ಮಧ್ಯಮವೇಗಿ ಮೊಹಮ್ಮದ್ ಶಮಿ ಮಿಂಚಿದರು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 263 ರನ್‌ಗಳ ಸಾಧಾರಣ ಮೊತ್ತ ಗಳಿಸಿ ಆಲೌಟ್ ಆಯಿತು. ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ (81; 125ಎ, 4X12, 6X1) ಹಾಗೂ ಪೀಟರ್ ಹ್ಯಾಂಡ್ಸ್‌ಕಂಬ್ (ಔಟಾಗದೆ 72, 142ಎ, 4X9) ಅವರಿಬ್ಬರೂ ಅರ್ಧಶತಕ ಗಳಿಸಿದ್ದರಿಂದ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದು ತಪ್ಪಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಭಾರತ, ದಿನದಾಟದ ಮುಕ್ತಾಯಕ್ಕೆ 9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್‌ ಗಳಿಸಿತು. ನಾಯಕ ರೋಹಿತ್ ಶರ್ಮಾ (13) ಹಾಗೂ ಕೆ.ಎಲ್. ರಾಹುಲ್ (4) ಕ್ರೀಸ್‌ ನಲ್ಲಿದ್ದಾರೆ.

ಸ್ವಿಂಗ್ ಮತ್ತು ಸ್ಲೋ ಎಸೆತಗಳನ್ನು ನಿಖರವಾಗಿ ಪ್ರಯೋಗಿಸಿದ ಶಮಿ (60ಕ್ಕೆ4) ಬ್ಯಾಟರ್‌ಗಳನ್ನು ವಿಚಲಿತಗೊಳಿಸಿದರು. ಶಮಿಗೆ ಅವರೊಂದಿಗೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಹಾಗೂ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ತಲಾ ಮೂರು ವಿಕೆಟ್ ಗಳಿಸಿ ಮಿಂಚಿದರು.

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉಸ್ಮಾನ್ ಹಾಗೂ ಡೇವಿಡ್ ವಾರ್ನರ್ (15) ಮೊದಲ ವಿಕೆಟ್‌ಗೆ 50 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ 16ನೇ ಓವರ್‌ನಲ್ಲಿ ವಾರ್ನರ್ ವಿಕೆಟ್ ಗಳಿಸಿದ ಶಮಿ ಜೊತೆಯಾಟವನ್ನು ಮುರಿದರು. 22ನೇ ಓವರ್‌ನಲ್ಲಿ ಅಶ್ವಿನ್ ಮೋಡಿಗೆ ಮಾರ್ನಸ್‌ ಲಾಬುಷೇನ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಸ್ಮಿತ್ ಖಾತೆಯನ್ನೂ ತೆರೆಯದೇ ಔಟಾದರು.

ರಾಹುಲ್ ಸಾಹಸ: ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಹರಸಾಹಸ ಪಡುತ್ತಿರುವ ರಾಹುಲ್ ಈ ಇನಿಂಗ್ಸ್‌ನಲ್ಲಿ ಎರಡು ಕಠಿಣ ಕ್ಯಾಚ್‌ಗಳನ್ನು ಪಡೆದರು. ತಾಳ್ಮೆಯಿಂದ ಆಡುತ್ತಿದ್ದ ಉಸ್ಮಾನ್ ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆದರೆ ಟ್ರಾವಿಸ್ ಹೆಡ್ (12 ರನ್) ರಟ್ಟೆ ಅರಳಿಸಲು ಶಮಿ ಅವಕಾಶ ಕೊಡಲಿಲ್ಲ. ಹೆಡ್ ಬ್ಯಾಟ್‌ಗೆ ತಗುಲಿ ಎತ್ತರಕ್ಕೆ ಹಾರಿದ ಚೆಂಡನ್ನು 2ನೇ ಸ್ಲಿಪ್‌ನಲ್ಲಿದ್ದ ರಾಹುಲ್ ನೆಗೆದು ಹಿಡಿತಕ್ಕೆ ಪಡೆದರು.

ಊಟದ ವಿರಾಮದ ನಂತರವೂ ಉಸ್ಮಾನ್ ಆಟ ಕಳೆಗಟ್ಟಿತು. ಆದರೆ ಜಡೇಜ ಹಾಕಿದ 46ನೇ ಓವರ್‌ನಲ್ಲಿ ಉಸ್ಮಾನ್ ರಿವರ್ಸ್‌ ಸ್ವೀಪ್ ಮಾಡಿದ ಚೆಂಡನ್ನು ಪಾಯಿಂಟ್ ಫೀಲ್ಡರ್‌ ರಾಹುಲ್ ಡೈವ್ ಮಾಡಿ ಒಂದೇ ಕೈಯಲ್ಲಿ ಹಿಡಿತಕ್ಕೆ ಪಡೆದರು. ಟಿ.ವಿ. ಕಾಮೆಂಟ್ರಿಯಲ್ಲಿ ರವಿಶಾಸ್ತ್ರಿ ಮೆಚ್ಚುಗೆ ಮಳೆ ಸುರಿಸಿದರು. ಅಲೆಕ್ಸ್ ಕ್ಯಾರಿ ವಿಕೆಟ್ ಕೂಡ ಅಶ್ವಿನ್ ಪಾಲಾಯಿತು. ಆದರೆ ವಿಕೆಟ್‌ಕೀಪರ್–ಬ್ಯಾಟರ್ ಪೀಟರ್ ಹ್ಯಾಂಡ್ಸ್‌ಕಂಬ್ ಆತಿಥೇಯ ಬೌಲರ್‌ ಗಳಿಗೆ ತಡೆಯೊಡ್ಡಿದರು. ಅವರು ನಾಯಕ ಪ್ಯಾಟ್ ಅವರೊಂದಿಗೆ 7ನೇ ವಿಕೆಟ್ ಜೊತೆಯಾಟದಲ್ಲಿ 59 ರನ್ ಸೇರಿಸಿದರು. ಇದರಿಂದಾಗಿ ತಂಡವು ಇನ್ನೂರರ ಗಡಿ ದಾಟಿತು. ಕಮಿನ್ಸ್ ವಿಕೆಟ್ ಉರುಳಿಸಿದ ಜಡೇಜ ಜೊತೆಯಾಟ ಮುರಿದರು. ಪೀಟರ್ ಸಾಧ್ಯವಾದಷ್ಟು ರನ್ ಸೇರಿಸುವ ಪ್ರಯತ್ನಿಸಿದರು. ಇನ್ನೊಂದು ಕಡೆಯಿಂದ ವಿಕೆಟ್‌ಗಳು ಪತನವಾದವು.

ಸಂಕ್ಷಿಪ್ತ ಸ್ಕೋರು: (ಮೊದಲ ಇನಿಂಗ್ಸ್)– ಆಸ್ಟ್ರೇಲಿಯಾ: 78.4 ಓವರ್‌ಗಳಲ್ಲಿ 263 (ಉಸ್ಮಾನ್ ಖ್ವಾಜಾ 81, ಪೀಟರ್ ಹ್ಯಾಂಡ್ಸ್‌ಕಂಬ್ ಔಟಾಗದೆ 72, ಪ್ಯಾಟ್ ಕಮಿನ್ಸ್ 33, ಮೊಹಮ್ಮದ್ ಶಮಿ 60ಕ್ಕೆ4, ಅಶ್ವಿನ್ 57ಕ್ಕೆ3, ರವೀಂದ್ರ ಜಡೇಜ 68ಕ್ಕೆ3) ಭಾರತ: 9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 (ರೋಹಿತ್ ಬ್ಯಾಟಿಂಗ್ 13, ರಾಹುಲ್ ಬ್ಯಾಟಿಂಗ್ 4)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT