ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲೆನ್ ಶತಕ; ಆಸ್ಟ್ರೇಲಿಯಾಗೆ ಚಾರಿತ್ರಿಕ ಜಯ

ಟ್ವೆಂಟಿ–20 ಕ್ರಿಕೆಟ್: ವಿರಾಟ್ –ಧೋನಿ ಶತಕದ ಜೊತೆಯಾಟ ವ್ಯರ್ಥ; ಸರಣಿ ಸಮಬಲದ ಕನಸು ಭಗ್ನ
Last Updated 27 ಫೆಬ್ರುವರಿ 2019, 19:05 IST
ಅಕ್ಷರ ಗಾತ್ರ

ಬೆಂಗಳೂರು: ಬುಧವಾರ ರಾತ್ರಿ ಚಿನ್ನಸ್ವಾಮಿ ಅಂಗಳದಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ಮಹೇಂದ್ರಸಿಂಗ್ ಧೋನಿ ಸೇರಿ ಕಟ್ಟಿದ್ದ ಕನಸಿನ ಗೋಪುರವನ್ನು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ನುಚ್ಚುನೂರು ಮಾಡಿದರು.

ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಮೂರನೇ ಶತಕ ದಾಖಲಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್ (ಅಜೇಯ 113;55ಎಸೆತ, 7ಬೌಂಡರಿ, 9 ಸಿಕ್ಸರ್ ) ಅಬ್ಬರದಿಂದ ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ಇದೇ ಮೊದಲ ಸಲ 2–0ಯಿಂದ ಸರಣಿ ಗೆದ್ದ ದಾಖಲೆ ನಿರ್ಮಿಸಿತು. 2009ರಿಂದ ಇಲ್ಲಿಯವರೆಗೆ ನಾಲ್ಕು ಸರಣಿಗಳನ್ನು ಆಸ್ಟ್ರೇಲಿಯಾ ಭಾರತದಲ್ಲಿ ಆಡಿದೆ. ಉಭಯ ತಂಡಗಳು ಬೆಂಗಳೂರಿನಲ್ಲಿ ಮೊದಲ ಬಾರಿ ಮುಖಾಮುಖಿಯಾದ ಪಂದ್ಯ ಇದು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪ್ರವಾಸಿ ಬಳಗದ ಬೌಲರ್‌ಗಳು ಮೇಲುಗೈ ಸಾಧಿಸದಂತೆ ನೋಡಿಕೊಂಡವರು ಭಾರತದ ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಮತ್ತು ಮಹೇಂದ್ರಸಿಂಗ್ ಧೋನಿ. ಈ ಮೂವರ ಮಿಂಚಿನ ಆಟದ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 190 ರನ್‌ಗಳನ್ನು ಗಳಿಸಿತು. ಆದರೆ ಈ ಉತ್ತಮ ಮೊತ್ತದ ಬಲದ ಮೇಲೆ ತಂಡಕ್ಕೆ ಜಯದ ಕಿರೀಟ ತೊಡಿಸುವಲ್ಲಿ ಆತಿಥೇಯ ಬೌಲರ್‌ಗಳು ವಿಫಲರಾದರು. ಗ್ಲೆನ್‌ ಮ್ಯಾಕ್ಸ್‌ವೆಲ್ ಅವರನ್ನು ನಿಯಂತ್ರಿಸಲು ಪರದಾಡಿದರು. ಇದರಿಂದಾಗಿ ಇನಿಂಗ್ಸ್‌ ಮುಗಿಯಲು ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ 7 ವಿಕೆಟ್‌ಗಳ ಜಯದ ಸಂಭ್ರಮ ಆಚರಿಸಿತು.

ವಿಶಾಖಪಟ್ಟಣದಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಭಾರತವು 126 ರನ್‌ಗಳ ಸಾಧಾರಣ ಗುರಿಯನ್ನು ಆಸ್ಟ್ರೇಲಿಯಾಕ್ಕೆ ನೀಡಿತ್ತು. ಆದರೆ, ಬೌಲರ್‌ಗಳು ಬಿಗಿ ದಾಳಿಯಿಂದಾಗಿ ಪ್ರವಾಸಿ ತಂಡವು ಕೊನೆಯ ಎಸೆತದಲ್ಲಿ ಗೆಲುವಿನ ದಡ ಮುಟ್ಟಿತ್ತು. ಆ ಪಂದ್ಯದಲ್ಲಿಯೂ ಗ್ಲೆನ್‌ ಅರ್ಧಶತಕ ಬಾರಿಸಿದ್ದರು. ಅಲ್ಲಿ ಭಾರತ ಸೋತರೂ ಬೌಲರ್‌ಗಳ ಆಟ ಮೆಚ್ಚುಗೆ ಗಳಿಸಿತ್ತು. ಆದರೆ ಇಲ್ಲಿ ದೊಡ್ಡ ಮೊತ್ತವಿದ್ದೂ ಬೌಲರ್‌ಗಳು ಮಂಕಾದರು. ಮಯಂಕ್ ಮಾರ್ಕಂಡೆ ಬದಲಿಗೆ ಸ್ಥಾನ ಪಡೆದ ವಿಜಯಶಂಕರ್ ಎರಡು ಮತ್ತು ಉಮೇಶ್ ಯಾದವ್ ಬದಲಿಗೆ ಸ್ಥಾನ ಪಡೆದ ಸಿದ್ಧಾರ್ಥ್ ಕೌಲ್ ಒಂದು ವಿಕೆಟ್ ಪಡೆದರು. ಆದರೆ, ಮ್ಯಾಕ್ಸ್‌ವೆಲ್ ಅವರ ಆಟಕ್ಕೆ ತಡೆಯೊಡ್ಡುವಲ್ಲಿ ಯಾವ ಬೌಲರ್‌ಗಳೂ ಸಫಲರಾಗಲಿಲ್ಲ. ಗ್ಲೆನ್ ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್ ಅವರು ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 99 ರನ್‌ ಗಳಿಸಿದರು.

ವಿರಾಟ್– ಧೋನಿ ಶತಕದ ಜೊತೆಯಾಟ:ಆತಿಥೇಯ ಬಳಗವು 11 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 74 ರನ್‌ ಗಳಿಸಿ ಸಂಕಷ್ಟದಲ್ಲಿದ್ದಾಗ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ (ಔಟಾಗದೆ 72; 38ಎಸೆತ, 2ಬೌಂಡರಿ, 6 ಸಿಕ್ಸರ್) ಮತ್ತು ಮಹೇಂದ್ರಸಿಂಗ್ ಧೋನಿ (40;23ಎಸೆತ, 3ಬೌಂಡರಿ, 3 ಸಿಕ್ಸರ್) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 100 ರನ್‌ ಸೇರಿಸಿದರು. ವಿರಾಟ್ ಕೇವಲ 28 ಎಸೆತಗಳಲ್ಲಿ 50 ರನ್‌ ಗಳಿಸಿದರು. ಇದರೊಂದಿಗೆ ಟ್ವೆಂಟಿ–20 ಕ್ರಿಕೆಟ್‌ನಲ್ಲಿ 21ನೇ ಅರ್ಧಶತಕ ದಾಖಲಿಸಿದರು. 16ನೇ ಓವರ್‌ನಲ್ಲಿ ‘ಸಿಕ್ಸರ್‌ ಹ್ಯಾಟ್ರಿಕ್’ ಗಳಿಸಿದ ಅವರ ಆಟ ಪ್ರೇಕ್ಷಕರ ಗ್ಯಾಲರಿಯಲ್ಲಿ ಮಿಂಚಿನ ಸಂಚಲನ ಮೂಡಿಸಿತು.

ಇವರಿಬ್ಬರ ಆಟದ ವೇಗಕ್ಕೆ ಕೊನೆಯ ಐದು ಓವರ್‌ಗಳಲ್ಲಿ 77 ರನ್‌ಗಳು ಸೇರಿದವು. 20ನೇ ಓವರ್‌ನ ಮೊದಲ ಎಸೆತದಲ್ಲಿ ಧೋನಿ ಔಟಾದ ಮೇಲೆ ಬಂದ ದಿನೇಶ್ ಕಾರ್ತಿಕ್ ಕೂಡ ಎರಡು ಬೌಂಡರಿ ಹೊಡೆದರು.

ರಾಹುಲ್ ‘ಮಿನಿ ಹೆಲಿಕಾಫ್ಟರ್‌’: ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದಿದ್ದ ಕೆ.ಎಲ್. ರಾಹುಲ್ ತವರಿನಂಗಳದಲ್ಲಿ ಅಭಿಮಾನಿಗಳ ಮನ ಗೆದ್ದರು. 26 ಎಸೆತಗಳಲ್ಲಿ 47 ರನ್ ಗಳಿಸಿದ ಅವರು ತಂಡಕ್ಕೆ ಉತ್ತಮ ಆರಂಭ ನೀಡಿದರು. ಅವರು ಐದನೇ ಓವರ್‌ನಲ್ಲಿ ಎರಡು ಮತ್ತು ಆರನೇ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಎತ್ತಿದರು. ಅದರಲ್ಲೂ ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ಅವರು ಡೀಪ್‌ ಮಿಡ್‌ವಿಕೆಟ್‌ಗೆ ಎತ್ತಿದ ಸಿಕ್ಸರ್‌ ಧೋನಿಯ ‘ಹೆಲಿಕಾಫ್ಟರ್‌ ಶಾಟ್‌’ ನೆನಪಿಗೆ ತಂದಿತ್ತು.

ರೋಹಿತ್ ಶರ್ಮಾ ಬದಲಿಗೆ ಸ್ಥಾನ ಪಡೆದ ಶಿಖರ್ ಧವನ್ ಜೊತೆಗೆ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ ರಾಹುಲ್ 61 ರನ್ ಸೇರಿಸಿದರು. ಎಂಟನೇ ಓವರ್‌ನಲ್ಲಿ ಅವರು ಅಪ್ಪರ್ ಕಟ್ ಮೂಲಕ ಚೆಂಡನ್ನು ಬೌಂಡರಿಗೆರೆ ದಾಟಿಸಿ ಅರ್ಧಶತಕದ ಗಡಿ ಮುಟ್ಟಲು ಯತ್ನಿಸಿದರು. ಆದರೆ ಥರ್ಡ್‌ಮ್ಯಾನ್ ಫೀಲ್ಡರ್‌ ಜೇಸನ್ ಬೆಹ್ರಾನ್‌ಡಾರ್ಫ್‌ಗೆ ಕ್ಯಾಚಿತ್ತರು.

ಭಾರತ 4ಕ್ಕೆ190 (20 ಓವರ್‌ಗಳಲ್ಲಿ)

ಕೆ.ಎಲ್ . ರಾಹುಲ್ ಸಿ ಜೇಸನ್ ಬೆಹ್ರನ್‌ಡಾರ್ಫ್‌ ಬಿ ಕೌಲ್ಟರ್ ನೈಲ್ 47
ಶಿಖರ್ ಧವನ್ ಸಿ ಮಾರ್ಕಸ್ ಸ್ಟೊಯಿನಿಸ್ ಬಿ ಜೇನನ್ ಬೆಹ್ರನ್‌ಡಾರ್ಫ್ 11
ವಿರಾಟ್ ಕೊಹ್ಲಿ ಔಟಾಗದೆ 72
ರಿಷಭ್ ಪಂತ್ ಸಿ ಜೇ ರಿಚರ್ಡ್ಸನ್ ಬಿ ಡಾರ್ಸಿ ಶಾರ್ಟ್ 01
ಮಹೇಂದ್ರಸಿಂಗ್ ಧೋನಿ ಸಿ ಆ್ಯರನ್ ಫಿಂಚ್ ಬಿ ಪ್ಯಾಟ್ ಕಮಿನ್ಸ್ 40
ದಿನೇಶ್ ಕಾರ್ತಿಕ್ ಔಟಾಗದೆ 08

ಇತರೆ: ವಿಕೆಟ್ ಪತನ: 1–61 (ರಾಹುಲ್; 7.1), 2–70 (ಶಿಖರ್; 9.2) , 3–74 (ರಿಷಭ್; 10.5), 4–174 (ಧೋನಿ; 19.1)

ಬೌಲಿಂಗ್
ಜೇಸನ್ ಬೆಹ್ರನ್‌ಡಾರ್ಫ್‌ 3–0– 17 –1 , ಜೇ ರಿಚರ್ಡ್ಸನ್ 4–0–45–0 (ವೈಡ್ 1) ನೇಥನ್ ಕೌಲ್ಟರ್ ನೈಲ್ 3–0–33–1 (ವೈಡ್ 2), ಪ್ಯಾಟ್ ಕಮಿನ್ಸ್‌ 3–0–40–1 (ವೈಡ್ 2), ಆ್ಯಡಂ ಜಂಪಾ 4–0–23–0, ಡಾರ್ಸಿ ಶಾರ್ಟ್ 3–0–29–1.

ಆಸ್ಟ್ರೇಲಿಯಾ, 3ಕ್ಕೆ194 (19.4 ಓವರ್‌ಗಳಲ್ಲಿ)

ಡಾರ್ಸಿ ಶಾರ್ಟ್ ಸಿ ರಾಹುಲ್ ಬಿ ವಿಜಯಶಂಕರ್ 40

ಮಾರ್ಕಸ್ ಸ್ಟೊಯಿನಿಸ್ ಬಿ ಸಿದ್ಧಾರ್ಥ್ ಕೌಲ್ 07

ಆ್ಯರನ್ ಫಿಂಚ್ ಸಿ ಶಿಖರ್ ಧವನ್ ಬಿ ವಿಜಯಶಂಕರ್ 08

ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 113

ಪೀಟರ್ ಹ್ಯಾಂಡ್ಸ್‌ಕಂಬ್ ಔಟಾಗದೆ 20

ಇತರೆ; 6 (ಲೆಗ್‌ಬೈ 1, ವೈಡ್ 4, ನೋಬಾಲ್ 1)

ವಿಕೆಟ್ ಪತನ: 1–13 (ಮಾರ್ಕಸ್;2.2), 2–22 (ಫಿಂಚ್; 3.6), 3–95 (ಶಾರ್ಟ್: 11.1).

ಬೌಲಿಂಗ್

ವಿಜಯ ಶಂಕರ್ 4–0–38–2 (ವೈಡ್ 1), ಜಸ್‌ಪ್ರೀತ್ ಬೂಮ್ರಾ 4––0–30–0, ಸಿದ್ಧಾರ್ಥ್ ಕೌಲ್ 3.4–0–45–1 (ನೋಬಾಲ್ 1), ಯಜುವೇಂದ್ರ ಚಾಹಲ್ 4–0–47–0 (ವೈಡ್ 2), ಕೃಣಾಲ್ ಪಾಂಡ್ಯ 4–0–33–0 (ವೈಡ್ 1)

ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 7 ವಿಕೆಟ್‌ಗಳಿಂದ ಜಯ ಮತ್ತು 2–0ಯಿಂದ ಸರಣಿ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT