ಭಾರತ–ಆಸ್ಟ್ರೇಲಿಯಾ ಮಹಿಳಾ ಟಿ20 2ನೇ ಪಂದ್ಯ: ಗೆಲುವಿನ ಛಲದಲ್ಲಿ ಭಾರತ

ಗೋಲ್ಡ್‌ಕೋಸ್ಟ್: ಜೆಮಿಮಾ ರಾಡ್ರಿಗಸ್ ಲಯಕ್ಕೆ ಮರಳಿರುವುದರಿಂದ ಭಾರತ ತಂಡದ ಬಲ ವೃದ್ಧಿಸಿದ್ದು, ಶನಿವಾರ ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಗೆಲುವಿನ ಛಲದೊಂದಿಗೆ ಕಣಕ್ಕಿಳಿಯಲಿದೆ.
ಮಳೆಯಿಂದಾಗಿ ರದ್ದಾಗ ಸರಣಿಯ ಮೊದಲ ಪಂದ್ಯದಲ್ಲಿ ಜೆಮಿಮಾ 36 ಎಸೆತಗಳಲ್ಲಿ 49 ರನ್ ಗಳಿಸಿ ಮಿಂಚಿದ್ದರು. ‘ದಿ ಹಂಡ್ರೆಡ್‘ ಟೂರ್ನಿಯಲ್ಲಿ ತೋರಿದ ಸಾಮರ್ಥ್ಯವನ್ನು ಅವರು ಇಲ್ಲಿಯೂ ಮುಂದುವರಿಸಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಕೂಡ ಉಪಯುಕ್ತ ಕಾಣಿಕೆ ನೀಡಬಲ್ಲರು.
ಬೆರಳಿನ ಗಾಯದಿಂದಾಗಿ ಏಕದಿನ ಸರಣಿ ಹಾಗೂ ಟೆಸ್ಟ್ ಪಂದ್ಯದಲ್ಲಿ ಆಡದಿದ್ದ ಹರ್ಮನ್‌ಪ್ರೀತ್ ಕೌರ್ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಯುವ ಆಟಗಾರ್ತಿಯರಾದ ಯಷ್ಟಿಕಾ ಭಾಟಿಯಾ ಹಾಗೂ ರಿಚಾ ಘೋಷ್ ಅವರಿಗೆ ಮಧ್ಯಮಕ್ರಮಾಂಕದಲ್ಲಿ ಮಿಂಚಲು ಈ ಪಂದ್ಯವು ಉತ್ತಮ ಅವಕಾಶವಾಗಿದೆ.
ವೇಗಿ ಶಿಖಾ ಪಾಂಡೆ ಬೌಲಿಂಗ್ ವಿಭಾಗವನ್ನು ಮುನ್ನಡೆಸುವರು. ರೇಣುಕಾ ಸಿಂಗ್, ಮೇಘನಾ ಸಿಂಗ್ ಮತ್ತು ಸ್ಪಿನ್ನರ್‌ಗಳಾದ ಪೂಜಾ ವಸ್ತ್ರಕಾರ್, ರಾಜೇಶ್ವರಿ ಗಾಯಕವಾಡ್ ಮತ್ತು ದೀಪ್ತಿ ಶರ್ಮಾ ಕೂಡ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ.
ಅನುಭವಿ ಆಟಗಾರ್ತಿಯರಾದ ಎಲಿಸ್ ಪೆರಿ, ಅಲಿಸಾ ಹೀಲಿ, ನಾಯಕಿ ಮೆಗ್ ಲ್ಯಾನಿಂಗ್, ಆ್ಯಶ್ಲೆ ಗಾರ್ಡನರ್ ಮತ್ತು ಬೇಥ್ ಮೂನಿ ಅವರಿಂದ ಕೂಡಿರುವ ಆಸ್ಟ್ರೇಲಿಯಾ ಕೂಡ ಬಲಿಷ್ಠವಾಗಿದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು.
ಪಂದ್ಯ ಆರಂಭ: ಮಧ್ಯಾಹ್ನ 1.40 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸೋನಿ ಸಿಕ್ಸ್, ಸೋನಿ ಟೆನ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.