ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟವೂ ಒಂದೇ ಒಂದು ಎಸೆತ ಕಾಣದೆ ರದ್ದುಗೊಂಡಿದೆ.
ಭಾರಿ ಮಳೆಯಿಂದಾಗಿ ಇಲ್ಲಿನ ಗ್ರೀನ್ ಪಾರ್ಕ್ ಮೈದಾನ ತೇವಗೊಂಡಿರುವ ಹಿನ್ನೆಲೆಯಲ್ಲಿ ಪಂದ್ಯ ಪುನರಾರಂಭಕ್ಕೆ ಅಡಚಣೆಯಾಗಿ ಪರಿಣಮಿಸಿದೆ.
ಹಲವು ಬಾರಿ ಪಿಚ್ ಹಾಗೂ ಮೈದಾನ ಪರಿಶೀಲಿಸಿದ ಅಂಪೈರ್‌ಗಳು ಕೊನೆಗೆ ಮೈದಾನ ಆಡಲು ಯೋಗ್ಯವಲ್ಲದ ಕಾರಣ ಮಧ್ಯಾಹ್ನ 2 ಗಂಟೆ ಹೊತ್ತಿಗೆ ದಿನದಾಟ ರದ್ದುಗೊಳಿಸಲು ನಿರ್ಧರಿಸಿದ್ದಾರೆ.
ಇದರೊಂದಿಗೆ ಸತತ ಎರಡನೇ ದಿನವೂ ಒಂದೇ ಒಂದು ಎಸೆತ ಕಾಣದೇ ಪಂದ್ಯ ಸ್ಧಗಿತಗೊಂಡಿದೆ.
ಮೊದಲ ದಿನದಾಟದಲ್ಲಿ ಕೇವಲ 35 ಓವರ್‌ಗಳ ಆಟ ನಡೆದಿತ್ತು. ಬಾಂಗ್ಲಾದೇಶ ಮೂರು ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು.
ಇನ್ನೆರಡು ದಿನಗಳು ಬಾಕಿ ಉಳಿದಿರುವಂತೆಯೇ ಈ ಪಂದ್ಯದಲ್ಲಿ ಫಲಿತಾಂಶ ದಾಖಲಿಸಲು ಸಾಧ್ಯವೇ ಎಂಬ ಅನುಮಾನ ಮೂಡಿದೆ. ಇದರಿಂದ ಅಭಿಮಾನಿಗಳಿಗೂ ನಿರಾಶೆಯಾಗಿದೆ.