ಶನಿವಾರ, ನವೆಂಬರ್ 27, 2021
21 °C

IND vs NZ Test: ಅಯ್ಯರ್–ಜಡೇಜಾ ಶತಕದ ಜೊತೆಯಾಟ; ಮೊದಲದಿನ 258 ರನ್ ಗಳಿಸಿದ ಭಾರತ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಒಂದನೇ ದಿನದಾಟ ಮುಕ್ತಾಯವಾಗಿದ್ದು, ಆತಿಥೇಯ ಭಾರತ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡು 258 ರನ್ ಗಳಿಸಿದೆ.

ಕಾನ್ಪುರದ ಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶುಭಮನ್ ಗಿಲ್ ಜೊತೆ ಇನಿಂಗ್ಸ್ ಆರಂಭಿಸಿದ ಮಯಂಕ್ ಅಗರವಾಲ್ ಕೇವಲ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗಿಳಿದ ಟೆಸ್ಟ್ ಪರಿಣತ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ, ಗಿಲ್ ಜೊತೆಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿದರು.

ಗಿಲ್ (52) ಅರ್ಧಶತಕ ಬಾರಿಸಿ ಔಟಾದರೆ, ಪೂಜಾರ ಆಟ 26 ರನ್ ಗಳಿಗೆ ಸೀಮಿತವಾಯಿತು. ನಾಯಕ ಅಜಿಂಕ್ಯ ರಹಾನೆ 35 ರನ್‌ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಬಳಿಕ ಜೊತೆಯಾದ ಉದಯೋನ್ಮುಕ ಆಟಗಾರ ಶ್ರೇಯಸ್ ಅಯ್ಯರ್ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಆಟ ಕಳೆಗಟ್ಟಿತು.

ಅಯ್ಯರ್–ಜಡೇಜಾ ಶತಕದ ಜೊತೆಯಾಟ
ನಾಯಕ ವಿರಾಟ್ ಕೊಹ್ಲಿ, ಅನುಭವಿ ರೋಹಿತ್ ಶರ್ಮಾ ಮತ್ತು ಗಾಯಾಳು ಕೆ.ಎಲ್. ರಾಹುಲ್ ಈ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಕೊಹ್ಲಿ ಜಾಗದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದ ಅಯ್ಯರ್, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಗಳಿಸಿದ ಸಾಧನೆ ಮಾಡಿದರು.

ಅವರಿಗೆ ಉತ್ತಮ ಬೆಂಬಲ ನೀಡಿದ ರವೀಂದ್ರ ಜಡೇಜಾ ಕೂಡ ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ತಮ್ಮ 17ನೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ತಂಡದ ಮೊತ್ತ ನಾಲ್ಕು ವಿಕೆಟ್ ನಷ್ಟಕ್ಕೆ 145ರನ್ ಆಗಿದ್ದಾಗ ಜೊತೆಯಾದ ಈ ಇಬ್ಬರು ಮುರಿಯದ ಐದನೇ ವಿಕೆಟ್‌ಗೆ 113 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಅದಕ್ಕಾಗಿ ಅವರು ಬರೋಬ್ಬರಿ 34.4 ಓವರ್‌ವರೆಗೆ ನೆಲ ಕಚ್ಚಿ ಆಡಿದರು.

ಅಯ್ಯರ್‌ 75 ರನ್‌ ಮತ್ತು ರವೀಂದ್ರ 50 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

26 ವರ್ಷದ ಅಯ್ಯರ್ ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ 2017ರಲ್ಲಿ ಪದಾರ್ಪಣೆ ಮಾಡಿದ್ದರು.

ನ್ಯೂಜಿಲೆಂಡ್ ತಂಡದ ಪರ ಕೈಲ್ ಜೇಮಿಸನ್ 3 ವಿಕೆಟ್ ಪಡೆದರೆ, ಟಿಮ್ ಸೌಥಿ ಒಂದು ವಿಕೆಟ್ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು