ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಜಾಜ್ ಶ್ರೇಷ್ಠ ಆಟದ ಬಳಿಕ ಮುಗ್ಗರಿಸಿದ ನ್ಯೂಜಿಲೆಂಡ್; ಭಾರತದ ಹಿಡಿತದಲ್ಲಿ ಪಂದ್ಯ

India vs New Zealand
Last Updated 4 ಡಿಸೆಂಬರ್ 2021, 19:51 IST
ಅಕ್ಷರ ಗಾತ್ರ

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ‘ಹತ್ತು ವಿಕೆಟ್‌’ ಗಳಿಸುವ ‍ಪೈಪೋಟಿ ನಡೆಯಿತು.

ಅದರಲ್ಲಿ ನ್ಯೂಜಿಲೆಂಡ್‌ನ ಎಡಗೈ ಸ್ಪಿನ್ನರ್ ಎಜಾಜ್ ಪಟೇಲ್ ಇನಿಂಗ್ಸ್‌ವೊಂದರಲ್ಲಿ ಹತ್ತು ವಿಕೆಟ್ ಗಳಿಸಿದ ವೈಯಕ್ತಿಕ ದಾಖಲೆ ಬರೆದರೆ, ಭಾರತ ತಂಡದ ಬೌಲಿಂಗ್ ಪಡೆಯು ಸುಮಾರು ಎರಡು ಗಂಟೆಯಲ್ಲಿಯೇ ಹತ್ತು ವಿಕೆಟ್ ಗಳಿಸಿ ಕಿವೀಸ್ ಇನಿಂಗ್ಸ್‌ಗೆ ತೆರೆಯೆಳೆಯಿತು. ಅದರಿಂದಾಗಿ ಕಿವೀಸ್ ಬಳಗವು 28.1 ಓವರ್‌ಗಳಲ್ಲಿ 62 ರನ್‌ಗಳ ಅಲ್ಪಮೊತ್ತಕ್ಕೆ ಕುಸಿಯಿತು. ಆತಿಥೇಯ ಬಳಗವು ಮೊದಲ ಇನಿಂಗ್ಸ್‌ನಲ್ಲಿ 263 ರನ್‌ಗಳ ಭರ್ಜರಿ ಮುನ್ನಡೆ ಗಳಿಸಿತು.

ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನವೇ ಎಜಾಜ್ ದಾಖಲೆ ಬರೆದರು. ಮೊದಲ ದಿನ ನಾಲ್ಕು ವಿಕೆಟ್ ಗಳಿಸಿದ್ದ ಅವರು, ಶನಿವಾರ ಅರ್ಧಡಜನ್ ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಇಂಗ್ಲೆಂಡ್‌ನ ಜಿಮ್ ಲೇಖರ್, ಭಾರತದ ಅನಿಲ್ ಕುಂಬ್ಳೆ ಅವರ ನಂತರ ಈ ಸಾಧನೆ ಮಾಡಿದ ಬೌಲರ್‌ ಗೌರವಕ್ಕೆ ಎಜಾಜ್ ಪಾತ್ರರಾದರು.

ಅವರ ಸ್ಪಿನ್ ಮುಂದೆ ಭಾರತ ತಂಡಕ್ಕೆ 325 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. ಆತಿಥೇಯ ತಂಡವು ಈ ಮೊತ್ತ ಗಳಿಸಲು ಕಾರಣವಾಗಿದ್ದ ಮಯಂಕ್ ಅಗರವಾಲ್ (150 ರನ್) ಶತಕದ ರಂಗು ಎಜಾಜ್ ಸಾಧನೆಯ ಮುಂದೆ ಮಂಕಾಗುವಂತೆ ಕಂಡಿತ್ತು. ಆದರೆ 128 ನಿಮಿಷಗಳ ಅವಧಿಯಲ್ಲಿ ಭಾರತದ ಬೌಲರ್‌ಗಳ ಆರ್ಭಟಕ್ಕೆ ಕಿವೀಸ್ ಬ್ಯಾಟರ್‌ಗಳು ತತ್ತರಿಸಿದರು.

ಮಧ್ಯಮವೇಗಿ ಮೊಹಮ್ಮದ್ ಸಿರಾಜ್ (19ಕ್ಕೆ3) ತಮ್ಮ ಮೊದಲ ನಾಲ್ಕು ಓವರ್ ಸ್ಪೆಲ್‌ನಲ್ಲಿಯೇ ಕಿವೀಸ್ ಬಳಗದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಆಫ್‌ಸ್ಪಿನ್ನರ್ ಆರ್. ಅಶ್ವಿನ್ (8ಕ್ಕೆ 4) ಅಕ್ಷರ್ ಪಟೇಲ್ (14ಕ್ಕೆ3) ಹಾಗೂ ಜಯಂತ್ ಯಾದವ್ (13ಕ್ಕೆ1) ಉಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರು. ಇದರೊಂದಿಗೆ ಮತ್ತೆ ಮಯಂಕ್ ಆಟದ ಹೊಳಪು ವಾಂಖೆಡೆಯಲ್ಲಿ ಚೆಲ್ಲುವಂತಾಯಿತು.

ನ್ಯೂಜಿಲೆಂಡ್ ಮೇಲೆ ಫಾಲೋ ಆನ್ ಹೇರುವ ಅವಕಾಶವಿದ್ದರೂ ನಾಯಕ ವಿರಾಟ್ ಕೊಹ್ಲಿ ತಮ್ಮ ಬಳಗವನ್ನು ಎರಡನೇ ಇನಿಂಗ್ಸ್‌ ಬ್ಯಾಟಿಂಗ್ ಮಾಡಲು ಕಣಕ್ಕಿಳಿಸಿ, ಅಚ್ಚರಿ ಮೂಡಿಸಿದರು. ಇನಿಂಗ್ಸ್ ಆರಂಭಿಸಿದ ಮಯಂಕ್ (ಬ್ಯಾಟಿಂಗ್ 38) ಮತ್ತು ಚೇತೇಶ್ವರ್ ಪೂಜಾರ (ಬ್ಯಾಟಿಂಗ್ 29) ದಿನದಾಟದ ಕೊನೆಗೆ ತಂಡವು 21 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 69 ರನ್ ಗಳಿಸಿತು.ಒಟ್ಟು 332 ರನ್‌ಗಳ ಮುನ್ನಡೆಯಲ್ಲಿದೆ.

ಪಂದ್ಯದಲ್ಲಿ ಇನ್ನೂ ಮೂರು ದಿನಗಳು ಬಾಕಿಯಿವೆ. ಕಿವೀಸ್‌ಗೆ ದೊಡ್ಡ ಮೊತ್ತದ ಗುರಿ ನೀಡುವತ್ತ ವಿರಾಟ್ ಬಳಗ ಚಿತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT