ಮತ್ತೊಂದು ‘ಪ್ರಥಮ’ದ ಹೊಸ್ತಿಲಲ್ಲಿ ಭಾರತ

7
ಭಾರತ–ನ್ಯೂಜಿಲೆಂಡ್ ನಡುವಣ ಮೂರನೇ ಪಂದ್ಯ ಇಂದು

ಮತ್ತೊಂದು ‘ಪ್ರಥಮ’ದ ಹೊಸ್ತಿಲಲ್ಲಿ ಭಾರತ

Published:
Updated:

ಹ್ಯಾಮಿಲ್ಟನ್: ಸೆಡನ್ ಪಾರ್ಕ್‌ನಲ್ಲಿ ಭಾನುವಾರ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟ್ವೆಂಟಿ–20 ಪಂದ್ಯವು ಈಗ ಕುತೂಹಲದ ಕಣಜವಾಗಿದೆ.

ಈ ಪಂದ್ಯದಲ್ಲಿ ಭಾರತವು ಗೆದ್ದರೆ ಮತ್ತೊಂದು ಇತಿಹಾಸ ರಚನೆಯಾಗಲಿದೆ. ಕಿವೀಸ್ ನಾಡಿನಲ್ಲಿ ಮೊದಲ ಸಲ ಟ್ವೆಂಟಿ–20 ಕ್ರಿಕೆಟ್ ಸರಣಿ ಜಯಿಸಿದ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಬಳಗವು ಪಾತ್ರವಾಗಲಿದೆ.

ಹೋದ ಮೂರು ತಿಂಗಳಲ್ಲಿ ಇಂತಹ ಪ್ರಥಮಗಳ ಸಾಧನೆಯನ್ನು ಭಾರತ ತಂಡವು ಮಾಡುತ್ತಿದೆ. ಆಸ್ಟ್ರೇಲಿಯಾದಲ್ಲಿ ಮೊದಲ ಸಲ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಗೆದ್ದು ನ್ಯೂಜಿಲೆಂಡ್‌ಗೆ ಬಂದಿತ್ತು. ಇಲ್ಲಿಯೂ ಏಕದಿನ ಸರಣಿಯಲ್ಲಿ ಜಯಭೇರಿ ಬಾರಿಸಿತ್ತು. ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಸೋತಿದ್ದ ರೋಹಿತ್ ಪಡೆಯು ಎರಡನೇ ಪಂದ್ಯದಲ್ಲಿ ಪುಟಿದೆದ್ದು ಅಮೋಘ ಜಯ ಸಾಧಿಸಿತ್ತು. ಇದರಿಂದಾಗಿ ಸರಣಿಯಲ್ಲಿ 1–1ರ ಸಮಬಲ ಮಾಡಿಕೊಂಡಿತ್ತು.

ಆದರೆ, ಹೋದ ವಾರ ಇಲ್ಲಿಯೇ ನಡೆದಿದ್ದ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತವು ಟ್ರೆಂಟ್‌ ಬೌಲ್ಟ್‌ ಸ್ವಿಂಗ್ ದಾಳಿಗೆ ಕುಸಿದಿತ್ತು. ಕೇವಲ 92 ರನ್‌ಗಳಿಗೆ ಆಲೌಟ್ ಆಗಿತ್ತು. ಈಗ ಆ ಕಹಿ ಮರೆತು ಕಣಕ್ಕಿಳಿಯುವ ಸವಾಲು ತಂಡದ ಮುಂದಿದೆ.

ಕಣಕ್ಕಿಳಿಯಲಿರುವ ಹನ್ನೊಂದು ಜನರ ತಂಡದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಯೂ ಇದೆ. ಕಳೆದ ಎರಡೂ ಪಂದ್ಯಗಳಲ್ಲಿ ಉತ್ತಮವಾಗಿ ಆಡಿರುವ ಕೃಣಾಲ್ ಪಾಂಡ್ಯ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಯಜುವೇಂದ್ರ ಚಾಹಲ್‌ಗೆ ವಿಶ್ರಾಂತಿ ನೀಡಿ ಕುಲದೀಪ್ ಯಾದವ್‌ಗೆ ಅವಕಾಶ ನೀಡುವ ನಿರೀಕ್ಷೆ ಇದೆ. ಖಲೀಲ್ ಅಹಮದ್ ಕೂಡ ಚೆನ್ನಾಗಿ ಆಡಿರುವುದರಿಂದ ಸ್ಥಾನ ಉಳಿಸಿಕೊಳ್ಳುವ ಭರವಸೆ ಇದೆ.

ಬ್ಯಾಟಿಂಗ್‌ನಲ್ಲಿ ರೋಹಿತ್ ಮತ್ತು ಶಿಖರ್ ಜೋಡಿಯು ಉತ್ತಮ ಫಾರ್ಮ್‌ನಲ್ಲಿದೆ. ಕಳೆದ ಪಂದ್ಯದಲ್ಲಿ 29 ಎಸೆತಗಳಲ್ಲಿ 50 ರನ್ ಬಾರಿಸಿದ್ದ ರೋಹಿತ್. ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ಆಟಗಾರನ ಪಟ್ಟ ಅಲಂಕರಿಸಿದ್ದಾರೆ. ಮಧ್ಯಮಕ್ರಮಾಂಕದಲ್ಲಿ ರಿಷಭ್ ಪಂತ್, ಮಹೇಂದ್ರಸಿಂಗ್ ಧೋನಿ ಅವರು ತಂಡವನ್ನು ಗೆಲುವಿನ ದಡ ಮುಟ್ಟಿಸುವ ಸಮರ್ಥರಾಗಿದ್ದಾರೆ.

ನ್ಯೂಜಿಲೆಂಡ್ ತಂಡದಲ್ಲಿ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಲಯಕ್ಕೆ ಮರಳಿದರೆ ಬಲ ಹೆಚ್ಚುವುದು. ಆಕ್ಲೆಂಡ್ ಪಂದ್ಯದಲ್ಲಿ ಕೇವಲ 50 ರನ್‌ಗಳಾಗುವಷ್ಟರಲ್ಲಿ ನಾಲ್ವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದ್ದರು. ಬೌಲಿಂಗ್‌ನಲ್ಲಿ ಟಿಮ್ ಸೌಥಿ, ಸ್ಕಾಟ್ ಕಗೆಲಿಯನ್ ಶಿಸ್ತುಬದ್ಧ ಬೌಲಿಂಗ್ ಮಾಡಿದರೆ ಪ್ರವಾಸಿ ಬಳಗಕ್ಕೆ ರನ್‌ ಗಳಿಸುವುದು ಕಷ್ಟವಾಗಬಹುದು.

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಮಹೇಂದ್ರಸಿಂಗ್ ಧೋನಿ, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಖಲೀಲ್ ಅಹಮದ್, ಶುಭಮನ್ ಗಿಲ್, ವಿಜಯಶಂಕರ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಡಫ್ ಬ್ರೇಸ್‌ವೆಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಲಾಕಿ ಫರ್ಗ್ಯುಸನ್, ಸ್ಕಾಟ್ ಕಗೆಲಿನ್, ಕಾಲಿನ್ ಮನ್ರೊ, ಡೆರಿಲ್ ಮಿಚೆಲ್, ಮಿಚೆಲ್ ಸ್ಯಾಂಟನರ್, ಟಿಮ್ ಸೀಫರ್ಟ್, ಈಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್, ಬ್ಲೇರ್ ಟಿಕ್ನರ್, ಜೇಮ್ಸ್ ನೀಶಾಮ್,

ಪಂದ್ಯ ಆರಂಭ: ಮಧ್ಯಾಹ್ನ 12.30

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !