ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್‌: ಯುವ ಪ್ರತಿಭೆಗಳಿಗೆ ಮಿಂಚುವ ತವಕ

ಭಾರತ ‘ಎ’–ದಕ್ಷಿಣ ಆಫ್ರಿಕಾ ‘ಎ’ ಕ್ರಿಕೆಟ್ ‘ಟೆಸ್ಟ್’: ಇಂದಿನಿಂದ ಪಂದ್ಯ
Last Updated 8 ಸೆಪ್ಟೆಂಬರ್ 2019, 20:16 IST
ಅಕ್ಷರ ಗಾತ್ರ

ತಿರುವನಂತಪುರ: ಇದೇ ತಿಂಗಳೂ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಕ್ರಿಕೆಟ್ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಆಕಾಂಕ್ಷಿಗಳಿಗೆ ಸೋಮವಾರದಿಂದ ‘ಟೆಸ್ಟ್‌’ ಆರಂಭವಾಗಲಿದೆ.

ದಕ್ಷಿಣ ಆಫ್ರಿಕಾ ‘ಎ’ ಎದುರಿನ ‘ಟೆಸ್ಟ್‌’ಸರಣಿಯಲ್ಲಿ ಕಣಕ್ಕಿಳಿಯಲಿರುವ ಭಾರತ ಎ ತಂಡವನ್ನು ಶುಭಮನ್ ಗಿಲ್ ಮುನ್ನಡೆಸುವರು. ಹೋದ ತಿಂಗಳು ವೆಸ್ಟ್‌ ಇಂಡೀಸ್‌ ಎದುರಿನ ಸರಣಿಯಲ್ಲಿ ಅವರನ್ನು ಆಯ್ಕೆ ಮಾಡಿರಲಿಲ್ಲ. ಅವರು ದೇಶಿ ಕ್ರಿಕೆಟ್ ಮತ್ತು ‘ಎ’ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿದ್ದರೂ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಅದು ಚರ್ಚೆಗೆ ಗ್ರಾಸವಾಗಿತ್ತು. ಈಚೆಗೆ ಇದೇ ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಅವರು ಹೆಚ್ಚು ರನ್‌ಗಳನ್ನು ಗಳಿಸಿರಲಿಲ್ಲ. ಆದರೆ ದೀರ್ಘ ಮಾದರಿಯಲ್ಲಿ ಲಯಕ್ಕೆ ಮರಳುವ ವಿಶ್ವಾಸದಲ್ಲಿ ಅವರಿದ್ದಾರೆ. ಅದರೊಂದಿಗೆ ಆಯ್ಕೆ ಸಮಿತಿಯ ಗಮನ ಸೆಳೆಯಲು ಪ್ರಯತ್ನಿಸಲಿದ್ದಾರೆ.

ಈಚೆಗೆ ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಟೂರ್ನಿಯಲ್ಲಿ ಮಿಂಚಿದ್ದ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಕೂಡ ತಂಡದಲ್ಲಿರುವ ಏಕೈಕ ಕನ್ನಡಿಗ. ಮಧ್ಯಮವೇಗಿ ಮೊಹಮ್ಮದ್ ಸಿರಾಜ್, ಶಿವಂ ದುಬೆ, ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿದ್ದ ತಮಿಳುನಾಡು ಆಲ್‌ರೌಂಡರ್ ವಿಜಯ ಶಂಕರ್ ಅವರಿಗೆ ಇದು ಮಹತ್ವದ ಸರಣಿಯಾಗಿದೆ. ಭಾರತ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ.

ಆದರೆ, ದಕ್ಷಿಣ ಆಫ್ರಿಕಾ ‘ಎ’ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಗಳನ್ನು ಹೊಂದಿರುವ ಅನುಭವಿ ಆಟಗಾರ ಏಡನ್ ಮಾರ್ಕರಂ ಅವರು ನಾಯಕತ್ವ ವಹಿಸಿದ್ದಾರೆ. ಅವರು ದಕ್ಷಿ ಣ ಆಫ್ರಿಕಾ ಏಕದಿನ ತಂಡದ ನಾಯಕರೂ ಹೌದು. 17 ಟೆಸ್ಟ್ ಗಳನ್ನು ಆಡಿರುವ ಮಾರ್ಕರಂ ನಾಲ್ಕು ಶತಕಗಳನ್ನೂ ಬಾರಿಸಿದ್ದಾರೆ. ಯುವಪ್ರತಿಭೆ ಜುಬೇರ್ ಹಮ್ಜಾ, ವೇಗದ ಬೌಲರ್ ಲುಂಗಿ ಗಿಡಿ, ಖಾಯಾ ಜೊಂಡೊ ಅವರೂ ತಂಡದಲ್ಲಿದ್ದಾರೆ. ಇವರನ್ನು ಎದುರಿಸಿ ಗೆಲ್ಲಲು ಗಿಲ್ ಬಳಗವು ವಿಶೇಷ ಯೋಜನೆ ರೂಪಿಸಿಕೊಳ್ಳುವ ಸವಾಲು ಇದೆ.

ಕೇರಳದಲ್ಲಿ ಮಳೆ ಸುರಿಯುತ್ತಿದೆ. ಈಚೆಗೆ ಏಕದಿನ ಸರಣಿಯ ಎಲ್ಲ ಪಂದ್ಯಗಳ ಸಂದರ್ಭದಲ್ಲಿಯೂ ಮಳೆ ಸುರಿದು ಓವರ್‌ಗಳನ್ನು ಕಡಿತಗೊಳಿಸಲಾಗಿತ್ತು. ಇದೀಗ ‘ಟೆಸ್ಟ್’ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಎಲ್ಲ ಲಕ್ಷಣಗಳೂ ಇವೆ. ಈ ಸರಣಿಯ ಎರಡನೇ ಪಂದ್ಯವು ಮೈಸೂರಿನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT