ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಆಟಕ್ಕೆ ಪಂದ್ಯ ರದ್ದು!

ವೆಸ್ಟ್ ಇಂಡೀಸ್–ಭಾರತ ನಡುವಣ ಮೊದಲ ಏಕದಿನ ಕ್ರಿಕೆಟ್ ಪಂದ್ಯ
Last Updated 8 ಆಗಸ್ಟ್ 2019, 19:41 IST
ಅಕ್ಷರ ಗಾತ್ರ

ಗಯಾನಾ (ಪಿಟಿಐ): ಈಗ ಎಲ್ಲೆಲ್ಲೂ ಮಳೆಯದ್ದೇ ಆಟ. ವೆಸ್ಟ್ ಇಂಡೀಸ್‌ನ ಗಯಾನಾವನ್ನೂ ವರುಣ ಬಿಟ್ಟಿಲ್ಲ. ಹೀಗಾಗಿ ಭಾರತ ಮತ್ತು ವಿಂಡೀಸ್‌ ನಡುವಿನ ಮೊದಲ ಏಕದಿನ ಪಂದ್ಯ ಗುರುವಾರ ರದ್ದಾಯಿತು.

ಗುರುವಾರ ಸುರಿದ ಮಳೆಯಿಂದಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮೊದಲ ಏಕದಿನ ಕ್ರಿಕೆಟ್ ಪಂದ್ಯವು ತಡವಾಗಿ ಆರಂಭವಾಯಿತು.ಐದು ಓವರ್‌ಗಳ ಬಳಿಕ ಮತ್ತೆ ಮಳೆ ಸುರಿದ ಕಾರಣ ಓವರ್‌ಗಳನ್ನು 34ಕ್ಕೆ ಕಡಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಜೇಸನ್‌ ಹೋಲ್ಡರ್‌ ಪಡೆ 13 ಓವರ್‌ಗಳಲ್ಲಿ 1 ವಿಕೆಟ್‌ಗೆ 54 ರನ್ ಗಳಿಸಿದ್ದ ವೇಳೆ ಮಗದೊಮ್ಮೆ ವರುಣನ ಆಟ ನಡೆಯಿತು.

ಸಂಜೆ 7ಕ್ಕೆ (ಭಾರತೀಯ ಕಾಲ ಮಾನ) ಆರಂಭವಾಗಬೇಕಿದ್ದ ಪಂದ್ಯವು ಮಳೆಯಿಂದಾಗಿ ಸುಮಾರು ಒಂದೂವರೆ ತಾಸು ತಡವಾಗಿ ಶುರುವಾಯಿತು. ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ತೇವವಿದ್ದ ಪಿಚ್‌ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಅವರು ಉತ್ತಮವಾಗಿ ಬೌಲಿಂಗ್ ಮಾಡಿ ದರು. 11ನೇ ಓವರ್‌ನಲ್ಲಿ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಆತಿಥೇಯರಿಗೆ ಆಘಾತ ನೀಡಿದರು. ಅವರು ಮೊದಲ ಎಸೆತದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರನ್ನು ಬೌಲ್ಡ್‌ ಮಾಡಿದರು. 31 ಎಸೆತಗಳನ್ನು ಆಡಿದ ಗೇಲ್‌ ಗಳಿಸಿದ್ದು ಕೇವಲ 4ರನ್‌!

ಗೇಲ್ ಅವರಿಗೆ ಇದು 296ನೇ ಏಕದಿನ ಪಂದ್ಯ. ಇದರೊಂದಿಗೆ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ವಿಂಡೀಸ್ ಆಟಗಾರನಾದರು. ಬ್ರಯನ್ ಲಾರಾ ದಾಖಲೆಯನ್ನು ಮೀರಿ ನಿಂತರು.

ಗೇಲ್‌ ಪೆವಿಲಿಯನ್‌ ಸೇರಿದ ನಂತರ ಎವಿನ್‌ ಲೂಯಿಸ್‌ (ಬ್ಯಾಟಿಂಗ್‌ 40; 36ಎ, 2ಬೌಂ, 3ಸಿ) ಮತ್ತು ಶಾಯ್‌ ಹೋಪ್‌ (ಬ್ಯಾಟಿಂಗ್‌ 6) ವಿಕೆಟ್‌ ಬೀಳದಂತೆ ಎಚ್ಚರ ವಹಿಸಿದರು.

‘ಪಿಚ್‌ ಸ್ವಲ್ಪ ಹಸಿಯಾಗಿರುವುದರಿಂದ ಆರಂಭದಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ. ಆದ್ದರಿಂದ ಟಾಸ್ ಗೆದ್ದ ನಾವು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲಿಲ್ಲ. ನಮ್ಮ ಬೌಲರ್‌ಗಳು ಎದುರಾಳಿ ತಂಡವನ್ನು ಸಣ್ಣಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸವಿದೆ’ ಎಂದು ವಿರಾಟ್ ಕೊಹ್ಲಿ ಹೇಳಿದರು.

ಭಾರತದ ಹನ್ನೊಂದರ ಬಳಗದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಅವರಿಗೆ ಸ್ಥಾನ ಸಿಗಲಿಲ್ಲ. ಶ್ರೇಯಸ್ ಅಯ್ಯರ್ ಮತ್ತು ಕೇದಾರ್ ಜಾಧವ್‌ಗೆ ಸ್ಥಾನ ಲಭಿಸಿತು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌; 13 ಓವರ್‌ಗಳಲ್ಲಿ 1 ವಿಕೆಟ್‌ಗೆ 54 (ಕ್ರಿಸ್ ಗೇಲ್ 4, ಎವಿನ್ ಲೂಯಿಸ್ ಬ್ಯಾಟಿಂಗ್ 40, ಶಾಯ್‌ ಹೋಪ್‌ ಬ್ಯಾಟಿಂಗ್‌ 6; ಕುಲದೀಪ್‌ ಯಾದವ್‌ 3ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT