ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟ್ವೆಂಟಿ ವಿಶ್ವಕಪ್ | ಭಾರತಕ್ಕೆ ಇಂಗ್ಲೆಂಡ್ ಸವಾಲು

ಸೆಮಿಫೈನಲ್ ಪಂದ್ಯಗಳು ಇಂದು
Last Updated 4 ಮಾರ್ಚ್ 2020, 20:01 IST
ಅಕ್ಷರ ಗಾತ್ರ

ಸಿಡ್ನಿ: ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಗುಂಪು ಹಂತದಲ್ಲಿ ಅಜೇಯ ಓಟದೊಂದಿಗೆ ಸೆಮಿಫೈನಲ್ ತಲುಪಿರುವ ಭಾರತ ತಂಡಕ್ಕೆ ಈಗ ಫೈನಲ್‌ಗೆ ಲಗ್ಗೆ ಇಡುವ ಕನಸು ಗರಿಗೆದರಿದೆ.

ಗುರುವಾರ ಇಲ್ಲಿ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಬಳಗವು ಎದುರಿಸಲಿದೆ. ಇಲ್ಲಿಯವರೆಗೆ ಭಾರತ ತಂಡವು ಒಂದು ಸಲವೂ ಫೈನಲ್‌ ಪ್ರವೇಶಿಸಿಲ್ಲ. ಇಂಗ್ಲೆಂಡ್ ವಿರುದ್ಧ ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ.

ಗುಂಪು ಹಂತದ ಮೊದಲ ಪಂದ್ಯದಲ್ಲಿಯೇ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸದೆಬಡೆದಿರುವ ಭಾರತ ತಂಡವು ಅಪಾರ ಆತ್ಮವಿಶ್ವಾಸದಲ್ಲಿದೆ. ಅದರಲ್ಲೂ ಸ್ಪಿನ್ನರ್ ಪೂನಂ ಯಾದವ್, ರಾಧಾ ಯಾದವ್, ಯುವ ಬ್ಯಾಟ್ಸ್‌ವುಮನ್ ಜೆಮಿಮಾ ರಾಡ್ರಿಗಸ್, ಶೆಫಾಲಿ ವರ್ಮಾ ಅವರ ಆಟದ ಬಲ ತಂಡಕ್ಕೆ ಇದೆ. ಮಧ್ಯಮವೇಗಿ ಶಿಖಾ ಪಾಂಡೆ ಕೂಡ ಪಂದ್ಯದ ಫಲಿತಾಂಶವನ್ನು ತಮ್ಮ ತಂಡದ ಪರ ತಿರುಗಿಸಿಕೊಳ್ಳುವ ಸಮರ್ಥರಾಗಿದ್ದಾರೆ.

ಆದರೆ ಅನುಭವಿ ಆಟಗಾರ್ತಿ ಸ್ಮೃತಿ ಮಂದಾನ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಲಯದಲ್ಲಿ ಇಲ್ಲ. ಅವರಿಬ್ಬರೂ ತಮ್ಮ ಬ್ಯಾಟಿಂಗ್ ವೈಭವ ತೋರಿಸಿದರೆ ಗೆಲುವು ಸುಲಭವಾಗಲಿದೆ. ವೆಸ್ಟ್‌ ಇಂಡೀಸ್‌ನಲ್ಲಿ ನಡೆದಿದ್ದ ಹೋದ ಸಲದ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತ್ತು. 2009, 2012, 2014 ಮತ್ತು 2016ರ ಟೂರ್ನಿಗಳಲ್ಲಿ ಭಾರತವು ಗುಂಪು ಹಂತದಲ್ಲಿಯೇ ನಿರ್ಗಮಿಸಿತ್ತು.

ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್ ತಂಡವು ಭಾರತಕ್ಕೆ ಸುಲಭದ ತುತ್ತಾಗದು. ತಂಡದ ನಥಾಲಿ ಸೀವರ್ ಮೂರು ಅರ್ಧಶತಕಗಳನ್ನು ಬಾರಿಸಿ ಅಮೋಘ ಲಯದಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಸೋಫಿ ಎಸೆಲ್‌ಸನ್, ಅನ್ಯಾ ಶ್ರಬಸ್‌ಸೋಲ್ ಕೂಡ ಉತ್ತಮ ವಾಗಿ ಆಡುತ್ತಿದ್ದಾರೆ. ಅವರನ್ನು ಎದುರಿಸಿ ದೊಡ್ಡ ಮೊತ್ತ ಪೇರಿಸುವ ಸವಾಲು ಭಾರತದ ಬ್ಯಾಟಿಂಗ್ ಪಡೆಗೆ ಇದೆ.

ಎಲ್ಲ ವಿಭಾಗಗಳಲ್ಲಿಯೂ ಚುರುಕು ತನದಿಂದ ಆಡಿದರೆ ಇದೇ ಮೊದಲ ಸಲ ಫೈನಲ್‌ ತಲುಪುವ ಕನಸು ಕೈಗೂಡಲಿದೆ.

ತಂಡಗಳು
ಭಾರತ:
ಹರ್ಮನ್‌ ಪ್ರೀತ್ ಕೌರ (ನಾಯಕಿ), ಜೆಮಿಮಾ ರಾಡ್ರಿಗಸ್, ಶೇಫಾಲಿ ವರ್ಮಾ, ಸ್ಮೃತಿ ಮಂದಾನ, ಶಿಖಾ ಪಾಂಡೆ, ಪೂನಂ ಯಾದವ್, ದೀಪ್ತಿ ಶರ್ಮಾ, ವೇದಾ ಕೃಷ್ಣಮೂರ್ತಿ, ತಾನಿಯಾ ಭಾಟಿಯಾ (ವಿಕೆಟ್‌ಕೀಪರ್), ರಾಧಾ ಯಾದವ್, ಅರುಂಧತಿ ರೆಡ್ಡಿ, ಹರ್ಲೀನ್ ಡಿಯೋಲ್, ರಾಜೇಶ್ವರಿ ಗಾಯಕವಾಡ್, ರಿಚಾ ಘೋಷ್, ಪೂಜಾ ವಸ್ತ್ರಕರ್.

ಇಂಗ್ಲೆಂಡ್: ಹೀತರ್ ನೈಟ್ (ನಾಯಕಿ), ಟ್ಯಾಮಿ ಬೇಮೌಂಟ್, ಕ್ಯಾಥರಿನ್ ಬ್ರಂಟ್, ಕೇಟ್ ಕ್ರಾಸ್, ಫ್ರಿಯಾ ಡೇವಿಸ್, ಸೋಫಿ ಎಸೆಲ್‌ಸ್ಟೋನ್, ಜಾರ್ಜೀಯಾ ಎಲ್ವೀಸ್, ಸರಾ ಗ್ಲೆನ್, ಎಮಿ ಜೋನ್ಸ್ (ವಿಕೆಟ್‌ಕೀಪರ್), ನತಾಲಿ ಸೀವರ್, ಅನ್ಯಾ ಶ್ರಬ್‌ಸೋಲ್, ಮ್ಯಾಡಿ ವಿಲಿಯರ್ಸ್, ಫ್ರಾನ್ ವಿಲ್ಸನ್, ಲಾರೆನ್ ವಿನ್‌ಫೀಲ್ಡ್, ಡ್ಯಾನಿಯಲ್ ವೈಟ್.
ಆರಂಭ: ಬೆಳಿಗ್ಗೆ 9.30

ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯ ಆರಂಭ: ಮಧ್ಹಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT