ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟಿ–20 ವಿಶ್ವಕಪ್‌ ಕ್ರಿಕೆಟ್‌: ಪ್ರಬಲ ಆಸ್ಟ್ರೇಲಿಯಾಕ್ಕೆ ಭಾರತ ಸವಾಲು

ಸ್ಪಿನ್ನರ್‌ಗಳನ್ನು ನೆಚ್ಚಿಕೊಂಡ ಹರ್ಮನ್‌ಪ್ರೀತ್‌ ಕೌರ್‌ ಪಡೆ
Last Updated 20 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ
ADVERTISEMENT
""

ಸಿಡ್ನಿ: ಸ್ಥಿರ ಪ್ರದರ್ಶನ ನೀಡಿ ಮೊದಲ ಟ್ರೋಫಿ ಗೆಲ್ಲುವ ಗುರಿಯೊಡನೆ ಭಾರತ ತಂಡ, ಐಸಿಸಿ ಮಹಿಳಾ ಟಿ–20 ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿದೆ. ಹರ್ಮನ್‌ಪ್ರೀತ್‌ ಕೌರ್‌ ಬಳಗವು, ಶುಕ್ರವಾರ ಆರಂಭವಾಗುವ ಈ ಮಹಿಳಾ ಕ್ರಿಕೆಟ್‌ ಮೇಳದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಉತ್ತಮ ನಿರ್ವಹಣೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲು ‌ಭಾರತ ಮಹಿಳಾ ತಂಡ ಇತ್ತೀಚಿನ ವರ್ಷಗಳಲ್ಲಿ ಪರದಾಡುತ್ತಿದೆ. ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ತ್ರಿಕೋನ ಸರಣಿಯಲ್ಲಿ ಭಾರತ ಫೈನಲ್‌ಗೆ ಬಂದಿದ್ದರೂ, ಈ ಸಮಸ್ಯೆ ಎದ್ದುಕಂಡಿತ್ತು. ಬಲಾಢ್ಯ ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್‌ ವಿರುದ್ಧ ತಲಾ ಒಂದು ಜಯ, ಒಂದು ಸೋಲು ಕಂಡಿದ್ದ ಭಾರತ, ಫೈನಲ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಶರಣಾಗಿತ್ತು.

ಆತಿಥೇಯ ಆಸ್ಟ್ರೇಲಿಯಾ ಇದುವರೆಗೆ ನಡೆದಿರುವ ಆರು ವಿಶ್ವಕಪ್‌ಗಳಲ್ಲಿ ದಾಖಲೆ ನಾಲ್ಕು ಬಾರಿ ಟ್ರೋಫಿ ಎತ್ತಿಹಿಡಿದಿದೆ. ತವರಿನಲ್ಲೂ ಯಶಸ್ಸನ್ನು ಮುಂದುವರಿಸುವ ಉತ್ಸಾಹದಲ್ಲಿದೆ.

ಭಾರತದ ಮಧ್ಯಮ ಮತ್ತು ಕೆಳಮಧ್ಯಮ ಕ್ರಮಾಂಕದ ಬ್ಯಾಟುಗಾರ್ತಿಯರಿಂದ ಉಪಯು‌ಕ್ತ ಕೊಡುಗೆ ಬರಬೇಕಾಗಿದೆ. ಈ ಮಹತ್ವದ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕ ಕುಸಿಯದಂತೆ ನೋಡಿಕೊಳ್ಳಬೇಕಾಗಿದೆ. ಸ್ಮೃತಿ ಮಂದಾನಾ ಲಯ ಕಂಡುಕೊಂಡಿದ್ದಾರೆ. 16 ವರ್ಷದ ಶಫಾಲಿ ವರ್ಮಾ, ಭಾರತಕ್ಕೆ ಉತ್ತಮ ಆರಂಭ ದೊರಕಿಸಿಕೊಡಬೇಕಾಗಿದೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೂಡ ಸ್ಥಿರ ಪ್ರದರ್ಶನದ ಸವಾಲು ಎದುರಿಸುತ್ತಿದ್ದು, ಮೊದಲ ಪಂದ್ಯದಲ್ಲೇ ಅದನ್ನು ಸರಿಪಡಿಸಿಕೊಳ್ಳಬೇಕಾಗಿದೆ.

ಬೌಲಿಂಗ್‌ ವಿಭಾಗದಲ್ಲಿ ತಂಡ ಸ್ಪಿನ್ನರ್‌ಗಳನ್ನೇ ಬಲವಾಗಿ ನೆಚ್ಚಿಕೊಂಡಿದೆ. ಪ್ರಮುಖ ಮಧ್ಯಮ ವೇಗಿ ಶಿಖಾ ಪಾಂಡೆ ಅವರಿಂದ ಆರಂಭಿಕ ಯಶಸ್ಸನ್ನು ತಂಡ ನಿರೀಕ್ಷಿಸುತ್ತಿದೆ.

ಇತ್ತೀಚೆಗೆ ತ್ರಿಕೋನ ಸರಣಿಯನ್ನು ಗೆದ್ದುಕೊಳ್ಳುವ ಮೂಲಕ ಆಸ್ಟ್ರೇಲಿಯಾ ಈ ವಿಶ್ವಕಪ್‌ಗೆ ಸೂಕ್ತ ರೀತಿಯಲ್ಲೇ ಸಿದ್ಧತೆ ನಡೆಸಿದೆ. ಆದರೆ ಈ ತಂಡ ಪಂದ್ಯಕ್ಕೆ ಮೊದಲೇ ಹಿನ್ನಡೆಯೊಂದನ್ನು ಕಾಣುವಂತಾಗಿದೆ.

ತ್ರಿಕೋನ ಸರಣಿಯಲ್ಲಿ ಭಾರತವನ್ನು ವೇಗದ ಬೌಲಿಂಗ್‌ನಿಂದ ಕಂಗೆಡಿಸಿದ್ದ ಟಾಯ್ಲಾ ವ್ಲೇಮ್‌ನಿಕ್‌ ಪಾದದ ಗಾಯದಿಂದ ಟೂರ್ನಿಯಲ್ಲಿ ಆಡುತ್ತಿಲ್ಲ. ಅವರ ಬದಲು ಆಫ್‌ ಸ್ಪಿನ್ನರ್‌ ಮೊಲಿ ಸ್ಟ್ರಾನೊ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಟೂರ್ನಿಯಲ್ಲಿ 11 ತಂಡಗಳು ಪಾಲ್ಗೊಳ್ಳುತ್ತಿದ್ದು, ಮಾರ್ಚ್‌ 8ರಂದು ಮೆಲ್ಬರ್ನ್‌ನಲ್ಲಿ (ಎಂಸಿಜಿ) ಫೈನಲ್‌ ನಡೆಯಲಿದೆ.

ತಂಡಗಳು ಇಂತಿವೆ: ಆಸ್ಟ್ರೇಲಿಯಾ: ಎರಿನ್‌ ಬರ್ನ್ಸ್‌, ನಿಕೋಲಾ ಕ್ಯಾರೆ, ಆ್ಯಶ್ಲೆ ಗಾರ್ಡನರ್‌, ರಚೆಲ್‌ ಹೇಯ್ನ್ಸ್‌ (ಉಪ ನಾಯಕಿ), ಅಲಿಸ್ಸಾ ಹೀಲಿ (ವಿಕೆಟ್‌ ಕೀಪರ್‌), ಜೆಸ್‌ ಜೊನಾಸ್ಸೆನ್‌, ಡೆಲಿಸ್ಸಾ ಕಿಮಿನ್ಸ್‌, ಮೆಗ್‌ ಲ್ಯಾನಿಂಗ್‌ (ನಾಯಕಿ), ಸೋಫಿ ಮೊಲಿನೀಕ್ಸ್‌, ಬೆತ್‌ ಮೂನಿ, ಎಲಿಸ್‌ ಪೆರಿ, ಮೇಗನ್‌ ಶುಟ್‌, ಅನ್ನಾಬೆಲ್‌ ಸದರ್‌ಲ್ಯಾಂಡ್‌, ಮೋಲಿ ಸ್ಟ್ರಾನೊ, ಜಾರ್ಜಿಯಾ ವೇರ್‌ಹ್ಯಾಮ್‌.

ಭಾರತ: ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌), ಹರ್ಲೀನ್‌ ಡಿಯೋಲ್‌, ರಾಜೇಶ್ವರಿ ಗಾಯಕವಾಡ್‌, ರಿಚಾ ಘೋಷ್‌, ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನಾ, ಶಿಖಾ ಪಾಂಡೆ, ಅರುಂಧತಿ ರೆಡ್ಡಿ, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್‌, ಶಫಾಲಿ ವರ್ಮಾ, ಪೂನಂ ಯಾದವ್‌, ರಾಧಾ ಯಾದವ್‌.

ಪಂದ್ಯ ಆರಂಭ: ಮಧ್ಯಾಹ್ನ 1.30.


​​​​​​​ಆಸ್ಟ್ರೇಲಿಯಾದಲ್ಲಿ ಪಂದ್ಯ ನಡೆಯುವ ಸ್ಥಳಗಳು (6): ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ, ಸಿಡ್ನಿ ಕ್ರಿಕೆಟ್‌ ಮೈದಾನ, ಪಶ್ಚಿಮ ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆ ಮೈದಾನ– ಪರ್ತ್‌, ಸಿಡ್ನಿ ಷೋಗ್ರೌಂಡ್‌, ಮನುಕಾ ಓವಲ್‌–ಕೆನ್‌ಬೆರ್ರಾ, ಜಂಕ್ಷನ್‌ ಓವಲ್‌– ಮೆಲ್ಬರ್ನ್‌.

ಐಸಿಸಿ ರ‍್ಯಾಂಕಿಂಗ್‌: 1. ಆಸ್ಟ್ರೇಲಿಯಾ 2. ಇಂಗ್ಲೆಂಡ್‌ 3. ನ್ಯೂಜಿಲೆಂಡ್‌ 4. ಭಾರತ 5. ವೆಸ್ಟ್ ಇಂಡೀಸ್‌ 6. ದಕ್ಷಿಣ ಆಫ್ರಿಕಾ, 7. ಪಾಕಿಸ್ತಾನ 8. ಶ್ರೀಲಂಕಾ 9. ಬಾಂಗ್ಲಾದೇಶ 10. ಐರ್ಲೆಂಡ್‌ 11. ಥಾಯ್ಲೆಂಡ್‌. (ಥಾಯ್ಲೆಂಡ್‌ ಮೊದಲ ಬಾರಿ ಪಾಲ್ಗೊಳ್ಳುತ್ತಿದೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT