ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ಸರಣಿಗೂ ರಾಹುಲ್ ವಿಕೆಟ್ ಕೀಪರ್: ವಿರಾಟ್ ಕೊಹ್ಲಿ

Last Updated 20 ಜನವರಿ 2020, 14:55 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ರಿಷಭ್ ಪಂತ್‌ ಬದಲು ವಿಕೆಟ್ ಕೀಪಿಂಗ್ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದ ಕೆ.ಎಲ್‌.ರಾಹುಲ್‌ ಅವರನ್ನು‘ಇನ್ನೂ ಸ್ವಲ್ಪ ಸಮಯ’ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿಯೇ ಮುಂದುವರಿಸಲಾಗುವುದು ಎಂದುಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದಸರಣಿಯ ಅಂತಿಮ ಪಂದ್ಯದಲ್ಲಿ 7 ವಿಕೆಟ್ ಜಯ ಸಾಧಿಸಿದ ಬಳಿಕ ಮಾತನಾಡಿದ ಕೊಹ್ಲಿ, ಇದರಿಂದ(ರಾಹುಲ್‌ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿರುವುದರಿಂದ) ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಡಲು ಅವಕಾಶ ಸಿಗುತ್ತದೆ. ತಂಡದ ಬ್ಯಾಟಿಂಗ್‌ ವಿಭಾಗಕ್ಕೂ ಬಲಬರುತ್ತದೆ ಎಂದು ತಿಳಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಪಂತ್‌ ಬ್ಯಾಟಿಂಗ್ ಮಾಡುತ್ತಿದ್ದಾಗವೇಗಿ ಪ್ಯಾಟ್‌ ಕಮಿನ್ಸ್‌ ಎಸೆದ ಚೆಂಡು ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ಹೀಗಾಗಿ ಅವರು ಚಿಕಿತ್ಸೆಗೊಳಗಾಗಿದ್ದರು. ಬಳಿಕ ಚೇತರಿಸಿಕೊಂಡಿದ್ದ ಪಂತ್‌ಮೂರನೇ ಪಂದ್ಯಕ್ಕೆ ಲಭ್ಯರಿದ್ದರೂ ರಾಹುಲ್‌ ಅವರನ್ನೇ ಮುಂದುವರಿಸಲಾಗಿತ್ತು.

ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಸರಣಿಯು ಇದೇ 24ರಿಂದ ಆರಂಭವಾಗುತ್ತದೆ. ರಾಹುಲ್‌ ಈ ಎರಡೂ ಜವಬ್ದಾರಿ ನಿಭಾಯಿಸುವುದರಿಂದ ತಂಡದ ಬ್ಯಾಟಿಂಗ್‌ ಪ್ರಬಲವಾಗುತ್ತದೆ ಎಂಬುದು ಕೊಹ್ಲಿ ನಂಬಿಕೆ. ಹೀಗಾಗಿ ಅವರು, ‘ಸದ್ಯ ಉತ್ತಮ ಪ್ರದರ್ಶನ ನೀಡಿರುವುದರಿಂದರಾಹುಲ್‌ರನ್ನೇ ಮುಂದುವರಿಸುತ್ತೇವೆ. ಇದರಲ್ಲಿ ಸಫಲರಾಗುತ್ತೇವೆಯೇ ಎಂಬುದನ್ನು ನೋಡುತ್ತೇವೆ. ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡಲು ಯಾವ ಕಾರಣಗಳೂ ಇಲ್ಲ’ ಎಂದು ಹೇಳಿಕೊಂಡಿದ್ದಾರೆ.

‘ತಂಡದ ಸಮತೋಲನವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾದ ಅಂಶ. ರಾಹುಲ್‌ ದ್ರಾವಿಡ್‌ ಅವರು ವಿಕೆಟ್‌ ಕೀಪಿಂಗ್‌ ಆರಂಭಿಸಿದ ಮೇಲೆ 2003ರ ವಿಶ್ವಕಪ್‌ನಲ್ಲಿ ತಂಡ ಸಮತೋಲನದಿಂದ ಕೂಡಿತ್ತು’ ಎಂದಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್‌ ಆಗಿರುವ ಕೆ.ಎಲ್‌. ರಾಹುಲ್‌ ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆ ಪಂದ್ಯದಲ್ಲಿ ಉತ್ತಮವಾಗಿ ಆಡಿ 47 ರನ್‌ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಆಡಿ, ಕೇವಲ 52 ಎಸೆತಗಳಲ್ಲಿ 80 ರನ್‌ ಚಚ್ಚಿದ್ದರು.

ಕೊನೆಯ ಪಂದ್ಯಲ್ಲಿ ಧವನ್‌ ಗಾಯಗೊಂಡಿದ್ದರಿಂದ ರೋಹಿತ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದರು. 19 ರನ್‌ ಗಳಿಸಿದ್ದರು.

‘ರಾಹುಲ್‌ ಎಲ್ಲಿ ಬೇಕಾದರೂ ಉತ್ತಮವಾಗಿ ಆಡಬಲ್ಲ. ಏಕೆಂದರೆ ಆತ ಪರಿಪೂರ್ಣ ಬ್ಯಾಟ್ಸ್‌ಮನ್‌. ಯಾವುದೇ ಮಾದರಿಯಲ್ಲಿ, ಯಾವ ಕ್ರಮಾಂಕದಲ್ಲಿಯೂ ಚೆನ್ನಾಗಿ ಆಡಬಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT