ಭಾನುವಾರ, ಜನವರಿ 17, 2021
22 °C
ಭಾರತ ತಂಡದ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿ

ಗಾಯದ ಕಾರಣ ಹೊರಗುಳಿದ ವಾರ್ನರ್‌: ಕಮಿನ್ಸ್‌ಗೆ ವಿಶ್ರಾಂತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ತೊಡೆ ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್‌ ಅವರು ಭಾರತದ ವಿರುದ್ಧದ ಸೀಮಿತ ಓವರ್‌ಗಳ ಸರಣಿಯ ಉಳಿದ ಪಂದ್ಯಗಳಿಗೆ ಲಭ್ಯ ಇರುವುದಿಲ್ಲ. ವೇಗದ ಬೌಲರ್ ಪ್ಯಾಟ್‌ ಕಮಿನ್ಸ್ ಅವರಿಗೆ ತಂಡವು ವಿಶ್ರಾಂತಿ ನೀಡಿದೆ.

ಸರಣಿಯಲ್ಲಿ ಭರ್ಜರಿ ಲಯದಲ್ಲಿದ್ದ ವಾರ್ನರ್‌ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 69 ಮತ್ತು 83 ರನ್‌ ಗಳಿಸಿದ್ದರು. ಸಿಡ್ನಿಯಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡುವ ವೇಳೆ ಅವರಿಗೆ ಗಾಯವಾಗಿತ್ತು. ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 51 ರನ್‌ಗಳಿಂದ ಭಾರತವನ್ನು ಸೋಲಿಸಿ ಸರಣಿ ಗೆದ್ದುಕೊಂಡಿತ್ತು.

ಸದ್ಯ ಮನೆಗೆ ಮರಳಿರುವ ವಾರ್ನರ್‌, ಪುನಶ್ಚೇತನಕ್ಕೆ ಶಿಬಿರಕ್ಕೆ ಹಾಜರಾಗಲಿದ್ದಾರೆ. ಡಿಸೆಂಬರ್ 17ರಂದು ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯದ ವೇಳೆಗೆ ಫಿಟ್‌ ಆಗುವತ್ತ ಚಿತ್ತವಿರಿಸಿದ್ದಾರೆ.

‘ಪ್ಯಾಟ್‌ ಹಾಗೂ ಡೇವಿ (ವಾರ್ನರ್‌) ಅವರು ಟೆಸ್ಟ್‌ ಸರಣಿಗೆ ಲಭ್ಯವಾಗುವುದು ಮುಖ್ಯ. ಡೇವಿ ಪುನಶ್ಚೇತನಕ್ಕೆ ತೆರಳಿದ್ದಾರೆ.   ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಯಿಂಟ್ಸ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ, ಮುಂದಿನ ಪ್ರಮುಖ ಸರಣಿಗಳಿಗೆ ಫಿಟ್‌ನೆಸ್‌ ಕಾಯ್ದುಕೊಳ್ಳುವ ದೃಷ್ಟಿಯಿಂದ ಪ್ಯಾಟ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ‘ ಎಂದು ಆಸ್ಟ್ರ್ರೇಲಿಯಾ ತಂಡದ ಕೋಚ್‌ ಜಸ್ಟಿನ್ ಲ್ಯಾಂಗರ್‌ ಹೇಳಿದ್ದಾರೆ.

ವಾರ್ನರ್‌ ಅವರ ಬದಲಿಗೆ ಡಿ ಆರ್ಕಿ ಶಾರ್ಟ್‌ ಅವರಿಗೆ ಸ್ಥಾನ ನೀಡಲಾಗಿದೆ. ಎಡಗೈ ಆಟಗಾರ ಆರ್ಕಿ ಅವರು ಬಿಗ್‌ ಬ್ಯಾಷ್‌ ಲೀಗ್‌ನ ಎರಡು ಸರಣಿಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಆಗಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಬುಧವಾರ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ಶುಕ್ರವಾರದಿಂದ ಮೂರು ಟ್ವೆಂಟಿ–20 ಪಂದ್ಯಗಳ ಸರಣಿ ಆರಂಭವಾಗಲಿದೆ. ಬಳಿಕ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

ಮೊದಲ ಏಕದಿನ ಪಂದ್ಯದಲ್ಲಿ ಯಾವುದೇ ವಿಕೆಟ್‌ ಗಳಿಸಿದಿದ್ದ ಪ‍್ಯಾಟ್‌ ಕಮಿನ್ಸ್, ಎರಡನೇ ಪಂದ್ಯದಲ್ಲಿ 67 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದ್ದರು.

ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ಆಲ್‌ರೌಂಡರ್‌ ಮಾರ್ಕಸ್ ಸ್ಟೋಯಿನಿಸ್‌ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಆದರೆ ತಂಡದಲ್ಲಿ ಅವರು ಇರಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು