ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ: ಟಿ20 ವಿಶ್ವಕಪ್ ಅಂಗಳದ ಪ್ರೇರಣೆಯ ಕತೆಗಳು!

ಅಫ್ಗಾನಿಸ್ತಾನವಷ್ಟೇ ಅಲ್ಲ, ಯುಗಾಂಡ, ನೇಪಾಳ, ಪಪುವಾ ನ್ಯೂಗಿನಿ, ಅಮೆರಿಕ, ಕೆನಡಾದಂತಹ ದೇಶಗಳ ಆಟಗಾರರು, ರಿಷಭ್ ಪಂತ್ ಅವರ ಛಲಗಾರಿಕೆಯು ಯುವ ಸಮುದಾಯಕ್ಕೆ ಸ್ಫೂರ್ತಿಯ ಕಥೆಗಳಾಗಿವೆ.
Published 27 ಜೂನ್ 2024, 0:26 IST
Last Updated 27 ಜೂನ್ 2024, 0:26 IST
ಅಕ್ಷರ ಗಾತ್ರ

ವೆಸ್ಟ್ ಇಂಡೀಸ್–ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯು ಈಗ ಪ್ರಮುಖ ಘಟ್ಟಕ್ಕೆ ಬಂದು ನಿಂತಿದೆ. ಗುರುವಾರ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಕಳೆದೊಂದು ದಶಕದಿಂದ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಿರುವ ಅಫ್ಗಾನಿಸ್ತಾನ ಈ ಬಾರಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಅಫ್ಗಾನಿಸ್ತಾನವಷ್ಟೇ ಅಲ್ಲ, ಕ್ರಿಕೆಟ್‌ ಲೋಕಕ್ಕೆ ಈಗಷ್ಠೇ ತೆರೆದುಕೊಳ್ಳುತ್ತಿರುವ, ಯುಗಾಂಡ, ನೇಪಾಳ, ಪಪುವಾ ನ್ಯೂಗಿನಿ, ಅಮೆರಿಕ, ಕೆನಡಾದಂತಹ ದೇಶಗಳ ಆಟಗಾರರು, ಭಾರತದ ರಿಷಭ್ ಪಂತ್ ಅವರ ಛಲಗಾರಿಕೆಯು ಯುವ ಸಮುದಾಯಕ್ಕೆ ಸ್ಫೂರ್ತಿಯ ಕಥೆಗಳಾಗಿವೆ..

–––––––––––

ರಶೀದ್ ಖಾನ್ ಹುಟ್ಟಿದ್ದು ಪೂರ್ವ ಅಫ್ಗಾನಿಸ್ತಾನದ ನಂಗರ್‌ಹಾರ್ ಪಟ್ಟಣದಲ್ಲಿ. ಸಂಘರ್ಷ ಪೀಡಿತವಾದ ಅಫ್ಗಾನಿಸ್ತಾನದಿಂದ ಕುಟುಂಬವು ಪಾಕಿಸ್ತಾನಕ್ಕೆ ವಲಸೆ ಹೋಯಿತು. ಕೆಲವು ವರ್ಷಗಳವರೆಗೆ ಅಲ್ಲಿಯ ನಿರಾಶ್ರಿತರ ಶಿಬಿರದಲ್ಲಿ ವಾಸವಿತ್ತು. ಸಂಘರ್ಷ ಮುಗಿದು ವಾತಾವರಣ ತಿಳಿಯಾದ ನಂತರ ತಾಯ್ನಾಡಿಗೆ ರಶೀದ್ ಅವರ ಕುಟುಂಬ ಮರಳಿತ್ತು. ಶಾಲೆಗೆ ಹೋಗಲು ಆರಂಭಿಸಿದ ರಶೀದ್ ಕ್ರಿಕೆಟ್ ಚೆಂಡು ಕೈಗೆ ತೆಗೆದುಕೊಂಡರು. ಎಳೆಯ ಬೆರಳುಗಳಲ್ಲಿ ಸ್ಪಿನ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ಸ್ಪಿನ್ ಬೌಲಿಂಗ್ ಅವರ ಜೀವನವನ್ನಷ್ಟೇ ಅಲ್ಲ; ಅಫ್ಗಾನಿಸ್ತಾನದ ಯುವಜನತೆಯ ಮನಸ್ಸನ್ನೂ ಪರಿವರ್ತಿಸಿತು.

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ ಅವರು ಭಾರತೀಯ ನೆಲದಲ್ಲಿಯೂ ಅಭಿಮಾನಿ ಬಳಗವನ್ನು ಸಂಪಾದಿಸಿದರು. ಅಷ್ಟೇ ಅಲ್ಲ; ತಮ್ಮ ದೇಶದ ಯುವ ಕ್ರಿಕಟಿಗರಿಗೆ ‘ಗುರು’ವಾಗಿ, ಸ್ನೇಹಿತನಾಗಿ ತಂಡ ಕಟ್ಟಿದರು. ಇದೀಗ ಅವರ ನಾಯಕತ್ವದ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. 25 ವರ್ಷದ ರಶೀದ್ ಈಗ ಎಲ್ಲರ ಕಣ್ಮಣಿಯಾಗಿದ್ದಾರೆ. ಅವರೊಂದಿಗೆ ಆಡುತ್ತಿರುವ ಗುಲ್ಬದೀನ್ ನೈಬ್, ನವೀನ್ ಉಲ್ ಹಕ್, ಇಬ್ರಾಹಿಂ ಝದ್ರಾನ್, ಫಜಲ್‌ಹಕ್ ಫಾರೂಕಿ, ರೆಹಮಾನುಲ್ಲಾ ಗುರ್ಬಾಜ್ ಅವರೂ ಈಗ ಅಫ್ಗಾನ್ ಯುವಜನರ ನೆಚ್ಚಿನ ಆಟಗಾರರಾಗಿದ್ದಾರೆ.

ಎರಡು ದಿನಗಳ ಹಿಂದೆ ಕೆರೀಬಿಯನ್ ದ್ವೀಪದ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆದ್ದ ಅಫ್ಗಾನ್ ತಂಡವು ವಿಶ್ವಕಪ್ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು. ಇತ್ತ ಕಾಬೂಲ್ ನಗರದ ರಸ್ತೆ, ಚೌಕಗಳಲ್ಲಿ ಸಾವಿರಾರು ಜನರು ಕುಣಿದು ಕುಪ್ಪಳಿಸಿದರು. ಹಲವು ವರ್ಷಗಳಿಂದ ಯುದ್ಧ, ಹಿಂಸೆ, ರಾಜಕೀಯ ಅಸ್ಥಿರತೆಗಳನ್ನೇ ಹಾಸಿ ಹೊದ್ದುಕೊಂಡ ದೇಶದಲ್ಲಿ ಇಂತಹುದೊಂದು ಸಂಭ್ರಮದ ಹೊನಲು ಹರಿಯಲು ಕ್ರಿಕೆಟ್ ಕಾರಣವಾಗಿದೆ. 

2010ರಲ್ಲಿ ಮೊದಲ ಅಂತರರಾಷ್ಟ್ರೀಯ ಟಿ20 ಪಂದ್ಯ ಆಡಿದ್ದ ಅಫ್ಗಾನ್ ತಂಡವು 2017ರಲ್ಲಿ ಟೆಸ್ಟ್ ಕ್ರಿಕೆಟ್ ಮಾನ್ಯತೆ ಗಳಿಸಿತ್ತು. ಕಳೆದ 14 ವರ್ಷಗಳಲ್ಲಿ ಈ ತಂಡವು ಆಡಿದ ವಿಶ್ವಕಪ್ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತ ಒಂದೊಂದೇ ಮೆಟ್ಟಿಲು ಏರಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತದಲ್ಲಿ ನ್ಯೂಜಿಲೆಂಡ್, ಸೂಪರ್ 8ರ ಹಂತದಲ್ಲಿ ಆಸ್ಟ್ರೇಲಿಯಾದಂತಹ ಬಲಾಢ್ಯರನ್ನು ಸೋಲಿಸಿತು. ಇದೀಗ ದಕ್ಷಿಣ ಆಫ್ರಿಕಾವನ್ನು ನಾಲ್ಕರ ಘಟ್ಟದಲ್ಲಿ ಎದುರಿಸಲಿದೆ. 

ಅಫ್ಗಾನಿಸ್ತಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುವುದಕ್ಕೂ ವ್ಯವಸ್ಥೆ ಇರದ ಕಾಲದಲ್ಲಿ ಈ ಹುಡುಗರು ಕ್ರಿಕೆಟಿಗರಾಗುವ ಕನಸು ಕಂಡವರು. ಆ ಸಂದರ್ಭದಲ್ಲಿ ಇಲ್ಲಿಯ ಪ್ರತಿಭಾನ್ವಿತ ಆಟಗಾರರಿಗೆ ಆಶ್ರಯ ಕೊಟ್ಟಿದ್ದು ಭಾರತ. ಡೆಹ್ರಾಡೂನ್ ಮತ್ತು ಗ್ರೇಟರ್‌ ನೋಯ್ಡಾ, ಅಫ್ಗಾನಿಸ್ತಾನ ತಂಡಕ್ಕೆ ತವರು ತಾಣಗಳಾಗಿದ್ದವು. ಭಾರತದ ಲಾಲ್‌ಚಂದ್ ರಜಪೂತ್, ಮನೋಜ್ ಪ್ರಭಾಕರ್ ಮತ್ತು ಅಜಯ್ ಜಡೇಜ ಅವರು ತಂಡಕ್ಕೆ ಮಾರ್ಗದರ್ಶನ ನೀಡಿದರು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಎಲ್ಲ ರೀತಿಯಲ್ಲಿಯೂ ಬೆಂಬಲಿಸಿದೆ. 

ಈ ಬಾರಿ ಅಫ್ಗಾನಿಸ್ತಾನ ಚಾಂಪಿಯನ್ ಆಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ, ಒಂದು ಹಿಂಸಾಪೀಡಿತ ದೇಶದ ಜನರ ಮನಃಸ್ಥಿತಿಯನ್ನು ಬದಲಿಸಿ, ಭರವಸೆಯ ಬೆಳಕಿನೆಡೆಗೆ ಕೈಹಿಡಿದು ನಡೆಸುವ ಶಕ್ತಿ ಕ್ರೀಡೆಗೆ ಇದೆ ಎಂಬುದನ್ನು ಅಫ್ಗಾನಿಸ್ತಾನ ತೋರಿಸಿಕೊಟ್ಟಿದೆ. 

‘ಕ್ರೀಡೆಗೆ ವಿಶ್ವವನ್ನು ಬದಲಿಸುವ ಶಕ್ತಿ ಇದೆ. ಪ್ರೇರಣೆ ನೀಡುವ ಸಾಮರ್ಥ್ಯವೂ ಇದೆ’ ಎಂದು ದಕ್ಷಿಣ ಆಫ್ರಿಕಾದ ನಾಯಕ ನೆಲ್ಸನ್ ಮಂಡೇಲಾ ದಶಕಗಳ ಹಿಂದೆ ಹೇಳಿದ ಮಾತು ಅಫ್ಗಾನಿಸ್ತಾನದಲ್ಲಿಯೂ ದಿಟವಾಗಿದೆ. 

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅಫ್ಗಾನಿಸ್ತಾನದ್ದು ಒಂದು ಯಶೋಗಾಥೆ. ಅದೇ ರೀತಿ ಬೇರೆ ಬೇರೆ ತಂಡಗಳಲ್ಲಿ ಇಣುಕಿ ನೋಡಿದರೆ ಸ್ಫೂರ್ತಿಯ ಇನ್ನಷ್ಟು ಕತೆಗಳು ಹೃದಯದ ಕದ ತಟ್ಟುತ್ತವೆ.

ಕೊಳೆಗೇರಿಯಿಂದ ಹೊರಹೊಮ್ಮಿದ ತಾರೆ 

ಯುಗಾಂಡ ದೇಶದ ರಾಜಧಾನಿ ಕಂಪಾಲಾದ ಹೊರವಲಯದಲ್ಲಿರುವ ಕೊಳೆಗೇರಿ ನುಗುರು. ಡ್ರಗ್ಸ್‌, ಗೂಂಡಾಗಿರಿ ಮತ್ತಿತರ ಕಾನೂನುಬಾಹಿರ ಚಟುವಟಿಕೆಗಳ ತಾಣ. 

ಅಂತಹದೊಂದು ತಾಣದಿಂದ ಹೊರಹೊಮ್ಮಿದ ಪ್ರತಿಭೆ ಜುಮಾ ಮಿಯಾಗಿ. 21 ವರ್ಷದ ಬಲಗೈ ವೇಗಿ ಮಿಯಾಗಿಯು ಬಡ ಕುಟುಂಬದ ಹುಡುಗ. ಈಗ ಅದೇ ಪ್ರದೇಶದ ಹಲವಾರು ಹುಡುಗರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.  ಯುಗಾಂಡ ತಂಡವು ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸುವಲ್ಲಿ ಈ ಹುಡುಗನ ಪಾತ್ರವೂ ಇತ್ತು. ತಂಡದಲ್ಲಿರುವ ಬಹುತೇಕ ಸ್ಥಳೀಯರು ಇಂತಹ ಹಿನ್ನೆಲೆಯಿಂದ ಬಂದವರು. 

ಕಾನೂನುಬಾಹಿರ ಚಟುವಟಿಕೆಗಳಲ್ಲಿದ್ದ ಹುಡುಗರ ಜೀವನದ ದಿಕ್ಕು ಬದಲಿಸುವಲ್ಲಿ ಭಾರತದ ಕಾಣಿಕೆ ಇಲ್ಲಿಯೂ ಇದೆ.  ಭಾರತದ  ಕೋಚ್ ಅಭಯ್ ಶರ್ಮಾ ಅವರು ಈ ಎಲ್ಲ ಹುಡುಗರನ್ನು ಒಂದೆಡೆ ಸೇರಿಸಿ ತಂಡವಾಗಿ ಬೆಳೆಸಿದ್ದು ಕೂಡ ರೋಚಕ ಕತೆಯೇ ಸರಿ.

ಐಟಿ ಉದ್ಯೋಗಿಗಳ ಛಲ

ಭಾರತ, ಪಾಕಿಸ್ತಾನ ಮತ್ತಿತರ ದೇಶಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಲು ಅಮೆರಿಕ, ಕೆನಡಾ ದೇಶಗಳಿಗೆ ವಲಸೆ ಹೋದ ಹುಡುಗರು ಈಗ ಕ್ರಿಕೆಟ್ ತಾರೆಯರಾಗಿ ಹೊರಹೊಮ್ಮಿದ್ದಾರೆ. 

ಅಮೆರಿಕ ತಂಡದಲ್ಲಿರುವ ಸೌರಭ್ ನೇತ್ರಾವಳ್ಕರ್ ಅವರು ಗುಂಪು ಹಂತದಲ್ಲಿ ಪಾಕಿಸ್ತಾನದ ಎದುರು ಗೆಲುವಿನ ರೂವಾರಿಯಾದರು.  ಇದೇ ತಂಡದಲ್ಲಿರುವ ಕನ್ನಡಿಗ ನಾಸ್ತುಷ್ ಕೆಂಜಿಗೆ, ಮೊನಾಂಕ್ ಪಟೇಲ್, ಪಾಕಿಸ್ತಾನದ ಅಲಿ ಖಾನ್, ಕೆನಡಾ ತಂಡದಲ್ಲಿರುವ ಕನ್ನಡಿಗ ಶ್ರೇಯಸ್ ಮೊವಾ ಹೀಗೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಇವರೆಲ್ಲರ ಶ್ರಮದಿಂದಾಗಿ ಈಗ ಅಮೆರಿಕದಲ್ಲಿಯೂ ಕ್ರಿಕೆಟ್ ಗೀಳು ಸೃಷ್ಟಿಯಾಗಿದೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸಾಂಪ್ರದಾಯಿಕ ಎದುರಾಳಿಗಳಾಗಿಯೇ ಉಳಿದಿವೆ. ಆದರೆ ಅಮೆರಿಕ ತಂಡದಲ್ಲಿ ಉಭಯ ದೇಶಗಳ ಆಟಗಾರರು ಸೇರಿಕೊಂಡು ಪಾಕಿಸ್ತಾನ ತಂಡವನ್ನು ಸೋಲಿಸಿದರು. ಭಾರತ ತಂಡಕ್ಕೆ ಉತ್ತಮ ಪೈಪೋಟಿಯೊಡ್ಡಿದರು. ಎಲ್ಲಕ್ಕಿಂತ ಮಿಗಿಲಾಗಿ ಕ್ರೀಡೆಯ ಮೂಲತತ್ವವಾದ ಸೌಹಾರ್ದ ಮೆರೆದರು.

ರಿಷಭ್ ಪಂತ್

ರಿಷಭ್ ಪಂತ್

ದಿಟ್ಟೆದೆಯ ಹುಡುಗ ಪಂತ್ 

ಒಂದೂವರೆ ವರ್ಷದ ಹಿಂದೆ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಿಷಭ್ ಪಂತ್ ಅವರನ್ನು ನೋಡಿದ್ದವರೆಲ್ಲರೂ ‘ಅಯ್ಯೋ, ಈ ಹುಡುಗನ ಕ್ರಿಕೆಟ್ ಇಲ್ಲಿಗೆ ಮುಗಿಯಿತು’ ಎಂದಿದ್ದರು. ಆದರೆ ಹಾಗಾಗಲಿಲ್ಲ. 

ರಿಷಭ್ ಪಂತ್ ಅಪಘಾತಕ್ಕಿಂತ ಮುಂಚೆ ಆಡುತ್ತಿದ್ದ ರೀತಿಗಿಂತಲೂ ಈಗ ಹೆಚ್ಚು ಮಿಂಚುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೂಲಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಆಡಿದರು. ಬ್ಯಾಟಿಂಗ್, ಕೀಪಿಂಗ್‌ನಲ್ಲಿ ಮಿಂಚಿದರು. 

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ತಂಡದಲ್ಲಿ ಸ್ಥಾನ ಪಡೆದಾಗ ಹಲವರು ಹುಬ್ಬೇರಿಸಿದ್ದರು. ಆದರೆ ಈಗ ಅದೇ ಜನಗಳು ರಿಷಭ್ ಆಟಕ್ಕೆ ತಲೆದೂಗುತ್ತಿದ್ದಾರೆ. 

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಒಟ್ಟು ಆರು ಪಂದ್ಯಗಳಿಂದ 167 ರನ್‌ ಪೇರಿಸಿದ್ದಾರೆ. ವಿಕೆಟ್‌ ಕೀಪಿಂಗ್‌ನಲ್ಲಿಯಂತೂ ಚಿರತೆ ವೇಗ ತೋರುತ್ತಿದ್ದಾರೆ. ತಮ್ಮ ಎಡ ಮತ್ತು ಬಲ ಬದಿಗೆ ಮಿಂಚಿನ ವೇಗದಲ್ಲಿ ಡೈವ್ ಮಾಡಿ ಚೆಂಡನ್ನು ತಡೆಯುತ್ತಿದ್ದಾರೆ. ಎತ್ತರಕ್ಕೆ ಚಿಮ್ಮಿದ ಚೆಂಡನ್ನು ಬಹುದೂರದವರೆಗೂ ಬೆನ್ನತ್ತಿ ಗ್ಲೌಸ್‌ನಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಒಟ್ಟಾರೆ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡುತ್ತಿದ್ದಾರೆ. 

ಸಣ್ಣಪುಟ್ಟ ಗಾಯಗಳಿಗೆ ಅಂಜಿ ಅಟದಿಂದ ಬಿಡುವು ಪಡೆಯುವವರಿಗೆ ರಿಷಭ್ ಛಲದ ಪಾಠ ಹೇಳಿಕೊಡುತ್ತಿದ್ದಾರೆ. 

---

ಪೂರಕ ಮಾಹಿತಿ– ಪ್ರದೀಪ್ ಮರೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT