ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ಬೂಮ್ರಾ ವಿಶ್ವದ ಅತ್ಯುತ್ತಮ ಟಿ20 ವೇಗದ ಬೌಲರ್: ಶೇನ್ ಬಾಂಡ್

Last Updated 6 ನವೆಂಬರ್ 2020, 13:08 IST
ಅಕ್ಷರ ಗಾತ್ರ

ದುಬೈ: ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪರಿಣಾಮಕಾರಿಯಾಗಿಬೌಲಿಂಗ್‌ ಮಾಡಿದ್ದ ಜಸ್‌ಪ್ರೀತ್‌ ಬೂಮ್ರಾ ಅವರನ್ನು ಟಿ–20 ಕ್ರಿಕೆಟ್‌ನ ಅತ್ಯುತ್ತಮ ವೇಗಿ ಎಂದು ಮುಂಬೈ ಇಂಡಿಯನ್ಸ್‌ ಬೌಲಿಂಗ್‌ ಕೋಚ್‌ ಶೇನ್‌ ಬಾಂಡ್ ಶ್ಲಾಘಿಸಿದ್ದಾರೆ.

ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗುರುವಾರ ನಡೆದ ಐಪಿಎಲ್‌–2020 ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಾಟ ನಡೆಸಿದ್ದವು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಮುಂಬೈ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 200 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಡೆಲ್ಲಿ ಖಾತೆ ತೆರೆಯುವ ಮುನ್ನವೇ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅದಕ್ಕೆ ಕಾರಣವಾಗಿದ್ದು, ಟ್ರೆಂಟ್‌ ಬೌಲ್ಟ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ. ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಸ್ (65) ಮತ್ತು ಅಕ್ಷರ್ ಪಟೇಲ್ (42) ಪ್ರತಿರೋಧ ತೋರಿದ್ದರಿಂದ ಡೆಲ್ಲಿ ತಂಡ 8 ವಿಕೆಟ್‌ಗಳನ್ನು ಕಳೆದುಕೊಂಡು 143 ರನ್ ಗಳಿಸಲುಶಕ್ತವಾಯಿತು.

ಪಂದ್ಯದಲ್ಲಿ ನಾಲ್ಕು ಓವರ್‌ ಬೌಲಿಂಗ್ ಮಾಡಿದ ಬೂಮ್ರಾ ಕೇವಲ 14 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದರು. ಇದರಿಂದಾಗಿ ಮುಂಬೈ 57 ರನ್ ಅಂತರದ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಬೂಮ್ರಾ ಪ್ರದರ್ಶನದ ಬಗ್ಗೆ ಮಾತನಾಡಿರುವ ಬಾಂಡ್‌,‘ಜಸ್‌ಪ್ರೀತ್, ವಿಶ್ವದ ಅತ್ಯುತ್ತಮ ಟಿ20 ವೇಗಿಯ‌ ಪ್ರದರ್ಶನವನ್ನು ನೋಡುವುದೇ ಭಾಗ್ಯ’ ಎಂದು ಮುಂಬೈ ತಂಡ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಒಟ್ಟು 14 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಬೂಮ್ರಾ 27 ವಿಕೆಟ್‌ಗಳನ್ನು ಕಬಳಿಸಿದ್ದು, ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT