ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2020: ಹರಾಜು ಕಟ್ಟೆಯಲ್ಲಿ ಕಾಡಿದ ಅಚ್ಚರಿಗಳು

Last Updated 23 ಡಿಸೆಂಬರ್ 2019, 7:18 IST
ಅಕ್ಷರ ಗಾತ್ರ

ಕ್ರಿಕೆಟ್ ಅಂಗಳದಲ್ಲಿ ‘ಚಿನ್ನದ ಮೊಟ್ಟೆ ಇಡುವ ಕೋಳಿ’ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ. ಇದರ ಮತ್ತೊಂದು ಹರಾಜು ಪ್ರಕ್ರಿಯೆ ಮುಗಿದಿದೆ. ಎಂಟು ಫ್ರ್ಯಾಂಚೈಸ್‌ಗಳು ತಮ್ಮ ತಂಡಗಳನ್ನು ಆಯ್ಕೆ ಮಾಡಿಕೊಂಡು ಸಿದ್ಧವಾಗಿವೆ. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಫ್ರ್ಯಾಂಚೈಸ್‌ಗಳ ‘ವಿದೇಶಿ ವ್ಯಾಮೋಹ’ ಮತ್ತೊಮ್ಮೆ ಬಹಿರಂಗವಾಯಿತು. ಇದರ ನಡುವೆ ಕೆಲವು ಅಚ್ಚರಿಗಳು ಕಾಡಿದವು. ಐಪಿಎಲ್‌ನ 13ನೇ ಆವೃತ್ತಿಯ ಟೂರ್ನಿ ಮುಗಿಯುವವರೆಗೂ ಆ ಘಟನೆಗಳು ಪದೇ ಪದೇ ನೆನಪಾದರೆ ಅಚ್ಚರಿ ಏನಿಲ್ಲ. ಅವುಗಳಲ್ಲಿ ಪ್ರಮುವಾದವು ಇಲ್ಲಿವೆ.

ಪವನ್ ದೇಶಪಾಂಡೆ ಅದೃಷ್ಟ ಒಲಿಯುವುದೇ?

ಐಪಿಎಲ್ ಶುರುವಾದಾಗಿನಿಂದಲೂ ತಾರೆಗಳ ದಂಡು ಕಟ್ಟಿಕೊಂಡು ಕಣಕ್ಕಿಳಿಯುವ ಆರ್‌ಸಿಬಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯ ಆಟಗಾರರಿಗೆ ಅವಕಾಶ ಕೊಡುತ್ತಿಲ್ಲ ಎಂಬ ಆರೋಪವನ್ನೂ ಎದುರಿಸುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದ ತಂಡದಲ್ಲಿ ಎರಡು ವರ್ಷಗಳ ಹಿಂದೆ ಸ್ಥಾನ ಪಡೆದಿದ್ದ ಧಾರವಾಡದ ಹುಡುಗ ಪವನ್ ದೇಶಪಾಂಡೆ ಈಗ ಮತ್ತೆ ಮರಳಿದ್ದಾರೆ. ಹೋದ ವರ್ಷ ಅವರನ್ನು ಆಯ್ಕೆ ಮಾಡಿರಲಿಲ್ಲ. ಆ ವರ್ಷ ತಂಡದಲ್ಲಿ ಸ್ಥಾನ ಪಡೆದಿದ್ದ ದೇವದತ್ತ ಪಡಿಕ್ಕಲ್ ಅವರನ್ನು ಆರ್‌ಸಿಬಿ ಉಳಿಸಿಕೊಂಡಿದೆ. ಆದರೆ ಈ ಇಬ್ಬರೂ ಆಟಗಾರರಿಗೆ ಕಣಕ್ಕಿಳಿಯುವ ಅವಕಾಶ ಈ ಬಾರಿಯಾದರೂ ತಂಡವು ನೀಡುವುದೇ ಎಂಬುದೇ ಈಗ ಪ್ರಶ್ನೆ. ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ದೇವದತ್ತ ದೇಶಿ ಕ್ರಿಕೆಟ್‌ನಲ್ಲಿ ರನ್‌ಗಳ ಹೊಳೆ ಹರಿಸುತ್ತಿದ್ದಾರೆ. ಆಲ್‌ರೌಂಡರ್ ಪವನ್ ತಮಗೆ ಸಿಕ್ಕ ಅವಕಾಶಗಳಲ್ಲಿ ಮಿಂಚುತ್ತಿದ್ದಾರೆ. ಎಡಗೈ ಆಟಗಾರರಿಬ್ಬರಿಗೂ ಕಣಕ್ಕಿಳಿಯುವ ಉತ್ಸಾಹವಂತೂ ಇದೆ.

ಮುಷ್ಫೀಕುರ್ ರಹೀಮ್‌ಗೆಸಿಗದ ಅವಕಾಶ

ಬಾಂಗ್ಲಾದೇಶದ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಮುಷ್ಫಿಕುರ್ ರಹೀಮ್ ಅವರು ಕಳೆದ ಒಂದು ವರ್ಷದಿಂದ ಪಟ್ಟ ಪರಿಶ್ರಮಕ್ಕೆ ಐಪಿಎಲ್‌ನಲ್ಲಿ ಬೆಲೆ ಸಿಗಲಿಲ್ಲ. 75 ಲಕ್ಷ ಮೂಲಬೆಲೆ ಹೊಂದಿದ್ದ ರಹೀಂ ಅವರತ್ತ ತಂಡಗಳು ಒಲವು ತೋರಲಿಲ್ಲ. ಅಂತರರಾಷ್ಟ್ರೀಯ ಟಿ20ಯಲ್ಲಿ 119.23ರ ಸ್ಟ್ರೈಕ್‌ರೇಟ್ ಹೊಂದಿರುವ ರಹೀಂ ಅವರ ಆಯ್ಕೆ ನಿರೀಕ್ಷಿಸಲಾಗಿತ್ತು. ಏಕದಿನ, ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಅವರು ಉತ್ತಮ ದಾಖಲೆ ಹೊಂದಿದ್ದಾರೆ. ಶಕೀಬ್ ಅಲ್ ಹಸನ್ ನಿಷೇಧಕ್ಕೊಳಗಾಗಿರುವುದರಿಂದ ಐಪಿಎಲ್‌ನಲ್ಲಿ ಆಡುವಂತಿಲ್ಲ. ಆದ್ದರಿಂದ ಬಾಂಗ್ಲಾದಿಂದ ರಹೀಂ ಅವರಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಹುಸಿಯಾಯಿತು.

ರೋಹನ್ ಕದಂ ಯಾಕಿಲ್ಲ?

ಕರ್ನಾಟಕ ಕ್ರಿಕೆಟ್ ತಂಡವು ಸತತ ಎರಡು ವರ್ಷ ಸೈಯದ್

ಮುಷ್ತಾಕ್ ಅಲಿ ಟ್ರೋಫಿ ಜಯಿಸುವಲ್ಲಿ ಪ್ರಮುಖ ಯೋಗದಾನ ನೀಡಿದ ಧಾರವಾಡ ವಲಯದ ಹುಡುಗ ರೋಹನ್ ಕದಂ ಅವರ ಮೇಲೆ ಈ ಬಾರಿಯೂ ಯಾವುದೇ ಫ್ರ್ಯಾಂಚೈಸಿನ ದೃಷ್ಟಿ ಬಿದ್ದಿಲ್ಲ. ದೇಶಿ ಟಿ20 ಟೂರ್ನಿಯಲ್ಲಿ 20 ಪಂದ್ಯಗಳನ್ನು ಆಡಿರುವ ಎಡಗೈ ಬ್ಯಾಟ್ಸ್‌ಮನ್ ರೋಹನ್ ಖಾತೆಯಲ್ಲಿ 793 ರನ್‌ಗಳು ಇವೆ. ಅದರಲ್ಲಿ ಎಂಟು ಅರ್ಧಶತಕಗಳು ಇವೆ. ಯಾವುದೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದರೂ ಸಿಕ್ಸರ್‌ ಎತ್ತುವ ದಿಟ್ಟೆದೆಯ ಹುಡುಗ. ರೋಹನ್ ಈ ಬಾರಿಯೂ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನೇ ಗಿಟ್ಟಿಸಲಿಲ್ಲ. ₹ 20 ಲಕ್ಷ ಮೂಲಬೆಲೆಯೂ ಅವರಿಗೆ ಇತ್ತು. ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅವರಿಗಿಂತ ಕಡಿಮೆ ಸಾಧನೆ ಮಾಡಿದ ಸೌರಭ್ ತಿವಾರಿ, ವಿರಾಟ್ ಸಿಂಗ್‌ಗೆ ಅವಕಾಶ ಸಿಕ್ಕಿದೆ. ರೋಹನ್ ಕದಂ ಅವರಿಗೆ ಐಪಿಎಲ್ ಹೋಗಲಿ; ರಾಜ್ಯದ ರಣಜಿ ತಂಡದಲ್ಲಿಯೂ ಅವಕಾಶ ಲಭಿಸಿಲ್ಲ.

ಕಾರ್ಲೊಸ್ ಬ್ರಾಥ್‌ವೇಟ್‌ಗಿಲ್ಲ ‘ವೇಟ್‌’

ವೆಸ್ಟ್ ಇಂಡೀಸ್ ತಂಡವು ಭಾರತದ ನೆಲದಲ್ಲಿ 2016ರಲ್ಲಿ ಟಿ20

ವಿಶ್ವಕಪ್ ಎತ್ತಿಹಿಡಿಯಲು ಕಾರಣವಾಗಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ಕಾರ್ಲೋಸ್ ಬ್ರಾಥ್‌ವೇಟ್‌ ಅವರಿಗೂ ಈ ಸಲ ಅವಕಾಶ ಸಿಕ್ಕಿಲ್ಲ. ಸನ್‌ರೈಸರ್ಸ್ ಹೈದರಾಬಾದ್, ಕೆಕೆಆರ್ ಸೇರಿದಂತೆ ವಿಶ್ವದ ಬಹುತೇಕ ಎಲ್ಲ ಫ್ರ್ಯಾಂಚೈಸ್‌ ಲೀಗ್‌ಗಳಲ್ಲಿಯೂ ಕಾರ್ಲೋಸ್ ತಮ್ಮ ಛಾಪು ಮೂಡಿಸಿದ್ದಾರೆ. ಈ ಬಾರಿ ಅವರಿಗೆ ₹ 50 ಲಕ್ಷ ಮೂಲಬೆಲೆ ನಿಗದಿಪಡಿಸಲಾಗಿತ್ತು. ಆದರೆ, ಅವರಿಗೆ ಅವಕಾಶವೇ ಸಿಗದಿರುವುದು ಅಚ್ಚರಿ ಮೂಡಿಸಿದೆ. ಆದರೆ ವಿಂಡೀಸ್‌ನ ಬೌಲರ್ ಶೆಲ್ಡನ್ ಕಾಟ್ರೆಲ್, ಒಷೆನ್ ಥಾಮಸ್, ಶಿಮ್ರೊನ್ ಹೆಟ್ಮೆಯರ್ ಅವರಿಗೆಲ್ಲ ಅವಕಾಶ ದೊರೆತಿದೆ. ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್ ಅವರಂತೂ ಇದ್ದೇ ಇದ್ದಾರೆ.

48ರ ತಾಂಬೆಗೆ ಅವಕಾಶ!

ಹದಿಮೂರನೇ ಆವೃತ್ತಿಯ ಐಪಿಎಲ್‌ ಹರಾಜಿನಲ್ಲಿ ಆಯ್ಕೆಯಾದ ಅತಿ ಹಿರಿಯ ವಯಸ್ಸಿನ ಕ್ರಿಕೆಟಿಗ ಪ್ರವೀಣ ತಾಂಬೆ. ತಮ್ಮ 48ನೇ

ವಯಸ್ಸಿನಲ್ಲಿಯೂ ಫಿಟ್‌ನೆಸ್ ಕಾಯ್ದುಕೊಂಡಿರುವ ಮುಂಬೈನ ಪ್ರವೀಣ್ ತಮ್ಮ ಮೂಲಬೆಲೆ ₹ 20 ಲಕ್ಷ ಪಡೆದು ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಲೆಗ್‌ಸ್ಪಿನ್ನರ್ ತಾಂಬೆ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ದೂರ ಸರಿದು ಆರು ವರ್ಷಗಳಾಗಿವೆ. ಎರಡು ಪ್ರಥಮದರ್ಜೆ ಪಂದ್ಯಗಳು, 61 ಟಿ20 ದೇಶಿಪಂದ್ಗಗಳನ್ನು ಆಡಿದ ಅನುಭವ ಅವರಿಗೆ ಇದೆ. ಗುಜರಾತ್ ಲಯನ್ಸ್‌, ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್‌ ತಂಡಗಳಿಗೂ ಈ ಹಿಂದೆ ಆಡಿದ್ದರು. ಐಪಿಎಲ್‌ನಲ್ಲಿ ಒಟ್ಟು 33 ಪಂದ್ಯಗಳಿಂದ 28 ವಿಕೆಟ್ ಗಳಿಸಿದ್ದಾರೆ. ಬಹುತೇಕ ಎಲ್ಲ ತಂಡಗಳೂ ಈ ಸಲ ವಿದೇಶಿ ಆಟಗಾರರು ಮತ್ತುಯುವ ಪ್ರತಿಭೆಗಳ ಮೇಲೆ ಕಣ್ಣಿದ್ದವು. ಆದರೆ ಕೆಕೆಆರ್. ತಾಂಬೆಯವರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಿತು.

ಮತ್ತೆ ಮರಳಿದ ವರುಣ್ ಚಕ್ರವರ್ತಿ

ತಮಿಳುನಾಡು ತಂಡದಲ್ಲಿ ಆಡುವ ಲೆಗ್‌ಸ್ಪಿನ್ನರ್ ವರುಣ್

ಚಕ್ರವರ್ತಿಗೆ ಈ ಸಲ ಲಕ್ಷ್ಮೀಕಟಾಕ್ಷವಾಗಿದೆ. ಬರೋಬ್ಬರಿ ₹ 4 ಕೋಟಿ ರೂಪಾಯಿಗೆ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಇವರನ್ನು ಸೆಳೆದುಕೊಂಡಿತು. ₹ 30 ಲಕ್ಷದ ಮೂಲಬೆಲೆ ಇದ್ದ ಇವರನ್ನು ಖರೀದಿಸಲು ಫ್ರ್ಯಾಂಚೈಸ್‌ಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕಡೆಗೆ ಕೆಕೆಆರ್ ಮೇಲುಗೈ ಸಾಧಿಸಿತು. ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಿದ್ದ ಇವರ ಬೌಲಿಂಗ್ ಶೈಲಿಯು ಶ್ರೀಲಂಕಾದ ಸ್ಪಿನ್ನರ್‌ ಅಜಂತಾ ಮೆಂಡಿಸ್ ಅವರನ್ನು ಹೋಲುತ್ತದೆ. ಈ ಟೂರ್ನಿಯಲ್ಲಿ ಅವರು ಪಡೆದಿದ್ದು ಕೇವಲ 9 ವಿಕೆಟ್‌ಗಳನ್ನು ಮಾತ್ರ. ಆದರೆ ಅವರ ಡಾಟ್ ಬಾಲ್ ಸಂಖ್ಯೆಯು ಹೆಚ್ಚಿತ್ತು. ಇನ್ನೊಂದು ವಿಶೇಷವೆಂದರೆ ವರುಣ್ ಜನಿಸಿದ್ದು ಕರ್ನಾಟಕದ ಬೀದರ್‌ನಲ್ಲಿ!

ಪೂಜಾರ ಟೆಸ್ಟ್‌ ಗೆ ಮಾತ್ರ ಸೀಮಿತವೇ?

ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಗೋಡೆ ಎಂದೇ ಖ್ಯಾತರಾಗಿರುವ ಚೇತೇಶ್ವರ್ ಪೂಜಾರ ಅವರಿಗೆ ಈ

ಸಲವೂ ಬಣ್ಣದ ಪೋಷಾಕು ಧರಿಸುವ ಅವಕಾಶ ಸಿಕ್ಕಿಲ್ಲ. ತಾಂತ್ರಿಕವಾಗಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿರುವ ಪೂಜಾರ ಅವರನ್ನು ಟೆಸ್ಟ್‌ ಕ್ರಿಕೆಟ್‌ಗೆ ಮಾತ್ರ ಸೀಮಿತಗೊಳಿಸಲಾಗಿದೆ. ನಿಗದಿಯ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರಿಗೊಂದು ಅವಕಾಶ ಕೊಡುವತ್ತ ಬಿಸಿಸಿಐ ಮತ್ತು ಐಪಿಎಲ್ ಫ್ರ್ಯಾಂಚೈಸ್‌ಗಳು ಮನಸ್ಸು ಮಾಡುತ್ತಿಲ್ಲ. 2010 ರಿಂದ 2014ರ ಅವಧಿಯಲ್ಲಿ ಆರ್‌ಸಿಬಿ, ಕೆಕೆಆರ್. ತಂಡಗಳಲ್ಲಿ ಆಡಿದ್ದರು. 22 ಇನಿಂಗ್ಸ್‌ಗಳಿಂದ 390 ರನ್‌ಗಳನ್ನು ಜಮಾಯಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕವೂ ಇದೆ. 99.74ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಕಳೆದ ಆರು ವರ್ಷಗಳಿಂದ ಅವರನ್ನು ಐಪಿಎಲ್ ಅಂಗಳದಿಂದ ದೂರ ಇಡಲಾಗಿದೆ. ಈ ಸಲವೂ ಅವರಿಗೆ ₹ 50 ಲಕ್ಷ ಮೂಲಬೆಲೆ ನಿಗದಿಪಡಿಸಲಾಗಿತ್ತು. ಇದುವರೆಗೆ ಅವರು ಅಂತರರಾಷ್ಟ್ರೀಯ ಟಿ20 ಆಡುವ ಅವಕಾಶವನ್ನೂ ಪಡೆದಿಲ್ಲ. 2014ರ ನಂತರ ಏಕದಿನ ಕ್ರಿಕೆಟ್ ಅಂಗಳದಲ್ಲಿಯೂ ಅವರು ಕಂಡಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT