ಗುರುವಾರ , ನವೆಂಬರ್ 26, 2020
20 °C

ಐಪಿಎಲ್–2020 ವಿಶ್ವದ ಅತ್ಯುತ್ತಮ ಟೂರ್ನಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ದುಬೈ: ಕೋವಿಡ್‌–19 ಸೋಂಕು ಭೀತಿಯಿಂದಾಗಿ ಸಾಕಷ್ಟು ಅಡೆತಡೆಗಳು ಎದುರಾದರೂ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಸ್ಟಾರ್‌ ವಾಹಿನಿಯ ಪ್ರಯತ್ನದಿಂದಾಗಿ ಈ ವರ್ಷ ಐಪಿಎಲ್‌ ಟೂರ್ನಿಯು ಯಶಸ್ವಿಯಾಗಿ ಆಯೋಜನೆಗೊಂಡಿದೆ. ಇದು ವಿಶ್ವದ ಅತ್ಯುತ್ತಮ ಟೂರ್ನಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

ಸದ್ಯ 47 ಪಂದ್ಯಗಳು ಮುಕ್ತಾಯವಾಗಿದ್ದು, ಟೂರ್ನಿಯು ಅಂತಿಮ ಘಟ್ಟದತ್ತ ಸಾಗಿದೆ. ಪ್ರತಿ ಪಂದ್ಯದಲ್ಲಿಯೂ ಸಾಕಷ್ಟು ಅದ್ಭುತ ಕ್ಷಣಗಳು ದಾಖಲಾಗಿವೆ. ಮಾತ್ರವಲ್ಲದೆ ಐಪಿಎಲ್‌–2020ಯನ್ನು ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅತಿಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಈ ಕುರಿತು ಸ್ಟಾರ್‌ ಸ್ಟೋರ್ಟ್ಸ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಗಂಗೂಲಿ, ‘ನಂಬಲಸಾಧ್ಯ. ಆದರೆ, ನಾನು ಇದೆಲ್ಲದರಿಂದ ಅಚ್ಚರಿಗೊಂಡಿಲ್ಲ. ನಾವು ಟೂರ್ನಿಯ ಆಯೋಜನೆ ಬಗ್ಗೆ ಸ್ಟಾರ್ ವಾಹಿನಿ ಮತ್ತು ಸಂಬಂಧಿಸಿದ ಎಲ್ಲರೊಂದಿಗೆ ಚರ್ಚಿಸಿದ್ದೆವು. ಈ ವರ್ಷಾಂತ್ಯದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವೇ? ಜೈವಿಕ ಸುರಕ್ಷತಾ ವಲಯದ ಅಂತಿಮ ಫಲಿತಾಂಶವೇನು?, ಅದು ಯಶಸ್ವಿಯಾಗುವುದೇ? ಎಂಬುದರ ಬಗ್ಗೆ ಆಲೋಚಿಸಿದ್ದೆವು. ಬಳಿಕ ನಮ್ಮ ಯೋಜನೆಯಂತೆ ಮುಂದುವರಿಯಲು ನಿರ್ಧರಿಸಿದೆವು. ಏಕೆಂದರೆ, ನಾವು ಎಲ್ಲರ ಜೀವನವು ಸಾಮಾನ್ಯ ಸ್ಥಿತಿಗೆ ಮರಳುವುದನ್ನು ಮತ್ತು ಆಟವನ್ನು ವಾಪಸ್‌ ತರಲು ಬಯಸಿದ್ದೆವು. ಸದ್ಯದ ಫಲಿತಾಂಶದಿಂದ ನಾನು ಅಚ್ಚರಿಗೊಂಡಿಲ್ಲ’ ಎಂದು ಹೇಳಿದ್ದಾರೆ.

ಗಂಗೂಲಿ ಅವರ ಪ್ರಕಾರ ಈ ಬಾರಿ ಮೈದಾನದಲ್ಲಿ ಕಂಡು ಬಂದ ಸಾಕಷ್ಟು ನಾಟಕೀಯ ಸನ್ನಿವೇಶಗಳು ಟೂರ್ನಿಯನ್ನು ವಿಶ್ವದ ಶ್ರೇಷ್ಠ ಟೂರ್ನಿಯನ್ನಾಗಿಸಿವೆ.

‘ಇದು ವಿಶ್ವದ ಅತ್ಯುತ್ತಮ ಪಂದ್ಯಾವಳಿ. ಸಾಕಷ್ಟು ಸೂಪರ್‌ ಓವರ್‌ಗಳು ನಡೆದಿವೆ. ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೆಲುವನ್ನು ನಿರ್ಧರಿಸಲು ನಡೆದ ಡಬಲ್ ಸೂಪರ್‌ ಓವರ್‌ ಪಂದ್ಯಕ್ಕೆ ಸಾಕ್ಷಿಯಾಗಿದ್ದೇವೆ. ಶಿಖರ್‌ ಧವನ್‌, ರೋಹಿತ್‌ ಶರ್ಮಾ ಅವರ ಬ್ಯಾಟಿಂಗ್ ಅನ್ನು ಮತ್ತು ಎಲ್ಲ ಯುವ ಆಟಗಾರರ ಪ್ರದರ್ಶನವನ್ನು ನೋಡಿದ್ದೇವೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಹಾಗೂ ಟೂರ್ನಿಯಿಂದ ಬಹುತೇಕ ಹೊರಬಿದ್ದಿದ್ದ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡ ಅಮೋಘ ರೀತಿಯಲ್ಲಿ ಪ್ರದರ್ಶನ ನೀಡಿ ಪ್ಲೇ ಆಫ್‌ನತ್ತ ಸಾಗಿರುವುದಕ್ಕೆ ಸಾಕ್ಷಿಯಾಗಿದ್ದೇವೆ. ನೀವು ಎಲ್ಲವನ್ನೂ ಇಲ್ಲಿ ಪಡೆಯುತ್ತೀರಿ! ಈ ವರ್ಷದ ಐಪಿಎಲ್‌ ಭರ್ಜರಿ ಯಶಸ್ಸು ಸಾಧಿಸಿದೆ ಎಂದು ನಿಮಗೆ ಚಾಲೆಂಜ್‌ ಮಾಡಬಲ್ಲೆ. ರೇಟಿಂಗ್‌ಗಳ ಪ್ರಕಾರ ದಾಖಲೆ ಸಂಖ್ಯೆಯಲ್ಲಿ ಜನರು ಐಪಿಎಲ್‌ ವೀಕ್ಷಿಸಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು