ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2020, DC Vs SRH: ಭರವಸೆಯಲ್ಲಿ ಡೆಲ್ಲಿ, ಹೈದರಾಬಾದ್‌ಗೆ ಜಯದ ನಿರೀಕ್ಷೆ

ಶ್ರೇಯಸ್‌ ಅಯ್ಯರ್‌–ಡೇವಿಡ್ ವಾರ್ನರ್ ಬಳಗಗಳ ಹಣಾಹಣಿ; ಕೇನ್ ವಿಲಿಯಮ್ಸನ್ ಕಣಕ್ಕೆ ಇಳಿಯುವ ಸಾಧ್ಯತೆ
Last Updated 28 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಅಬುಧಾಬಿ: ಬಲಿಷ್ಠ ತಂಡಗಳ ವಿರುದ್ಧದ ಮೊದಲ ಎರಡೂ ಪಂದ್ಯಗಳನ್ನು ಗೆದ್ದುಕೊಂಡು ವಿಶ್ವಾಸದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೂರನೇ ಪಂದ್ಯದಲ್ಲಿ ಮಂಗಳವಾರ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಸನ್‌ರೈಸರ್ಸ್ ತಂಡ ಆಡಿರುವ ಎರಡೂ ಪಂದ್ಯಗಳನ್ನು ಸೋತಿದ್ದು ಮೊದಲ ಜಯದ ಹಂಬಲದಲ್ಲಿದೆ.

ಶ್ರೇಯಸ್‌ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಜಯ ಗಳಿಸಿತ್ತು. ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 44 ರನ್‌ಗಳಿಂದ ಮಣಿಸಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೆ ಏರಿತ್ತು.

ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 10 ರನ್‌ಗಳಿಂದ ಮಣಿದಿದ್ದರೆ, ಎರಡನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ ಏಳು ವಿಕೆಟ್‌ಗಳಿಂದ ಸೋತಿತ್ತು. ಮೊದಲ ಪಂದ್ಯದಲ್ಲಿ 164 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಪರ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೆಸ್ಟೊ (61) ಮತ್ತು ಮೂರನೇ ಕ್ರಮಾಂಕದ ಮನೀಷ್ ಪಾಂಡೆ (34) ಉತ್ತಮವಾಗಿ ಆಡಿದ್ದರು. ಆದರೆ ತಂಡವನ್ನು ಗೆಲುವಿನ ಗಡಿ ದಾಟಿಸಲು ಸಾಧ್ಯವಾಗಿರಲಿಲ್ಲ.

ಎರಡನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ತಂಡಕ್ಕೆ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರ ಬ್ಯಾಟಿನಿಂದ ರನ್‌ಗಳು ಹರಿದು ಬರುತ್ತಿಲ್ಲ. ಇನ್ನೊಂದೆಡೆ, ಗಾಯದಿಂದ ಗುಣಮುಖರಾಗಿರುವ ಕೇನ್ ವಿಲಿಯಮ್ಸನ್ ಅವರಿಗೆ ಆಡುವ 11ರಲ್ಲಿ ಸ್ಥಾನ ನೀಡಬೇಕೆಂಬ ಸಲಹೆ ಕೇಳಿಬರುತ್ತಿದ್ದು ಈ ಪಂದ್ಯದಲ್ಲಿ ತಂಡದ ಆಡಳಿತ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.

ರಬಾಡ ಮೇಲೆ ನಿರೀಕ್ಷೆ
ದಕ್ಷಿಣ ಆಫ್ರಿಕಾ ಆ್ಯನ್ರಿಚ್ ನೋರ್ಜೆ ಮತ್ತು ಕಗಿಸೊ ರಬಾಡ ಜೋಡಿ ಡೆಲ್ಲಿ ತಂಡದ ಬೌಲಿಂಗ್ ವಿಭಾಗದ ಚುಕ್ಕಾಣಿ ಹಿಡಿದಿದ್ದು ಮೊದಲ ಪಂದ್ಯದಲ್ಲಿ ಗಾಯಗೊಂಡಿರುವ ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿಯಲ್ಲಿ ಅಮಿತ್ ಮಿಶ್ರಾ ಮತ್ತು ಅಕ್ಷರ್ ಪಟೇಲ್ ಅವರು ಸ್ಪಿನ್ ದಾಳಿಗೆ ಮೊನಚು ತುಂಬಿದ್ದಾರೆ. ಬ್ಯಾಟಿಂಗ್‌ ವಿಭಾಗಕ್ಕೆ ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಭರವಸೆ ತುಂಬಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರ ಬಲವೂ ತಂಡಕ್ಕಿದೆ.

ಸನ್‌ರೈಸರ್ಸ್ ತಂಡ ಗಾಯಗೊಂಡಿರುವ ಮಿಷೆಲ್ ಮಾರ್ಷ್ ಬದಲಿಗೆ ಮೊಹಮ್ಮದ್ ನಬಿ ಅವರನ್ನು ಕರೆಸಿಕೊಂಡಿದ್ದು ಅವರು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ನಿರೀಕ್ಷೆ ಮೂಡಿಸಿದ್ದಾರೆ. ಸ್ಪಿನ್ನರ್ ರಶೀದ್ ಖಾನ್ ಸ್ಪಿನ್‌ ವಿಭಾಗದ ಭರವಸೆ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT