ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಸ್‌ಕೆನಲ್ಲಿ ಕೋವಿಡ್ ಪತ್ತೆ ಎಲ್ಲರಿಗೂ ಪಾಠ: ನೆಸ್‌ ವಾಡಿಯಾ

Last Updated 3 ಸೆಪ್ಟೆಂಬರ್ 2020, 14:24 IST
ಅಕ್ಷರ ಗಾತ್ರ

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಕೆಲವರಿಗೆಕೋವಿಡ್ –19 ಸೋಂಕು ಇರುವುದು ಖಚಿತವಾಗಿದೆ. ಈ ಪರಿಸ್ಥಿತಿಯು ಟೂರ್ನಿಯಲ್ಲಿರುವ ಯಾವುದೇ ತಂಡಕ್ಕೂ ಬರಬಹುದು. ಆದ್ದರಿಂದ ಎಚ್ಚರಿಕೆ ಅಗತ್ಯ ಎಂದು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್‌ ವಾಡಿಯಾ ಸಲಹೆ ನೀಡಿದ್ದಾರೆ.

‘ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕಡಿಮೆಯೇ.ಆದ್ದರಿಂದ ಜೀವ ಸುರಕ್ಷಾ ನಿಯಮಗಳಿಗೆ ಸಂಪೂರ್ಣ ಬದ್ಧರಾಗಿರಬೇಕು. ಯಾವುದೇ ಶಿಷ್ಟಾಚಾರವನ್ನೂ ಉಲ್ಲಂಘಿಸಬಾರದು. ಆಟಗಾರರು ಮತ್ತು ಅವರೊಂದಿಗೆ ತೀರಾ ಅವಶ್ಯಕತೆಯುಳ್ಳ ವ್ಯಕ್ತಿಗಳು ಮಾತ್ರ ಇರುವಂತೆ ನೋಡಿಕೊಳ್ಳಬೇಕು’ ಎಂದು ವಾಡಿಯಾ ಗುರುವಾರ ಹೇಳಿದರು.

‘ತೀರಾ ಅತ್ಯಗತ್ಯವಾದ ನೆರವು ಸಿಬ್ಬಂದಿ, ಪಂದ್ಯದ ಅಧಿಕಾರಿಗಳು ಮತ್ತು ಆಟಗಾರರು ತಂಡಗಳಲ್ಲಿರಬೇಕೆಂದು ಬಿಸಿಸಿಐ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಅದನ್ನೇ ನಾವು ಕೂಡ ಪಾಲಿಸುತ್ತಿದ್ದೇವೆ. ಆದ್ದರಿಂದ ಸಿಬ್ಬಂದಿಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸಂಖ್ಯೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು’ ಎಂದಿದ್ಧಾರೆ

ಪ್ರತಿಯೊಂದು ಫ್ರ್ಯಾಂಚೈಸ್‌ನಲ್ಲಿ ಆಟಗಾರರು, ತರಬೇತುದಾರರು, ನೆರವು ಸಿಬ್ಬಂದಿ, ತಂಡದ ಕಾರ್ಯಾಚರಣೆಗಳ ವ್ಯವಸ್ಥಾಪಕ, ಸಾಮಾಜಿಕ ಜಾಲತಾಣ ಪರಿಣತರು ಇರುತ್ತಾರೆ. ಬಹುತೇಕ ಎಲ್ಲ ತಂಡಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಮಾಲೀಕರು ಇನ್ನೂ ಯುಎಇಗೆ ತಲುಪಿಲ್ಲ.

‘ಯುಎಇಗೆ ಪ್ರಯಾಣಿಸುವ ಕುರಿತು ನಾನಿನ್ನೂ ನಿರ್ಧಾರ ಮಾಡಿಲ್ಲ. ಸಾಮಾನ್ಯವಾಗಿ ನಾನು ಆಟಗಾರರೊಂದಿಗೆ ಹೆಚ್ಚು ಮುಖಾಮುಖಿ ಸಂವಾದ ನಡೆಸುವುದಿಲ್ಲ. ಮುಖ್ಯ ಕೋಚ್ ಅನಿಲ್ ಕುಂಬ್ಳೆಯವರೊಂದಿಗೆ ಇಲ್ಲಿಯವರೆಗೆ ಎರಡು ಬಾರಿ ಮಾತನಾಡಿ, ವಿವರಗಳನ್ನು ತಿಳಿದುಕೊಂಡಿದ್ದೇನೆ. ಆನ್‌ಲೈನ್ ಮೂಲಕ ಸಂವಾದ ನಡೆಸುವುದು ನನಗೆ ಹಿತವೆನಿಸುತ್ತದೆ’ ಎಂದು ವಾಡಿಯಾ ಹೇಳಿದ್ದಾರೆ.

‘ಫುಟ್‌ಬಾಲ್ ಲೀಗ್‌ಗಳಲ್ಲಿಯೂ ಆರಂಭದಲ್ಲಿ ಬಹಳಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಇಲ್ಲಿಯೂ ಕೂಡ ಎಲ್ಲ ಎಚ್ಚರ ವಹಿಸಿದಾಗಲೂ ಕೆಲವು ಪ್ರಕರಗಣಗಳು ಬೆಳಕಿಗೆ ಬಂದಿವೆ. ಇದರಿಂದ ಹೆಚ್ಚು ಚಿಂತಿಸಬೇಕಿಲ್ಲ. ಮುಂದೆ ಸಾಗಿದಂತೆ ಎಲ್ಲವೂ ಸರಿಯಾಗಲಿದೆ’ ಎಂದು ಉದ್ಯಮಿ ವಾಡಿಯಾ ಭರವಸೆ ವ್ಯಕ್ತಪಡಿಸಿದರು.

ಟೈಟಲ್ ಪ್ರಾಯಜಕತ್ವವು ಕಡಿಮೆ ಮೌಲ್ಯಕ್ಕೆ ಮಂಜೂರಾಗಿರುವುದರ ಕುರಿತು ಪ್ರತಿಕ್ರಿಯಿಸಿದ ವಾಡಿಯಾ, ‘ಪ್ರತಿಯೊಂದು ಸಮಸ್ಯೆಯಿಂದಲೂ ಕೆಲವರಿಗೆ ಲಾಭವಾಗುತ್ತದೆ. ಇನ್ನೂ ಕೆಲವರು ಇಂತಹ ಸಂದರ್ಭದ ಲಾಭ ಪಡೆಯುತ್ತಾರೆ. ಈ ಪರಿಸ್ಥಿತಿಯಲ್ಲಿ ಎಲ್ಲರೂ ಪ್ರಮುಖ ಪ್ರಾಯೋಜಕರೇ ಆಗಿಬಿಡುತ್ತಾರೆ. ಆದರೆ ಈ ಬಾರಿ ಫ್ರ್ಯಾಂಚೈಸ್‌ಗಳಿಗೆ ಸಿಗಬೇಕಾದ ಲಾಭಾಂಶದಲ್ಲಿ ಗಣನೀಯ ಇಳಿಕೆಯಾಗಲಿದೆ. ಕ್ರೀಡಾಂಗಣಗಳಿಗೆ ಪ್ರೇಕ್ಷಕರ ಪ್ರವೇಶ ಇಲ್ಲದ ಕಾರಣ ಶುಲ್ಕದ ರೂಪದಲ್ಲಿ ಸಿಗುತ್ತಿದ್ದ ಆದಾಯವೂ ಇಲ್ಲ. ಆದ್ದರಿಂದ ಬಿಸಿಸಿಐ ಇದೆಲ್ಲಕ್ಕೂ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT