ಸೋಮವಾರ, ಅಕ್ಟೋಬರ್ 26, 2020
29 °C

ಐಪಿಎಲ್–2020: ‘ಚೆನ್ನೈ ಪಂದ್ಯಕ್ಕೂ ಮುನ್ನ 4 ದಿನ ಬಿಡುವು ಸಿಕ್ಕಿದ್ದು ವರವಾಯಿತು’

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಶ್ರೇಯಸ್‌ ಅಯ್ಯರ್‌ ನೇತೃತ್ವದ ‌ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸೂಪರ್ ಓವರ್‌ನಲ್ಲಿ ಅಂತ್ಯ ಕಂಡ ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಶುಭಾರಂಭ ಮಾಡಿದೆ. ಪಂಜಾಬ್‌ ವಿರುದ್ಧದ ಪಂದ್ಯ ಸೆಪ್ಟೆಂಬರ್‌ 20ರಂದು ನಡೆದಿತ್ತು. ಅದಾದ ನಾಲ್ಕು ದಿನಗಳ ನಂತರ ಇದೀಗ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲು ಡೆಲ್ಲಿ ತಂಡ ಸಜ್ಜಾಗಿದೆ. ಈ ಬಿಡುವು ತಮ್ಮ ತಂಡಕ್ಕೆ ವರದಾನಾಗಿದೆ ಎಂದು ಆ ತಂಡದ ಸಹಾಯಕ ಕೋಚ್‌ ಮೊಹಮ್ಮದ್‌ ಕೈಫ್‌ ಹೇಳಿದ್ದಾರೆ.

ಡೆಹಲಿ ಕ್ಯಾಪಿಟಲ್ಸ್‌ ತಂಡದ ಟ್ವಿಟರ್‌ ಖಾತೆಯಲ್ಲಿ ಹಂಚಿಕೆಯಾಗಿರುವ ವಿಡಿಯೊದಲ್ಲಿ ಮಾತನಾಡಿರುವ ಕೈಫ್‌, ‘ಈ ಬಿಡುವು ದೆಹಲಿಗೆ ಅನುಕೂಲಕರವಾಗಿದೆ. ದೀರ್ಘಕಾಲದ ಬಿಡುವಿನ ಬಳಿಕ ಕಣಕ್ಕಿಳಿಯುತ್ತಿರುವುದರಿಂದ ಮೊದಲ ಪಂದ್ಯದಲ್ಲಿ ಆಟಗಾರರು ಅಷ್ಟಾಗಿ ಉತ್ಸಾಹದಿಂದ ಆಡಿರಲಿಲ್ಲ. ಮೊದಲ ಪಂದ್ಯ ನಮ್ಮ ತಂಡಕ್ಕೆ ಅಷ್ಟಾಗಿ ಉತ್ತಮವಾಗಿಯೇನೂ ಇರಲಿಲ್ಲ. ಬಹಳ ಒತ್ತಡದ ಪಂದ್ಯವಾಗಿತ್ತು. ಆದರೂ ಎರಡು ಅಂಕ ಲಿಭಿಸಿತ್ತು. ಅಲ್ಲಿಂದೀಚೆಗೆ ಎರಡನೇ ಪಂದ್ಯಕ್ಕೆ ನಮ್ಮ ಆಟಗಾರರು ಸಾಕಷ್ಟು ಸುಧಾರಿಸಿಕೊಂಡಿರುವುದನ್ನು ನೋಡಿದ್ದೇನೆ’ ಎಂದು ತಿಳಿಸಿದ್ದಾರೆ.

‘ನಾಲ್ಕು ದಿನಗಳ ಬಿಡುವಿನಲ್ಲಿ ನೀವು ಸಾಕಷ್ಟು ಅಭ್ಯಾಸ ಮಾಡಿಕೊಳ್ಳಬಹುದು, ಮುಂದಿನ ಪಂದ್ಯಕ್ಕೆ ಯೋಜನೆಗಳನ್ನು ರೂಪಿಸಬಹುದು. ನಾನು ಆಟಗಾರರೊಂದಿಗೆ ಹೆಚ್ಚು ಸಮಯ ಚರ್ಚಿಸಿದ್ದೇನೆ. ದುಬೈನಲ್ಲಿ ಸನ್ನಿವೇಶ ಹೇಗಿರಲಿದೆ ಎಂಬುದನ್ನು ತಿಳಿಯಲು ಸಾಧ್ಯವಾಯಿತು. ಸಾಕಷ್ಟು ತಂತ್ರಗಳನ್ನು ಈಗಾಗಲೇ ರೂಪಿಸಿದ್ದೇವೆ. ಹಾಗಾಗಿ ಈ ಬಿಡುವು ತಂಡಕ್ಕೆ ಬಹಳ ಅನುಕೂಲಕರವಾಗಿದೆ’ ಎಂದಿದ್ದಾರೆ.

ಚೆನ್ನೈ ವಿರುದ್ಧ ತಮ್ಮ ತಂಡ ಉತ್ತಮವಾಗಿ ಆಡಲಿದೆ ಎಂದು ಭರವಸೆ ವ್ಯಕ್ತಪಡಿಸಿರುವ ಕೈಫ್‌, ‘ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಖಂಡಿತವಾಗಿಯೂ ಬಲಿಷ್ಠ ತಂಡ. ಮಧ್ಯಮ ಕ್ರಮಾಂಕದಲ್ಲಿ ಅವರ ಪ್ರಮುಖ ಅಸ್ತ್ರವೇ ಸ್ಪಿನ್ನರ್‌ಗಳು. ಆದರೆ, ಅದೃಷ್ಟವಶಾತ್ ದುಬೈನಲ್ಲಿ ಈವರೆಗೆ ಚೆಂಡು ಹೆಚ್ಚಿನ ತಿರುವು ಪಡೆದಿಲ್ಲ. ಸಾಕಷ್ಟು ಇಬ್ಬನಿಯೂ ಇರುವುದರಿಂದ ಸ್ಪಿನ್ನರ್‌ಗಳು ಅಷ್ಟೇನೂ ಅಪಾಯಕಾರಿಯಾಗಲಾರರು ಎಂದು ಭಾವಿಸುತ್ತೇನೆ. ಆದರೆ, ಒಂದೂವರೆ ವರ್ಷದ ಹಿಂದೆ ನಡೆದ ಕಳೆದ ಐಪಿಎಲ್‌ನಿಂದ ಈವರೆಗೆ ಹೊಸ ಪರಿಸ್ಥಿತಿಗಳೊಂದಿಗೆ ಸಾಕಷ್ಟು ಬದಲಾವಣೆಗಳು ಆಗಿವೆ. ನಾವು ಇದನ್ನು ಸಂಪೂರ್ಣ ಹೊಸ ಸವಾಲಾಗಿ ಎದುರು ನೋಡುತ್ತಿದ್ದೇವೆ. ಹಾಗಾಗಿ ಈ ಹಿಂದಿನ ಅಂಕಿ–ಅಂಶಗಳು ಲೆಕ್ಕಕ್ಕೆ ಬರುವುದಿಲ್ಲ’ ಎಂದೂ ಹೇಳಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಎರಡು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋಲು ಕಂಡಿದೆ.

ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 157 ರನ್‌ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಪಂಜಾಬ್‌ ಕೂಡ 8 ವಿಕೆಟ್‌ ಕಳೆದುಕೊಂಡು ಇಷ್ಟೇ ರನ್‌ ಗಳಿಸಿತ್ತು. ಹೀಗಾಗಿ ಗೆಲುವಿನ ನಿರ್ಧಾರಕ್ಕಾಗಿ ಸೂಪರ್ ಓವರ್‌ ಮೊರೆ ಹೋಗಲಾಗಿತ್ತು.

ಸೂಪರ್ ‌ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್‌ ಕೇವಲ 2 ರನ್ ಗಳಿಸಿ ಎರಡು ವಿಕೆಟ್‌ ಕಳೆದುಕೊಂಡಿತ್ತು. 3 ರನ್‌ ಗುರಿಯನ್ನು ಕೇವಲ ಎರಡೇ ಎಸೆತಗಳಲ್ಲಿ ಮುಟ್ಟಿದ್ದ ಡೆಲ್ಲಿ ಜಯದ ನಗೆ ಬೀರಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು