ಗುರುವಾರ , ಅಕ್ಟೋಬರ್ 22, 2020
28 °C
ಶ್ರೇಯಸ್ ಅಯ್ಯರ್ – ಸ್ಟೀವನ್ ಸ್ಮಿತ್ ಮುಖಾಮುಖಿ

IPL 2020 | DC vs RR: ಡೆಲ್ಲಿಗೆ ರಾಯಲ್ಸ್‌ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ: ಟೂರ್ನಿಯ ಆರಂಭದಲ್ಲಿ ಅಬ್ಬರಿಸಿದ್ದ ರಾಜಸ್ಥಾನ ರಾಯಲ್ಸ್‌ ತಂಡ ನಂತರ ಮಂಕಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲನುಭವಿಸಿದೆ. ತನ್ನ ನೆಚ್ಚಿನ ಶಾರ್ಜಾ ಕ್ರೀಡಾಂಗಣದಲ್ಲಿ ಶುಕ್ರವಾರ ಸ್ಟೀವನ್ ಸ್ಮಿತ್ ಬಳಗವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಮತ್ತೆ ಜಯದ ಹಾದಿಗೆ ಮರಳುವ ಕನಸು ಕಾಣುತ್ತಿದೆ. ಆರಂಭದಲ್ಲಿ ಇಲ್ಲಿ ಆಡಿದ್ದ ಎರಡೂ ಪಂದ್ಯಗಳಲ್ಲಿಯೂ ರಾಯಲ್ಸ್‌ ಗೆದ್ದಿತ್ತು.ಇಲ್ಲಿಗಿಂತ ತುಸು ದೊಡ್ಡ ಬೌಂಡರಿ ಹೊಂದಿರುವ ದುಬೈ ಮತ್ತು ಅಬುಧಾಬಿಯಲ್ಲಿ ಸ್ಮಿತ್ ಬಳಗವು ಪರದಾಡಿತ್ತು.

ಆದರೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಬಳಗವನ್ನು ಸೋಲಿಸುವುದು ಸುಲಭವಲ್ಲ. ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಒಂದರಲ್ಲಿ ಮಾತ್ರ ಡೆಲ್ಲಿ ಸೋತಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ಗಳಲ್ಲಿ ಶಿಸ್ತಿನ ಆಟವಾಡುತ್ತಿರುವ ಡೆಲ್ಲಿಯನ್ನು ಮಣಿಸುವುದು ರಾಜಸ್ಥಾನಕ್ಕೆ ಕಷ್ಟಸಾಧ್ಯ. ಡೆಲ್ಲಿ ನಾಯಕ ಶ್ರೇಯಸ್, ಪೃಥ್ವಿ ಶಾ, ರಿಷಭ್ ಪಂತ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರನ್ನು ಕಟ್ಟಿಹಾಕುವುದೇ ರಾಜಸ್ಥಾನ್ ಬೌಲರ್‌ಗಳ ಮುಂದಿರುವ ಕಠಿಣ ಸವಾಲು. ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್ ಅವರ ಚಾಣಾಕ್ಷ ಬೌಲಿಂಗ್‌ನ ಪರೀಕ್ಷೆಯೂ ಆಗಲಿದೆ.

ರಾಜಸ್ಥಾನ ತಂಡದ ನಾಯಕ ಸ್ಮಿತ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ ಅವರು ಲಯಕ್ಕೆ ಮರಳಿದರೆ ತಂಡದ ಖಾತೆಗೆ ಒಂದಷ್ಟು ರನ್‌ಗಳು ಸೇರುತ್ತವೆ. ಜೋಸ್ ಬಟ್ಲರ್, ರಾಹುಲ್ ತೆವಾಟಿಯಾ, ಮಹಿಪಾಲ್ ಲೊಮ್ರೊರ್ ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ಕಾಣಿಕೆ ನೀಡುವ ಪ್ರಯತ್ನ ಮಾಡಿದ್ದರು. ಆರ್ಚರ್, ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿ ಒಂದಿಷ್ಟು ಸಿಕ್ಸರ್‌ಗಳನ್ನು ಸಿಡಿಸುತ್ತ ‘ಡೆತ್‌ ಓವರ್’ ಬೌಲರ್‌ಗಳಿಗೆ ನಡುಕ ಮೂಡಿಸುತ್ತಿದ್ದಾರೆ.  ಆದರೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಕಾರ್ತಿಕ್ ತ್ಯಾಗಿ ತಮಗೆ ಲಭಿಸಿದ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.  ಇಂಗ್ಲೆಂಡ್ ಆಲ್‌ರೌಂಡರ್‌ ಬೆನ್ ಸ್ಟೋಕ್ಸ್‌ ಅ.11ರವರೆಗೆ ಕ್ವಾರಂಟೈನ್‌ನಲ್ಲಿರುವುದರಿಂದ ಈ ಪಂದ್ಯದಲ್ಲಿ ಅವರು ಕಣಕ್ಕಿಳಿಯುತ್ತಿಲ್ಲ. ಬೌಲಿಂಗ್‌ನಲ್ಲಿ ಕಗಿಸೊ ರಬಾಡ, ನೊರ್ಟಿಯೆ ಮತ್ತು ಹರ್ಷಲ್ ಪಟೇಲ್ ತಂಡವನ್ನು ಗೆಲ್ಲಿಸಬಲ್ಲ ಸಮರ್ಥರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು