ಮಂಗಳವಾರ, ಜೂನ್ 15, 2021
25 °C

IPL 2021: ಓವರ್‌ನ ಎಲ್ಲ 6 ಎಸೆತಗಳನ್ನು ಬೌಂಡರಿಗಟ್ಟಿದ ಪೃಥ್ವಿ ಶಾ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ, ಓವರ್‌ವೊಂದರ ಎಲ್ಲ ಆರು ಎಸೆತಗಳನ್ನು ಬೌಂಡರಿಗಟ್ಟುವ ಮೂಲಕ ವಿಶಿಷ್ಟ ದಾಖಲೆ ಬರೆದಿದ್ದಾರೆ. 

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪೃಥ್ವಿ ಶಾ, ತಮ್ಮ ನೈಜ ಸಾಮರ್ಥ್ಯವನ್ನು ಸಾಬೀತು ಮಾಡಿದರು. 

ಕೆಕೆಆರ್ ವೇಗಿ ಶಿವಂ ಮಾವಿ ಎಸೆದ ಇನ್ನಿಂಗ್ಸ್‌ನ ಪ್ರಥಮ ಓವರ್‌ನ ಎಲ್ಲ ಆರು ಎಸೆತಗಳನ್ನು ಪೃಥ್ವಿ ಶಾ ಬೌಂಡರಿಗಟ್ಟಿದ್ದರು. ಇದೇ ಓವರ್‌ನ ಪ್ರಥಮ ಎಸೆತ ವೈಡ್ ಆಗಿತ್ತು. ಈ ಮೂಲಕ 25 ರನ್‌ಗಳು ಹರಿದು ಬಂದಿದ್ದವು. 

ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಆಟಗಾರ ಅಜಿಂಕ್ಯ ರಹಾನೆ ದಾಖಲೆಯನ್ನು ಪೃಥ್ವಿ ಶಾ ಸರಿಗಟ್ಟಿದ್ದು, ಐಪಿಎಲ್‌ನಲ್ಲಿ ಎಲ್ಲ ಆರು ಎಸೆತಗಳಲ್ಲಿ ಬೌಂಡರಿ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 

ಒಂಬತ್ತು ವರ್ಷಗಳ ಹಿಂದೆ 2012ರಲ್ಲಿ ಅಜಿಂಕ್ಯ ರಹಾನೆ, ಓವರ್‌ವೊಂದರ ಎಲ್ಲ ಆರು ಎಸೆತಗಳಲ್ಲಿ ಬೌಂಡರಿ ಗಳಿಸಿದ್ದರು. 

ಐಪಿಎಲ್‌ನಲ್ಲಿ ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲಿ ಅತಿ ಹೆಚ್ಚು 24 ರನ್ ಗಳಿಸಿದ ದಾಖಲೆಗೂ ಪೃಥ್ವಿ ಶಾ ಭಾಜನವಾಗಿದ್ದಾರೆ. 2009ರಲ್ಲಿ ನಮನ್ ಓಜಾ 21, 2018ರಲ್ಲಿ ಸುನಿಲ್ ನಾರಾಯಣ್ 21 ರನ್ ಸೊರೆಗೈದಿದ್ದರು. ಇನ್ನು 2009ರಲ್ಲಿ ಆ್ಯಡಂ ಗಿಲ್‌ಕ್ರಿಸ್ಟ್ ಮತ್ತು 2011 ಹಾಗೂ 2014ರಲ್ಲಿ ಕ್ರಿಸ್ ಗೇಲ್ ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲಿ 20 ರನ್ ಚಚ್ಚಿದ್ದರು. 

ಪೃಥ್ವಿ ಅಬ್ಬರ ಇಲ್ಲಿಗೂ ನಿಲ್ಲಲಿಲ್ಲ. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಇದು 2021ನೇ ಸಾಲಿನ ಐಪಿಎಲ್‌ನಲ್ಲಿ ದಾಖಲಾದ ಅತಿ ವೇಗದ ಅರ್ಧಶತಕದ ಸಾಧನೆಯಾಗಿದೆ. ಹಾಗೆಯೇ ಪವರ್ ಪ್ಲೇನಲ್ಲಿ ಶಿಖರ್ ಧವನ್ ಜೊತೆ ಸೇರಿಕೊಂಡು 67 ರನ್ ಚಚ್ಚಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು