ಭಾನುವಾರ, ಅಕ್ಟೋಬರ್ 24, 2021
29 °C

ಆರ್‌ಸಿಬಿಗೆ ಮತ್ತೊಂದು ಸೋಲಿನ ಆಘಾತ; ಅಗ್ರಸ್ಥಾನಕ್ಕೇರಿದ ಚೆನ್ನೈ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಗದೊಂದು ಸೋಲಿನ ಆಘಾತಕ್ಕೊಳಗಾಗಿದೆ. ಶುಕ್ರವಾರ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. 

ಇದರೊಂದಿಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ (53) ಹಾಗೂ ದೇವದತ್ತ ಪಡಿಕ್ಕಲ್ (70) ಹೋರಾಟವು ವ್ಯರ್ಥವೆನಿಸಿದೆ. ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆರ್‌ಸಿಬಿ ತಂಡವು ಆರು ವಿಕೆಟ್ ನಷ್ಟ್ಕಕೆ 156 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಚೆನ್ನೈ ಇನ್ನು 11 ಎಸೆತಗಳು ಬಾಕಿ ಉಳಿದಿರುವಂತೆಯೇ ನಾಲ್ಕು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು. 

ಈ ಗೆಲುವಿನೊಂದಿಗೆ ಆಡಿರುವ 9 ಪಂದ್ಯಗಳಲ್ಲಿ 14 ಅಂಕಗಳನ್ನು ಸಂಪಾದಿಸಿರುವ ಚೆನ್ನೈ ಅಂಕಪಟ್ಟಿಯಲ್ಲಿ ಮಗದೊಮ್ಮೆ ಅಗ್ರಸ್ಥಾನಕ್ಕೇರಿದೆ. ಅತ್ತ ಆರ್‌ಸಿಬಿ ಈ ಸೋಲಿನ ಹೊರತಾಗಿಯೂ 10 ಅಂಕಗಳೊಂದಿಗೆ ಮೂರನೇ ಸ್ಥಾನ ಕಾಯ್ದುಕೊಂಡಿದೆ. 

ಸವಾಲಿನ ಮೊತ್ತ ಬೆನ್ನತ್ತಿದ ಚೆನ್ನೈ ತಂಡಕ್ಕೆ ಓಪನರ್‌ಗಳಾದ ಋತುರಾಜ್ ಗಾಯಕವಾಡ್ ಹಾಗೂ ಫಾಫ್ ಡು ಪ್ಲೆಸಿ ಬಿರುಸಿನ ಆರಂಭವೊದಗಿಸಿದರು. ಪರಿಣಾಮ ಆರ್‌ಸಿಬಿ ಪಾಳಯದಲ್ಲಿ ಆತಂಕ ಮಡುಗಟ್ಟಿತ್ತು. 

ಈ ಸಂದರ್ಭದಲ್ಲಿ ಯಜುವೇಂದ್ರ ಚಾಹಲ್ ದಾಳಿಯಲ್ಲಿ ಅದ್ಭುತ ಕ್ಯಾಚ್ ಹಿಡಿದ ನಾಯಕ ವಿರಾಟ್ ಕೊಹ್ಲಿ, ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಋತುರಾಜ್ ಗಾಯಕವಾಡ್ (38) ಹೊರದಬ್ಬುವಲ್ಲಿ ಯಶಸ್ವಿಯಾದರು. ಆಗಲೇ ಡು ಪ್ಲೆಸಿ ಜೊತೆಗೆ ಮೊದಲ ವಿಕೆಟ್‌ಗೆ 71 ರನ್‌ಗಳ ಜೊತೆಯಾಟ ನೀಡಿದ್ದರು. 

ಗಾಯಕವಾಡ್ ಬೆನ್ನಲ್ಲೇ ಡು ಪ್ಲೆಸಿ (31) ವಿಕೆಟ್ ಪತನವಾಯಿತು. ಇದರಿಂದ ಪಂದ್ಯದಲ್ಲಿ ಆರ್‌ಸಿಬಿಗೆ ತಿರುಗೇಟು ನೀಡಲು ಸಾಧ್ಯವಾಯಿತು. 

ಈ ಹಂತದಲ್ಲಿ ಜೊತೆಗೂಡಿದ ಮೊಯಿನ್ ಅಲಿ ಹಾಗೂ ಅಂಬಟಿ ರಾಯುಡು ತಂಡವನ್ನು ಮುನ್ನಡೆಸಿದರು. ಆದರೆ ಅತ್ಯುತ್ತಮವಾಗಿ ಆಡುತ್ತಿದ್ದ ಮೊಯಿನ್ (23) ವಿಕೆಟ್ ಪಡೆದ ಹರ್ಷಲ್ ಪಟೇಲ್, ಚೆನ್ನೈ ಓಟಕ್ಕೆ ಕಡಿವಾಣ ಹಾಕಿದರು.  

ಅಂತಿಮ 30 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 32 ರನ್‌ಗಳ ಅಗತ್ಯವಿತ್ತು. ಕ್ರೀಸಿನಲ್ಲಿ ನೆಲೆಯೂರಿದ್ದ ಅಂಬಟಿ ರಾಯುಡು (32) ಹೊರದಬ್ಬುವ ಮೂಲಕ ಹರ್ಷಲ್ ಪಟೇಲ್ ಮಗದೊಮ್ಮೆ ನೆರವಾದರು. 

ಆದರೆ ಆಗಲೇ ಕಾಲ ಮೀರಿ ಹೋಗಿತ್ತು. ಸುರೇಶ್ ರೈನಾ (17*) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (11*) ತಂಡವನ್ನು 18.1 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು. ಆರ್‌ಸಿಬಿ ಪರ ಹರ್ಷಲ್ ಪಟೇಲ್ ಎರಡು ವಿಕೆಟ್ ಪಡೆದರು. 

ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆರ್‌ಸಿಬಿ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ತ ಪಡಿಕ್ಕಲ್ ಬಿರುಸಿನ ಆರಂಭವೊದಗಿಸಿದರು. 

ದೀಪಕ್ ಚಾಹರ್ ಎಸೆದ ಇನ್ನಿಂಗ್ಸ್‌ನ ಮೊದಲೆರಡು ಎಸೆತಗಳನ್ನು ಬೌಂಡರಿಗಟ್ಟಿದ ಕೊಹ್ಲಿ ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು. ಕೊಹ್ಲಿ ಹಾಗೂ ಪಡಿಕ್ಕಲ್ ಬಿರುಸಿನ ಆಟದ ಮೂಲಕ ಗಮನ ಸೆಳೆದರು. ಅಲ್ಲದೆ 5.3 ಓವರ್‌ಗಳಲ್ಲೇ 50 ರನ್ ಹರಿದು ಬಂದಿದ್ದವು. 

ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿಯು ಶತಕದ ಜೊತೆಯಾಟವನ್ನು ನೀಡಿದರು. ಪಡಿಕ್ಕಲ್ 35 ಹಾಗೂ ವಿರಾಟ್ 36 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿ ಗಮನ ಸೆಳೆದರು. 

ಆದರೆ ಫಿಫ್ಟಿ ಬೆನ್ನಲ್ಲೇ ವಿರಾಟ್ ವಿಕೆಟ್ ನಷ್ಟವಾಯಿತು. ಆಗಲೇ ಪಡಿಕ್ಕಲ್ ಜೊತೆಗೆ 13.2 ಓವರ್‌ಗಳಲ್ಲಿ 111 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 41 ಎಸೆತಗಳನ್ನು ಎದುರಿಸಿದ ವಿರಾಟ್ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು. 

ಆರ್‌ಸಿಬಿ ಪರ 150ನೇ ಪಂದ್ಯ ಆಡುತ್ತಿರುವ ಎಬಿ ಡಿವಿಲಿಯರ್ಸ್ (12) ನಿರಾಸೆ ಮೂಡಿಸಿದರು. ಈ ಮಧ್ಯೆ ಉತ್ತಮವಾಗಿ ಆಡುತ್ತಿದ್ದ ಪಡಿಕ್ಕಲ್ ವಿಕೆಟ್ ನಷ್ಟವಾಯಿತು. 50 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ ಐದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 70 ರನ್ ಗಳಿಸಿದರು. 

ವಿಲಿಯರ್ಸ್ ಹಾಗೂ ಪಡಿಕ್ಕಲ್ ವಿಕೆಟ್‌ಗಳನ್ನು ಕಬಳಿಸಿದ ಶಾರ್ದೂಲ್ ಠಾಕೂರ್ ಡಬಲ್ ಆಘಾತ ನೀಡಿದರು. ಚೊಚ್ಚಲ ಪಂದ್ಯ ಆಡುತ್ತಿರುವ ಟಿಮ್ ಡೇವಿಡ್ (1) ಪ್ರಭಾವಿ ಎನಿಸಿಕೊಳ್ಳಲಿಲ್ಲ. 

ಅಂತಿಮ ಹಂತದಲ್ಲಿ ನಿರಂತರ ಅಂತರಾಳದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಆರ್‌ಸಿಬಿಗೆ ಹಿನ್ನೆಡೆಯಾಗಿ ಪರಿಣಮಿಸಿತು. ಗ್ಲೆನ್ ಮ್ಯಾಕ್ಸ್‌ವೆಲ್ ಸಹ 11 ರನ್ ಗಳಿಸಿ ಔಟಾದರು. ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

16.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದ್ದ ಆರ್‌ಸಿಬಿ, ನಂತರದ 16 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇನ್ನುಳಿದಂತೆ ಹರ್ಷಲ್ ಪಟೇಲ್ (3) ಹಾಗೂ ವನಿಂದು ಹಸರಂಗ (1*) ರನ್ ಗಳಿಸಿದರು. 

ಚೆನ್ನೈ ಪರ ಡ್ವೇನ್ ಬ್ರಾವೊ ಮೂರು, ಶಾರ್ದೂಲ್ ಠಾಕೂರ್ ಎರಡು ಮತ್ತು ದೀಪಕ್ ಚಾಹರ್ ಒಂದು ವಿಕೆಟ್ ಪಡೆದು ಮಿಂಚಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು