ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL | RCB vs KKR: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ ಎದುರಾಗಲಿದೆ ಕಠಿಣ ಸವಾಲು

Last Updated 10 ಅಕ್ಟೋಬರ್ 2021, 10:26 IST
ಅಕ್ಷರ ಗಾತ್ರ

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಶಾರ್ಜಾದಲ್ಲಿ ನಡೆಯಲಿರುವ ಎಲಿಮಿನೇಟರ್ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.

ಚೊಚ್ಚಲ ಐಪಿಎಲ್ ಕನಸನ್ನು ಹೊತ್ತುಕೊಂಡಿರುವ ಆರ್‌ಸಿಬಿಗೆ ಪ್ಲೇ-ಆಫ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತ ಸವಾಲು ಎದುರಾಗಿದೆ. ಐಪಿಎಲ್ ಮೊದಲಾರ್ಧದಲ್ಲಿ ಸಾಧಾರಣ ಮಟ್ಟದ ಪ್ರದರ್ಶನ ನೀಡಿರುವ ಕೆಕೆಆರ್, ದ್ವಿತೀಯಾರ್ಧದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುವ ಮೂಲಕ ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶಿಸಿದೆ.

ಭಾರತದ ಯುವ ಆಟಗಾರರ ಪ್ರದರ್ಶನವು ಕೆಕೆಆರ್ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಹಾಗಾಗಿ ಈ ಮಹತ್ವದ ಪಂದ್ಯದಲ್ಲಿ ಗೆಲುವು ದಾಖಲಿಸಲುಕೋಲ್ಕತ್ತ ಆಟಗಾರರ ವಿರುದ್ಧ ಆರ್‌ಸಿಬಿ ಸ್ಪಷ್ಟ ಯೋಜನೆಯನ್ನು ರೂಪಿಸಬೇಕಾಗಿದೆ.

ಆರಂಭಿಕ ಜೋಡಿ: ಅಯ್ಯರ್-ಗಿಲ್
ಯುವ ಎಡಗೈ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ ಆಗಮನದೊಂದಿಗೆ ಕೆಕೆಆರ್ ಅದೃಷ್ಟ ಬದಲಾಗಿದೆ. ಬಹುತೇಕ ಎಲ್ಲ ಪಂದ್ಯಗಳಲ್ಲೂ ತಂಡಕ್ಕೆ ಬಿರುಸಿನ ಆರಂಭ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಅಯ್ಯರ್, ಈಗಾಗಲೇ ಏಳು ಪಂದ್ಯಗಳಲ್ಲಿ 39.83ರ ಸರಾಸರಿಯಲ್ಲಿ 239 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಒಳಗೊಂಡಿದ್ದು, 129.18ರ ಸ್ಟ್ರೈಕ್‌ರೇಟ್ ಕಾಯ್ದುಕೊಂಡಿದ್ದಾರೆ.

ಇವರಿಗೆ ತಕ್ಕ ಸಾಥ್ ನೀಡುತ್ತಿರುವ ಶುಭಮನ್ ಗಿಲ್ ಅಂತಿಮ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ 14 ಪಂದ್ಯಗಳಲ್ಲಿ 25.14ರ ಸರಾಸರಿಯಲ್ಲಿ 352 ರನ್ ಗಳಿಸಿದ್ದಾರೆ.

ತ್ರಿಪಾಠಿ-ರಾಣಾ ಬಲ
ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಹಂತದಲ್ಲೂ ರಾಹುಲ್ ತ್ರಿಪಾಠಿ ಹಾಗೂ ನಿತೀಶ್ ರಾಣಾ ಅಪಾಯಕಾರಿಯಾಗಬಲ್ಲರು ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಉತ್ತಮ ಗತಿಯಲ್ಲಿ ರನ್ ಪೇರಿಸುವ ಸಾಮರ್ಥ್ಯವು ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಬಹುದು.

ಪ್ರಸಕ್ತ ಸಾಲಿನಲ್ಲಿ 14 ಪಂದ್ಯಗಳನ್ನು ಆಡಿರುವ ತ್ರಿಪಾಠಿ, ಈಗಾಗಲೇ 142.80ರ ಸ್ಟ್ರೈಕ್‌ರೇಟ್‌ನಲ್ಲಿ (31.41 ಸರಾಸರಿ) 377 ರನ್ ಪೇರಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಅತ್ತ ರಾಣಾ 14 ಪಂದ್ಯಗಳಲ್ಲಿ 34.70ರ ಸರಾಸರಿಯಲ್ಲಿ 347 ರನ್ ಗಳಿಸಿದ್ದಾರೆ.

ಮಾರ್ಗನ್ ನಾಯಕತ್ವಕ್ಕೆ ಕಾರ್ತಿಕ್ ಸಾಥ್
ನಾಯಕ ಏಯಾನ್ ಮಾರ್ಗನ್ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ನಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿರಲಾರರು. ಆದರೆ ಮಾರ್ಗನ್ ನಾಯಕತ್ವ ಕೌಶಲ್ಯವನ್ನು ಕಡೆಗಣಿಸಬಾರದು. ಇವರಿಗೆ ಮಾಜಿ ನಾಯಕ ಕಾರ್ತಿಕ್‌ ಅವರಿಂದ ತಕ್ಕ ಸಾಥ್ ಸಿಗಲಿದೆ. ಕೆಳ ಕ್ರಮಾಂಕದಲ್ಲಿ ಬಿರುಸಿನ ಆಟವನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ರಸೆಲ್ 'ಪವರ್'
ಹಾಗೊಂದು ವೇಳೆ ಗಾಯಮುಕ್ತರಾಗಿ ರಸೆಲ್ ತಂಡವನ್ನು ಸೇರಿದರೆ ಕೆಕೆಆರ್‌ಗೆ ಆನೆ ಬಲ ಸಿಕ್ಕಂತಾಗುತ್ತದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ರಸೆಲ್ ತಮ್ಮ ನೈಜ ಫಾರ್ಮ್‌ಗೆ ಮರಳಿದರೆ ಆರ್‌ಸಿಬಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಚಕ್ರವರ್ತಿ-ನಾರಾಯಣ್ ಸ್ಪಿನ್ಜೋಡಿ
ಸ್ಪಿನ್ ದ್ವಯರಾದ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನಾರಾಯಣ್ ಸವಾಲನ್ನು ಸಮರ್ಥವಾಗಿ ಎದುರಿಸಬೇಕಾದ ಹೊಣೆ ಆರ್‌ಸಿಬಿ ದಾಂಡಿಗರ ಮುಂದಿದೆ. 14 ಪಂದ್ಯಗಳಲ್ಲಿ 6.50ರ ಎಕಾನಮಿ ರೇಟ್ ಕಾಪಾಡಿಕೊಂಡಿರುವ ವರುಣ್, 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅತ್ತ ನಾರಾಯಣ್ ಕೂಡಾ 11 ಪಂದ್ಯಗಳಲ್ಲಿ 6.52ರ ಎಕಾನಮಿ ರೇಟ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗಾಗಿ ಅವರಿಬ್ಬರನ್ನು ಎದುರಿಸುವುದು ಆರ್‌ಸಿಬಿ ಪಾಲಿಗೆ ನೈಜ ಸವಾಲೇ ಸರಿ.

ಫರ್ಗ್ಯುಸನ್ 'ಬೆಂಕಿ'
ಜಗತ್ತಿನ ಅತಿ ವೇಗದ ನಿಖರ ಬೌಲರ್‌ಗಳಲ್ಲಿ ಓರ್ವರಾದ ಲಾಕಿ ಫರ್ಗ್ಯುಸನ್ ಅವರಿಗೆ ಕನ್ನಡಿಗ ಪ್ರಸಿದ್ಧ ಕೃಷ್ಠ ಅಥವಾ ಶಿವಂ ಮಾವಿ ಸಾಥ್ ನೀಡಲಿದ್ದಾರೆ. ಕೊನೆಯ ಕೆಲವು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವುದರಿಂದ ಶಿವಂ ಮಾವಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಯಾವುದೇ ಹಂತದಲ್ಲೂ ವಿಕೆಟ್ ಕಬಳಿಸಿ ಪಂದ್ಯದ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಫರ್ಗ್ಯುಸನ್ ಹೊಂದಿದ್ದಾರೆ. ಅಲ್ಲದೆ ಈಗಾಗಲೇ ಆಡಿರುವ 5 ಪಂದ್ಯಗಳಲ್ಲಿ 10 ವಿಕೆಟ್ ಗಳಿಸಿ ಮಿಂಚಿದ್ದಾರೆ.

ಭಾರತದಲ್ಲಿ ನಡೆದ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಆರ್‌ಸಿಬಿ 38 ರನ್ ಅಂತರದ ಗೆಲುವು ದಾಖಲಿಸಿದರೆ ಯುಎಇನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 9 ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಹಾಗಾಗಿ ಮಗದೊಂದು ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT