ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಹೊಸ ಹರಾಜು ನೀತಿ ಬಹಿರಂಗಪಡಿಸಿದ ಬಿಸಿಸಿಐ

Last Updated 30 ಅಕ್ಟೋಬರ್ 2021, 16:49 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ನೇ ಸಾಲಿನ ಹರಾಜು ನೀತಿ ಹಾಗೂ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ವಿವರವನ್ನು ಬಹಿರಂಗಪಡಿಸಿದೆ.

ಈಗಿರುವ ಎಂಟು ಮೂಲ ತಂಡಗಳು ಗರಿಷ್ಠ ನಾಲ್ಕು ಆಟಗಾರರನ್ನು ರಿಟೇನ್ ಮಾಡಬಹುದಾಗಿದೆ. ಹಾಗೆಯೇ ಹೊಸತಾಗಿ ಸೇರ್ಪಡೆಯಾಗಿರುವ ಎರಡು ಹೊಸ ಫ್ರಾಂಚೈಸಿಗಳು (ಲಖನೌ ಹಾಗೂ ಅಹಮದಾಬಾದ್) ಹರಾಜಿಗೂ ಮುಂಚಿತವಾಗಿ ಮೂವರು ಆಟಗಾರರನ್ನು ಪಡೆಯುವ ಆಯ್ಕೆಯನ್ನು ಒದಗಿಸಿದೆ.

ಐಪಿಎಲ್ 2022ರ ಆವೃತ್ತಿಗಾಗಿ ಆಟಗಾರರ ಖರೀದಿಗಾಗಿ ತಂಡಗಳು ವ್ಯಯಿಸಬಹುದಾದ ಪರ್ಸ್ ಮೊತ್ತವನ್ನು ₹90 ಕೋಟಿಗೆ ಮಿತಿಗೊಳಿಸಲಾಗಿದೆ. ಈಗಿರುವ ಎಂಟು ಫ್ರಾಂಚೈಸಿಗಳು ನವೆಂಬರ್ 1ರಿಂದ 30ರ ಅವಧಿಯೊಳಗೆ ಆಟಗಾರರ ರಿಟೇನ್ ದೃಢಪಡಿಸಬೇಕಿದೆ. ಅದಾದ ನಂತರ ಎರಡು ಹೊಸ ತಂಡಗಳಿಗೆ ಡಿಸೆಂಬರ್ 1ರಿಂದ 25ರ ವರೆಗೆ ಆಟಗಾರರನ್ನು ಪಡೆಯುವ ಅವಕಾಶವಿರುತ್ತದೆ.

ರಿಟೇನ್ ನೀತಿ ಹೇಗೆ?
ಹಳೆಯ ಫ್ರಾಂಚೈಸಿಗಳು ಗರಿಷ್ಠ ಮೂವರು ಭಾರತೀಯ ಆಟಗಾರರನ್ನು (ಕ್ಯಾಪ್ಡ್ ಹಾಗೂ ಅನ್‌ಕ್ಯಾಪ್ಡ್ ಸೇರಿದಂತೆ) ಉಳಿಸಿಕೊಳ್ಳಬಹುದಾಗಿದೆ. ಹಾಗೆಯೇ ಗರಿಷ್ಠ ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಎರಡಕ್ಕಿಂತ ಹೆಚ್ಚು ಅನ್‌ಕ್ಯಾಪ್ಡ್ ಆಟಗಾರರನ್ನು ಖರೀದಿಸುವಂತಿಲ್ಲ.

ಅಂತೆಯೇ ಹೊಸ ಫ್ರಾಂಚೈಸಿಗಳು, ಗರಿಷ್ಠ ಇಬ್ಬರು ಭಾರತೀಯರು ಹಾಗೂ ಓರ್ವ ವಿದೇಶಿ ಆಟಗಾರನನ್ನು ಆಯ್ಕೆ ಮಾಡಬಹುದಾಗಿದೆ. ಹಾಗೆಯೇ ಓರ್ವ ಅನ್‌ಕ್ಯಾಪ್ಡ್ ಆಟಗಾರನನ್ನು ಪಡೆಯಬಹುದಾಗಿದೆ.

ಈ ಹಿಂದೆಯೇ ಸೂಚಿಸಿದಂತೆ ಈ ಬಾರಿ ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಆಯ್ಕೆ ಇರುವುದಿಲ್ಲ.

ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪರ್ಸ್‌ನಿಂದ ಎಷ್ಟು ಮೊತ್ತವನ್ನು ಕಡಿತಗೊಳಿಸಲಾಗುತ್ತದೆ ಎಂಬುದನ್ನು ಬಿಸಿಸಿಐ ತಿಳಿಸಿದೆ. ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವುದಾದರೆ ₹42 ಕೋಟಿ, ಮೂವರು ಆಟಗಾರರಿಗೆ ₹33 ಕೋಟಿ, ಇಬ್ಬರು ಆಟಗಾರರಿಗೆ ₹24 ಕೋಟಿ ಮತ್ತು ಓರ್ವ ಆಟಗಾರನಿಗೆ ₹14 ಕೋಟಿ ಕಡಿತಗೊಳಿಸಲಾಗುವುದು. ಹಾಗೆಯೇ ಅ‌ನ್‌ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಳ್ಳುವುದಾದರೆ ತಲಾ ₹4 ಕೋಟಿ ವ್ಯಯಿಸಬೇಕಿದೆ.

ನಾಲ್ಕು ಆಟಗಾರರನ್ನು ಉಳಿಸಿಕೊಂಡರೆ ಆಟಗಾರರ ವೇತನ ಸ್ವರೂಪ ಇಂತಿದೆ:
ಮೊದಲ ಆಟಗಾರನಿಗೆ ₹16 ಕೋಟಿ
ಎರಡನೇ ಆಟಗಾರನಿಗೆ ₹12 ಕೋಟಿ
ಮೂರನೇ ಆಟಗಾರನಿಗೆ ₹8 ಕೋಟಿ
ನಾಲ್ಕನೇ ಆಟಗಾರನಿಗೆ ₹6 ಕೋಟಿ

ಮೂವರು ಆಟಗಾರರನ್ನು ಉಳಿಸಿಕೊಂಡರೆ ಆಟಗಾರರ ವೇತನ ಸ್ವರೂಪ ಇಂತಿದೆ:
ಮೊದಲ ಆಟಗಾರನಿಗೆ ₹15 ಕೋಟಿ
ಎರಡನೇ ಆಟಗಾರನಿಗೆ ₹11 ಕೋಟಿ
ಮೂರನೇ ಆಟಗಾರನಿಗೆ ₹7 ಕೋಟಿ

ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ ಆಟಗಾರರ ವೇತನ ಸ್ವರೂಪ ಇಂತಿದೆ:
ಮೊದಲ ಆಟಗಾರನಿಗೆ ₹14 ಕೋಟಿ
ಎರಡನೇ ಆಟಗಾರನಿಗೆ ₹10 ಕೋಟಿ

ಓರ್ವ ಆಟಗಾರನನ್ನು ಉಳಿಸಿಕೊಂಡರೆ ಆಟಗಾರರ ವೇತನ ಸ್ವರೂಪ: ₹14 ಕೋಟಿ.

ಹಾಗೊಂದು ವೇಳೆ ಆಟಗಾರರ ವೇತನವು ಮೇಲೆ ಸೂಚಿಸಿದ ಮೊತ್ತಕ್ಕಿಂತ ಹೆಚ್ಚಿದ್ದರೆ, ಅದನ್ನು ತಂಡಗಳ ಪರ್ಸ್‌ನಿಂದ ಕಡಿತಗೊಳಿಸಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT