ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಜೈಸ್ವಾಲ್-ದುಬೆ ಬಿರುಸಿನ ಫಿಫ್ಟಿ; ಟೇಬಲ್ ಟಾಪರ್ ಚೆನ್ನೈಗೆ ಸೋಲಿನ ಕಹಿ

Last Updated 2 ಅಕ್ಟೋಬರ್ 2021, 18:24 IST
ಅಕ್ಷರ ಗಾತ್ರ

ಅಬುಧಾಬಿ: ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ (50) ಹಾಗೂ ಶಿವಂದುಬೆ (64*) ಬಿರುಸಿನ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ ಪ್ಲೇ-ಆಫ್ ಕನಸು ಜೀವಂತವಾಗಿದೆ. ಅತ್ತ ಋತುರಾಜ್ ಗಾಯಕವಾಡ್ ಚೊಚ್ಚಲ ಶತಕದ (101*) ಹೋರಾಟವು ವ್ಯರ್ಥವೆನಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ, ಗಾಯಕವಾಡ್ ಶತಕದ ಬಲದೊಂದಿಗೆ ನಾಲ್ಕು ವಿಕೆಟ್ ನಷ್ಟಕ್ಕೆ 189 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ರಾಜಸ್ಥಾನ್ ಇನ್ನು 2.3 ಓವರ್‌ಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಐಪಿಎಲ್‌ನಲ್ಲಿ ಋತುರಾಜ್ ಗಾಯಕವಾಡ್ ಚೊಚ್ಚಲ ಶತಕ ಗಳಿಸಿದರೆ ಯಶಸ್ವಿ ಜೈಸ್ವಾಲ್ (19 ಎಸೆತ) ಹಾಗೂ ಶಿವಂ ದುಬೆ (31 ಎಸೆತ) ಚೊಚ್ಚಲ ಅರ್ಧಶತಕಗಳ ಸಾಧನೆ ಮಾಡಿದರು.

ಇದರೊಂದಿಗೆ ಆಡಿರುವ 12 ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ ಒಟ್ಟು 10 ಅಂಕಗಳನ್ನು ಸಂಪಾದಿಸಿರುವ ರಾಜಸ್ಥಾನ್, ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ. ಅತ್ತ ಚೆನ್ನೈ ಈ ಸೋಲಿನ ಹೊರತಾಗಿಯೂ 12 ಪಂದ್ಯಗಳಲ್ಲಿ 18 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

ಜೈಸ್ವಾಲ್-ದುಬೆ ಮಿಂಚಿನ ಆಟ, ಚೆನ್ನೈಗೆ ಸೋಲಿನ ಆಘಾತ...
ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ್ ತಂಡಕ್ಕೆ ಓಪನರ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಎವಿನ್ ಲೂಯಿಸ್ ಬಿರುಸಿನ ಆರಂಭವೊದಗಿಸಿದರು. ಈ ಜೋಡಿಯು ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಪರಿಣಾಮ 4 ಓವರ್‌ಗಳಲ್ಲೇ ತಂಡದ ಮೊತ್ತ 50ರ ಗಡಿ ದಾಟಿತು.

ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೈಸ್ವಾಲ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಇದು ಜೈಸ್ವಾಲ್ ಬ್ಯಾಟ್‌ನಿಂದ ಸಿಡಿದ ಚೊಚ್ಚಲ ಫಿಫ್ಟಿ ಸಾಧನೆಯಾಗಿದೆ.

ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಲೂಯಿಸ್ ವಿಕೆಟ್ ನಷ್ಟವಾಯಿತು. ಆಗಲೇ ಮೊದಲ ವಿಕೆಟ್‌ಗೆ ಜೈಸ್ವಾಲ್ ಜೊತೆಗೆ 5.2 ಓವರ್‌ಗಳಲ್ಲಿ 77 ರನ್‌ಗಳ ಜೊತೆಯಾಟ ನೀಡಿದರು. 12 ಎಸೆತಗಳನ್ನು ಎದುರಿಸಿದ ಲೂಯಿಸ್ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 27 ರನ್ ಗಳಿಸಿದರು.

ಫಿಫ್ಟಿ ಬೆನ್ನಲ್ಲೇ ಜೈಸ್ವಾಲ್ ವಿಕೆಟ್ ಪತನವಾಯಿತು. 21 ಎಸೆತಗಳನ್ನು ಎದುರಿಸಿದ ಜೈಸ್ವಾಲ್ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು.

ಬಳಿಕ ನಾಯಕ ಸಂಜು ಸ್ಯಾಮ್ಸನ್ ಜೊತೆಗೂಡಿದ ಶಿವಂ ದುಬೆ ಕೂಡಾ ಕೇವಲ 31 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕದ ಸಾಧನೆ ಮಾಡುವ ಮೂಲಕ ರಾಜಸ್ಥಾನ್ ಗೆಲುವನ್ನು ಸುಲಭಗೊಳಿಸಿದರು.

ಸಂಜು ಜೊತೆಗೆ ಮೂರನೇ ವಿಕೆಟ್ ‌ಗೆ 89 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದ ದುಬೆ, ಬಿರುಸಿನ ಆಟದ ಮೂಲಕ ರಂಜಿಸಿದರು. ಅಂತಿಮವಾಗಿ 17.3 ಓವರ್‌ಗಳಲ್ಲಿ ಗುರಿ ತಲುಪಿತು. 42 ಎಸೆತಗಳನ್ನು ಎದುರಿಸಿದ ದುಬೆ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್‌ ನೆರವಿನಿಂದ 64 ರನ್ ಗಳಿಸಿ ಔಟಾಗದೆ ಉಳಿದರು. ಇವರಿಗೆ ತಕ್ಕ ಸಾಥ್ ನೀಡಿದ ಗ್ಲೆನ್ ಪಿಲಿಪ್ಸ್ 14 ರನ್ ಗಳಿಸಿ ಅಜೇಯರಾಗುಳಿದರು.

ಋತುರಾಜ್ ಗಾಯಕವಾಡ್ ಚೊಚ್ಚಲ ಶತಕ...
ಈ ಮೊದಲು ಚೆನ್ನೈ ತಂಡಕ್ಕೆ ಆರಂಭಿಕರಾದ ಋತುರಾಜ್ ಗಾಯಕವಾಡ್ ಹಾಗೂ ಫಾಫ್ ಡು ಪ್ಲೆಸಿ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 47 ರನ್‌ಗಳ ಜೊತೆಯಾಟ ನೀಡಿದರು.

ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ ರಾಹುಲ್ ತೆವಾಟಿಯಾ, ಉತ್ತಮವಾಗಿ ಆಡುತ್ತಿದ್ದ ಡು ಪ್ಲೆಸಿ (25) ಜೊತೆಗೆ ಸುರೇಶ್ ರೈನಾ (3) ಅವರನ್ನು ಹೊರದಬ್ಬಿದರು.

ಅತ್ತ ಮೊಯಿನ್ ಅಲಿ (21) ಜೊತೆ ಸೇರಿಕೊಂಡು ಆಕರ್ಷಕ ಇನ್ನಿಂಗ್ಸ್ ಗಾಯಕವಾಡ್ ಮಗದೊಂದು ಆಕರ್ಷಕ ಅರ್ಧಶತಕ ಬಾರಿಸಿದರು. ಅಲ್ಲದೆ ಮೊಯಿನ್ ಜೊತೆಗೆ 57 ರನ್‌ಗಳ ಜೊತೆಯಾಟ ಕಟ್ಟಿದರು. ಈ ವೇಳೆ ಮಗದೊಮ್ಮೆ ದಾಳಿಗಿಳಿದ ತೆವಾಟಿಯಾ, ಮೊಯಿನ್ ವಿಕೆಟ್ ಪಡೆದು ಸಂಭ್ರಮಿಸಿದರು.

ಈ ನಡುವೆ ಅಂಬಟಿ ರಾಯುಡು (2) ವಿಫಲರಾದರು. ಅತ್ತ ಅಮೋಘ ಇನ್ನಿಂಗ್ಸ್ ಕಟ್ಟಿದ ಗಾಯಕವಾಡ್, ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಶತಕದ ಸಂಭ್ರಮ ಆಚರಿಸಿಕೊಂಡರು. ಕೊನೆಯ ಹಂತದಲ್ಲಿ ಇವರಿಗೆ ತಕ್ಕ ಸಾಥ್ ನೀಡಿದ ರವೀಂದ್ರ ಜಡೇಜ ಕೇವಲ 15 ಎಸೆತಗಳಲ್ಲಿ 32 ರನ್ ಗಳಿಸಿ (4 ಬೌಂಡರಿ, 1 ಸಿಕ್ಸರ್) ಔಟಾಗದೆ ಉಳಿದರು.

ಈ ಮೂಲಕ ಚೆನ್ನೈ ನಾಲ್ಕು ವಿಕೆಟ್ ನಷ್ಟಕ್ಕೆ 189 ರನ್‌ಗಳ ಬೃಹತ್ ಮೊತ್ತ ಪೇರಿಸಿದರು. ಕೇವಲ 60 ಎಸೆತಗಲ್ಲಿ ಶತಕ ಸಾಧನೆ ಮಾಡಿದ ಗಾಯಕವಾಡ್ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹಾಗೂ ಐದು ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ರಾಜಸ್ಥಾನ್ ಪರ ರಾಹುಲ್ ತೆವಾಟಿಯಾ ಮೂರು ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT