ಸೋಮವಾರ, ಆಗಸ್ಟ್ 8, 2022
21 °C

ಮೊದಲ ಪಂದ್ಯದಲ್ಲೇ ಎಡವಿದ ಹೈದರಾಬಾದ್; ಕೆಕೆಆರ್ ಗೆಲುವಿನ ಕೇಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುನಾರ ಚೆನ್ನೈನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್  10 ರನ್ ಅಂತರದ ಗೆಲುವು ದಾಖಲಿಸಿದೆ. 

ಇದರೊಂದಿಗೆ ಮನೀಶ್ ಪಾಂಡೆ (61*) ಹಾಗೂ ಜಾನಿ ಬೆಸ್ಟೊ (55) ಹೋರಾಟ ವ್ಯರ್ಥವೆನಿಸಿದೆ. 188 ರನ್‌ಗಳ ಗುರಿ ಬೆನ್ನತ್ತಿದ ಹೈದರಾಬಾದ್ ಐದು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಲಷ್ಟೇ ಶಕ್ತವಾಗಿತ್ತು. 

ಈ ಮೊದಲು ನಿತೀಶ್ ರಾಣಾ (80) ಹಾಗೂ ರಾಹುಲ್ ತ್ರಿಪಾಠಿ (53) ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಕೆಕೆಆರ್, ಆರು ವಿಕೆಟ್ ನಷ್ಟಕ್ಕೆ 187 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 

ಪಾಂಡೆ, ಬೆಸ್ಟೊ ಹೋರಾಟ ವ್ಯರ್ಥ್ಯ...
ಬೃಹತ್ ಗುರಿ ಬೆನ್ನತ್ತಿದ ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಡೇವಿಡ್ ವಾರ್ನರ್ (3) ಅವರನ್ನು ಪ್ರಸಿದ್ಧ ಕೃಷ್ಣ ಹೊರದಬ್ಬಿದರು. ವೃದ್ಧಿಮಾನ್ ಸಹಾ (7) ಅವರನ್ನು ಶಕಿಬ್ ಅಲ್ ಹಸನ್ ಕ್ಲೀನ್ ಬೌಲ್ಡ್ ಮಾಡಿದರು. ಪರಿಣಾಮ 10 ರನ್ ಗಳಿಸುವಷ್ಟರಲ್ಲಿ ಓಪನರ್‌ಗಳು ಪೆವಿಲಿಯನ್‌ಗೆ ಸೇರಿದರು. 

ಈ ಹಂತದಲ್ಲಿ ಜೊತೆಗೂಡಿದ ಮನೀಶ್ ಪಾಂಡೆ ಹಾಗೂ ಜಾನಿ ಬೆಸ್ಟೊ ತಂಡಕ್ಕೆ ಆಸರೆಯಾದರು. ಪವರ್ ಪ್ಲೇ ಅಂತ್ಯಕ್ಕೆ ತಂಡವು ಎರಡು ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತ್ತು. 

ನಿಧಾನವಾಗಿ ರನ್ ಗತಿ ಏರಿಸತೊಡಗಿದ ಪಾಂಡೆ ಹಾಗೂ ಬೆಸ್ಟೊ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಈ ಮೂಲಕ ಸನ್‌ರೈಸರ್ಸ್ ರನ್ ಗತಿಗೆ ಆವೇಗವನ್ನು ತುಂಬಿದರು. ಅಂತಿಮ 10 ಓವರ್‌ಗಳಲ್ಲಿ ಸನ್‌ರೈಸರ್ಸ್ ಗೆಲುವಿಗೆ 111 ರನ್‌‌ಗಳ ಅವಶ್ಯಕತೆಯಿತ್ತು. 

ಸ್ಫೋಟಕ ಬ್ಯಾಟಿಂಗ್ ಪದರ್ಶಿಸಿದ ಬೆಸ್ಟೊ, 32 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಆದೆರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆಗಲೇ ಮನೀಷ್ ಪಾಂಡೆ ಜೊತೆಗೆ 92 ರನ್‌‌ಗಳ ಜೊತೆಯಾಟದಲ್ಲಿ ಭಾಗಿಯಾದರು. 40 ಎಸೆತಗಳನ್ನು ಎದುರಿಸಿದ ಬೆಸ್ಟೊ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. 

ಅಂತಿಮ 30 ಎಸೆತಗಳಲ್ಲಿ ಹೈದರಾಬಾದ್ ಗೆಲುವಿಗೆ 69 ರನ್‌ಗಳ ಅವಶ್ಯಕತೆಯಿತ್ತು. 14 ರನ್ ಗಳಿಸಿದ ಮೊಹಮ್ಮದ್ ನಬಿ ಅವರನ್ನು ಪ್ರಸಿದ್ಧ ಕೃಷ್ಣ ಹೊರದಬ್ಬಿದರು. 

ಅತ್ತ ದಿಟ್ಟ ಹೋರಾಟ ಮುಂದುವರಿಸಿದ ಮನೀಶ್ ಪಾಂಡೆ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ತಮ್ಮನ್ನು ಪದೇ ಪದೇ ಕಡೆಗಣಿಸುತ್ತಿರುವ ರಾಷ್ಟ್ರೀಯ ಆಯ್ಕೆ ಸಮಿತಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದರು. 

ಆದರೆ ಇನ್ನೊಂದು ತುದಿಯಲ್ಲಿ ಸೂಕ್ತ ಬೆಂಬಲ ಸಿಗದೇ ಹಿನ್ನೆಡೆ ಅನುಭವಿಸಿದರು. ವಿಜಯ್ ಶಂಕರ್ (11) ಔಟ್ ಆಗುವುದರೊಂದಿಗೆ ಹೈದರಾಬಾದ್ ಗೆಲುವಿನ ಆಸೆ ಕಮರಿತ್ತು. ಅಂತಿಮವಾಗಿ ಐದು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಪಾಂಡೆ 61 ರನ್ ಗಳಿಸಿ ಔಟಾಗದೆ ಉಳಿದರು. 44 ಎಸೆತಗಳನ್ನು ಎದುರಿಸಿದ ಪಾಂಡೆ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು. ಅಬ್ದುಲ್ ಸಮದ್ ಕೇವಲ 8 ಎಸೆತಗಳಲ್ಲಿ ಎರಡು ಸಿಕ್ಸರ್ ನೆರವಿನಿಂದ ಅಜೇಯ 19 ರನ್ ಗಳಿಸಿ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದರು.  ಕೆಕೆಆರ್ ಪರ ಪ್ರಸಿದ್ಧ ಕೃಷ್ಣ ಎರಡು ವಿಕೆಟ್‌ಗಳನ್ನು ಕಬಳಿಸಿದರು. 

ರಾಣಾ 80, ತ್ರಿಪಾಠಿ 53; ಕೆಕೆಆರ್ 187/6
ಈ ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತ ನೈಟ್ ರೈಡರ್ಸ್ , ಆರಂಭಿಕ ನಿತೀಶ್ ರಾಣಾ (80) ಹಾಗೂ ರಾಹುಲ್ ತ್ರಿಪಾಠಿ (53) ಬಿರುಸಿನ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌‍ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 187 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಕೋಲ್ಕತ್ತ ತಂಡಕ್ಕೆ ಓಪನರ್‌ಗಳ ನಿತೀಶ್ ರಾಣಾ ಹಾಗೂ ಶುಭಮನ್ ಗಿಲ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಬಲಿಷ್ಠ ಹೈದರಾಬಾದ್ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿರು. ಅಲ್ಲದೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಪವರ್ ಪ್ಲೇ ಅಂತ್ಯಕ್ಕೆ 50 ರನ್‌ಗಳು ಹರಿದು ಬಂದಿದ್ದವು. 

ಈ ಹಂತದಲ್ಲಿ ದಾಳಿಗಿಳಿದ ರಶೀದ್ ಖಾನ್, ಅಪಾಯಕಾರಿ ಶುಭಮನ್ ಗಿಲ್ ಔಟ್ ಮಾಡಿದರು. ಈ ಮೂಲಕ ಜೊತೆಯಾಟವನ್ನು ಮುರಿದರು. 13 ಎಸೆತಗಳನ್ನು ಎದುರಿಸಿದ ಗಿಲ್ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 15 ರನ್ ಗಳಿಸಿದರು. 

ಬಳಿಕ ಕ್ರೀಸಿಗಿಳಿದ ರಾಹುಲ್ ತ್ರಿಪಾಠಿ ಜೊತೆಗೂಡಿದ ರಾಣಾ ತಂಡವನ್ನು ಮುನ್ನಡೆಸಿದರು. ಈ ನಡುವೆ ಅಂಪೈರ್ ಔಟ್ ನೀಡಿದರೂ ಡಿಆರ್‌ಎಸ್ ನೆರವಿನಿಂದ ರಾಣಾ ಪಾರಾದರು. ಅತ್ತ ತ್ರಿಪಾಠಿ ಐಪಿಎಲ್‌ನಲ್ಲಿ 1000 ರನ್‌ಗಳ ಮೈಲುಗಲ್ಲನ್ನು ತಲುಪಿದರು. 

10 ಓವರ್‌ಗಳ ವೇಳೆಗೆ ಕೋಲ್ಕತ್ತ ಒಂದು ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿತ್ತು. ಇನ್ನೊಂದೆಡೆ ಬಿರುಸಿನ ಆಟ ಪ್ರದರ್ಶಿಸಿದ ರಾಣಾ 37 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು. 

ತ್ರಿಪಾಠಿ ಜೊತೆಗೂ ಕೇವಲ 27 ಎಸೆತಗಳಲ್ಲಿ ರಾಣಾ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಅತ್ತ ರಾಣಾ ಅವರಿಗಿಂತಲೂ ಬಿರುಸಾಗಿ ಬ್ಯಾಟ್ ಬೀಸಿದ ತ್ರಿಪಾಠಿ ಕೇವಲ 28 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು. 

ಅಲ್ಲದೆ ರಾಣಾ ಜೊತೆಗೆ 50 ಎಸೆತಗಳಲ್ಲಿ 90 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 29 ಎಸೆತಗಳನ್ನು ಎದುರಿಸಿದ ತ್ರಿಪಾಠಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಔಟಾದರು. 

ಬಳಿಕ ಕ್ರೀಸಿಗಿಳಿದ ಆ್ಯಂಡ್ರೆ ರಸೆಲ್ (5) ಅವರನ್ನು ರಶೀದ್ ಖಾನ್ ಹೊರದಬ್ಬಿದರು. ಅಲ್ಲದೆ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 24 ರನ್ ಮಾತ್ರ ನೀಡಿ ಪ್ರಮುಖ ಎರಡು ವಿಕೆಟ್‌ಗಳನ್ನು ಕಬಳಿಸಿ ಪರಿಣಾಮಕಾರಿಯೆನಿಸಿದರು. 

ಈ ನಡುವೆ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಅಪಾಯಕಾರಿ ರಾಣಾ ಜೊತೆಗೆ ನಾಯಕ ಏಯಾನ್ ಮಾರ್ಗನ್ (2) ಹೊರದಬ್ಬಿದ ಸ್ಪಿನ್ನರ್ ಮೊಹಮ್ಮದ್ ನಬಿ ಡಬಲ್ ಆಘಾತ ನೀಡಿದರು. ಇದರೊಂದಿಗೆ ರಾಣಾ ಶತಕ ವಂಚಿತರಾದರು. ಅಲ್ಲದೆ ಬೃಹತ್ ಮೊತ್ತ ಪೇರಿಸುವ ಇರಾದೆಗೆ ಹಿನ್ನೆಡೆಯಾಯಿತು. 56 ಎಸೆತಗಳನ್ನು ಎದುರಿಸಿದ ರಾಣಾ ಒಂಬತ್ತು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 80 ರನ್ ಗಳಿಸಿದರು. 

ಅಂತಿಮ ಹಂತದಲ್ಲಿ ಕೇವಲ 9 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 22 ರನ್ ಗಳಿಸಿದ ದಿನೇಶ್ ಕಾರ್ತಿಕ್, ಸವಾಲಿನ ಮೊತ್ತವನ್ನು ಪೇರಿಸಲು ನೆರವಾದರು. ಪರಿಣಾಮ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು. ಇನ್ನುಳಿದಂತೆ ಶಕಿಬ್ ಅಲ್ ಹಸನ್ 3 ರನ್ ಗಳಿಸಿದರು. ಹೈದರಾಬಾದ್ ಪರ ರಶೀದ್ ಹಾಗೂ ನಬಿ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು