ಭಾನುವಾರ, ಅಕ್ಟೋಬರ್ 17, 2021
22 °C
ಪಂಜಾಬ್ ಕಿಂಗ್ಸ್ ಮುಂದೆ ಕಠಿಣ ಸವಾಲು; ವಿರಾಟ್ ಕೊಹ್ಲಿಗೆ ಪ್ಲೇಆಫ್ ಕನಸು

IPL-2021 | RCB vs PBKS: ಬೆಂಗಳೂರು ಬಳಗಕ್ಕೆ ರಾಹುಲ್ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ: ಪಂಜಾಬ್ ಕಿಂಗ್ಸ್ ತಂಡದ ನಾಯಕ, ಕನ್ನಡಿಗ ಕೆ.ಎಲ್. ರಾಹುಲ್  ಭಾನುವಾರ ತಮ್ಮ ತವರುನಾಡಿನ ರಾಸಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲೊಡ್ಡಲಿದ್ದಾರೆ.

ರಾಹುಲ್ ಮತ್ತು ಮಯಂಕ್ ಅಗರವಾಲ್ ಪಂಜಾಬ್ ತಂಡಕ್ಕೆ ಒಳ್ಳೆಯ ಆರಂಭಿಕ ಜೋಡಿಯಾಗಿ ಮಿಂಚುತ್ತಿದ್ದಾರೆ. ಅವರಿಬ್ಬರ ಸ್ನೇಹಿತ ದೇವದತ್ತ ಪಡಿಕ್ಕಲ್ ಆರ್‌ಸಿಬಿಯ ಆರಂಭಿಕ ಬ್ಯಾಟ್ಸ್‌ಮನ್ ಆಗಿ ವಿರಾಟ್ ಕೊಹ್ಲಿ ಅವರೊಂದಿಗೆ ಗಟ್ಟಿ ಬುನಾದಿ ಹಾಕುವ ಕಾರ್ಯ ಮಾಡುತ್ತಿದ್ದಾರೆ.

ಆದರೆ, ಬೆಂಗಳೂರು ತಂಡವು ಈ  ಪಂದ್ಯದಲ್ಲಿ ಗೆದ್ದುಬಿಟ್ಟರೆ ಪ್ಲೇ ಆಫ್‌ ಪ್ರವೇಶ ಖಚಿತವಾಗಲಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್ ಹಂತಕ್ಕೆ ಸಾಗಿವೆ. ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ವಿರಾಟ್ ಬಳಗದ ಖಾತೆಯಲ್ಲಿ 14 ಅಂಕಗಳಿವೆ.

ಆದರೆ, ಪಂಜಾಬ್ ಹಾದಿ ಸುಲಭವಲ್ಲ. ಖಾತೆಯಲ್ಲಿ ಹತ್ತು ಅಂಕಗಳನ್ನಿಟ್ಟುಕೊಂಡಿರುವ ರಾಹುಲ್ ಬಳಗ ತನ್ನ ಮುಂದಿರುವ ಇನ್ನೆರಡು ಪಂದ್ಯಗಳಲ್ಲಿ ಗೆಲ್ಲಲೇಬೇಕು. ಅದೂ ಉತ್ತಮ ರನ್‌ ಸರಾಸರಿಯೊಂದಿಗೆ. ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಜಯಿಸಿರುವ ಪಂಜಾಬ್ ಆತ್ಮವಿಶ್ವಾಸದಲ್ಲಿದೆ.  ಕೊನೆಯ ಓವರ್‌ನವರೆಗೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ಶಾರೂಕ್ ಖಾನ್ ಹೊಡೆದ ಸಿಕ್ಸರ್‌ನಿಂದಾಗಿ ಬಾಲಿವುಡ್ ತಾರೆ ಪ್ರೀತಿ ಜಿಂಟಾ ಸಹಮಾಲೀಕತ್ವದ ಪಂಜಾಬ್ ಗೆದ್ದಿತ್ತು. 

ಆದರೆ ಆರ್‌ಸಿಬಿಯನ್ನು ಎದುರಿಸಿ ನಿಲ್ಲುವುದು ಸಾಮಾನ್ಯ ಸವಾಲು ಅಲ್ಲ. ಏಕೆಂದರೆ, ತಂಡದ ಆರಂಭಿಕ ಜೋಡಿಯಂತೂ ಉತ್ತಮ ಲಯದಲ್ಲಿದೆ. ಅಲ್ಲದೇ ಕೆ.ಎಸ್. ಭರತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದ್ದಾರೆ. ಇವರ ನಂತರದ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್‌ ಇರುವುದು ತಂಡದ ಬಲವನ್ನು ಮತ್ತಷ್ಟು ದ್ವಿಗುಣಗೊಳಿಸಿದೆ.

ಆರ್‌ಸಿಬಿಯ ನಿಜವಾದ ಶಕ್ತಿ ಇರುವುದು ಬೌಲಿಂಗ್ ವಿಭಾಗದಲ್ಲಿ. ಪರ್ಪಲ್ ಕ್ಯಾಪ್‌ ಧಾರಿ ಹರ್ಷಲ್ ಪಟೇಲ್ ಡೆತ್ ಓವರ್‌ಗಳಲ್ಲಿ ಸತತವಾಗಿ ಮಿಂಚುತ್ತಿದ್ದಾರೆ. ಈ ಟೂರ್ನಿಯಲ್ಲಿ ಒಂದು ಹ್ಯಾಟ್ರಿಕ್ ಸಾಧನೆಯನ್ನೂ ಅವರು ಮಾಡಿದ್ದಾರೆ. ಅವರಿಗೆ ಸಿರಾಜ್ ಮೊಹಮ್ಮದ್ , ಕೈಲ್ ಜೆಮಿಸನ್ ಉತ್ತಮ ಜೊತೆ ನೀಡುತ್ತಿದ್ದಾರೆ. ಸ್ಪಿನ್ನರ್ ಯಜುವೇಂದ್ರ ಚಾಹಲ್ ಎದುರಾಳಿ ತಂಡದ ಜೊತೆಯಾಟಗಳನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಪಂಜಾಬ್ ತಂಡದ ಬೌಲಿಂಗ್ ರವಿ ಬಿಷ್ಣೋಯಿ ಬಿಟ್ಟರೆ ಉಳಿದವರಿಂದ ಸ್ಥಿರ ಪ್ರದರ್ಶನ ಕಂಡುಬರುತ್ತಿಲ್ಲ. ಈ ವಿಭಾಗವನ್ನು ಸರಿಪಡಿಸಲು ಮುಖ್ಯ ಕೋಚ್ ಅನಿಲ್ ಕುಂಬ್ಳೆ ಯಾವ ರೀತಿ ಯೋಜನೆ ಹೆಣೆಯುವರು ಎಂಬುದು ಕುತೂಹಲ ಮೂಡಿಸಿದೆ.

ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ (ನಾಯಕ), ದೇವದತ್ತ ಪಡಿಕ್ಕಲ್, ಕೆ.ಎಸ್. ಭರತ್, ಗ್ಲೆನ್ ಮ್ಯಾಕ್ಸ್‌ವೆಲ್,  ಎಬಿ ಡಿವಿಲಿಯರ್ಸ್, ಡ್ಯಾನ್ ಕ್ರಿಸ್ಟಿಯನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ಕೈಲ್ ಜೆಮಿಸನ್, ನವದೀಪ್ ಸೈನಿ, ಆಕಾಶ್‌ದೀಪ್, ಮೊಹಮ್ಮದ್ ಅಜರುದ್ದೀನ್, ವನಿಂದು ಹಸರಂಗ, ಟಿಮ್ ಡೇವಿಡ್

ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ), ಮಯಂಕ್ ಅಗರವಾಲ್, ಆರ್ಷದೀಪ್ ಸಿಂಗ್, ಶಾರೂಕ್ ಖಾನ್, ಮೊಹಮ್ಮದ್ ಶಮಿ, ನೇಥನ್ ಎಲ್ಲೀಸ್, ಮೊಹಮ್ಮದ್ ಶಮಿ, ಹರಪ್ರೀತ್ ಬ್ರಾರ್, ಮಯಿಸೆಸ್ ಹೆನ್ರಿಕ್ಸ್, ಏಡನ್ ಮರ್ಕರಂ, ಆದಿಲ್ ರಶೀದ್. ಮನದೀಪ್ ಸಿಂಗ್, ರವಿ ಬಿಷ್ಣೋಯಿ.

ಪಂದ್ಯ ಆರಂಭ: ಮಧ್ಯಾಹ್ನ 3.30

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು