ಮಂಗಳವಾರ, ಮೇ 11, 2021
24 °C
ಚೆನ್ನೈ ಸೂಪರ್ ಕಿಂಗ್ಸ್‌ –ಡೆಲ್ಲಿ ಕ್ಯಾಪಿಟಲ್ಸ್‌ ಪಂದ್ಯ ಇಂದು

ಐಪಿಎಲ್ 2021: ಮುಂಬೈನಲ್ಲಿ ‘ಗುರು–ಶಿಷ್ಯ’ರ ಮುಖಾಮುಖಿ, ನಾಯಕನಾಗಿ ಪಂತ್ ಪದಾರ್ಪಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ತಮ್ಮ ಬಾಲ್ಯದಿಂದಲೂ ಮಹೇಂದ್ರಸಿಂಗ್ ಧೋನಿಯ ವಿಕೆಟ್‌ ಕೀಪಿಂಗ್‌ ಕೌಶಲಗಳನ್ನು ಕಣ್ತುಂಬಿಕೊಳ್ಳುತ್ತ ಬೆಳೆದವರು ರಿಷಭ್ ಪಂತ್.

ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಾಗಿನಿಂದಲೂ ಧೋನಿಯೊಂದಿಗಿನ ಒಡನಾಟದಲ್ಲಿ ಕಲಿತದ್ದು ಅಪಾರ ಎಂದು ಅವರೇ ಹಲವು ಬಾರಿ ಹೇಳಿದ್ದಾರೆ. ಇದೀಗ ತಮ್ಮ ‘ಗುರು‘ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಗುರುವಿಗೆ ತಿರುಮಂತ್ರ ಹಾಕುವ ಛಲದಲ್ಲಿದ್ದಾರೆ.

ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಆದ್ದರಿಂದ ರಿಷಭ್ ಹೆಗಲಿಗೆ ನಾಯಕತ್ವದ ಹೊಣೆ ಬಿದ್ದಿದೆ. ಭಾರತ ಕ್ರಿಕೆಟ್‌ ತಂಡಕ್ಕೆ ಧೋನಿ ನಂತರದ ವಿಕೆಟ್‌ಕೀಪರ್ ಎಂದೇ ಭರವಸೆ ಮೂಡಿಸಿರುವ ಪಂತ್ ಮುಂದೆ ಕಠಿಣ ಸವಾಲಿದೆ.

ಹೋದ ವರ್ಷ ಯುಎಇಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಡೆಲ್ಲಿ ತಂಡವು ರನ್ನರ್ಸ್ ಅಪ್ ಆಗಿತ್ತು. ಅದೇ ಚೆನ್ನೈ ತಂಡವು ಪ್ಲೇ ಆಫ್‌ಗೂ ಪ್ರವೇಶಿಸಿರಲಿಲ್ಲ. ಡೆಲ್ಲಿ ತಂಡದಲ್ಲಿ ಅನುಭವಿ ಆಟಗಾರರಾದ ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ ಮತ್ತು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಇದ್ದಾರೆ. ಈಚೆಗಿನ ಅಂತರರಾಷ್ಟ್ರೀಯ ಸರಣಿಗಳಲ್ಲಿ ಪಂತ್  ಅಮೋಘ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಹೋದ ಐಪಿಎಲ್‌ನಲ್ಲಿ ಧವನ್ 618 ರನ್‌ಗಳನ್ನು ಪೇರಿಸಿದ್ದರು. ಪೃಥ್ವಿ ವಿಜಯ್ ಹಜಾರೆ ಟ್ರೋಫಿಯಲ್ಲಿ 827 ರನ್‌ಗಳನ್ನು ಕಲೆಹಾಕಿದ್ದರು. ತಂಡದಲ್ಲಿರುವ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್, ಶಿಮ್ರೊನ್ ಹೆಟ್ಮೆಯರ್ ಮತ್ತು ಸ್ಯಾಮ್ ಬಿಲಿಂಗ್ಸ್ ಪಂದ್ಯದ ಯಾವುದೇ ಹಂತದಲ್ಲಿಯೂ ಎದುರಾಳಿ ಬಳಗಕ್ಕೆ ‘ಅಘಾತ’ ನೀಡಬಲ್ಲ ಸಮರ್ಥರು.

ಬೌಲಿಂಗ್‌ನಲ್ಲಿ ಕಗಿಸೊ ರಬಾಡ, ಕ್ರಿಸ್ ವೋಕ್ಸ್‌ ಮತ್ತು ಎನ್ರಿಚ್ ಜೊತೆಗೆ ಈ ಬಾರಿ ಉಮೇಶ್ ಯಾದವ್ ಕೂಡ ಜೊತೆಗೂಡಿದ್ದಾರೆ. ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಅಮಿತ್ ಮಿಶ್ರಾ ಇಲ್ಲಿ ತಮ್ಮ ಅನುಭವವನ್ನು ಪಣಕ್ಕೊಡ್ಡಲಿದ್ದಾರೆ.

ಹೋದ ಬಾರಿಯ ಸೋಲು ಮರೆಸುವಂತಹ ಅಟವಾಡುವ ಛಲದಲ್ಲಿರುವ ಚೆನ್ನೈ ತಂಡದಲ್ಲಿ ಈ ಬಾರಿ ಕೆಲವು ಪ್ರಮುಖ ಬದಲಾವಣೆಗಳಿವೆ. ಐಪಿಎಲ್‌ನಲ್ಲಿ 5,368 ರನ್‌ಗಳಿಸಿರುವ ಸುರೇಶ್ ರೈನಾ ತಂಡಕ್ಕೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾದ ಫಫ್ ಡುಪ್ಲೆಸಿ ಮತ್ತು ಅಂಬಟಿ ರಾಯುಡು ಅವರಿಂದಾಗಿ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್, ಆಲ್‌ರೌಂಡರ್ ಸ್ಯಾಮ್ ಕರನ್ ಮತ್ತು ಮೋಯಿನ್ ಅಲಿ ತಂಡದಲ್ಲಿದ್ದಾರೆ. ‘ಕ್ಯಾಪ್ಟನ್ ಕೂಲ್‘ ಧೋನಿ ಮಧ್ಯ ಕ್ರಮಾಂಕದ ಬ್ಯಾಟಿಂಗ್‌ಗೆ ಬಲ ತುಂಬುವ ನಿರೀಕ್ಷೆ ಇದೆ.

ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಸ್ಪಿನ್ನರ್ ರವೀಂದ್ರ ಜಡೇಜ ಮತ್ತು ಕನ್ನಡಿಗ ಕೃಷ್ಣಪ್ಪ ಗೌತಮ್ ಬೌಲಿಂಗ್ ವಿಭಾಗದಲ್ಲಿದ್ದಾರೆ. ಇದರಿಂದಾಗಿ ಡೆಲ್ಲಿ ಬ್ಯಾಟಿಂಗ್ ಪಡೆಗೆ ದಿಟ್ಟ ಸವಾಲೊಡ್ಡುವ ಸಾಮರ್ಥ್ಯ ಚೆನ್ನೈನಲ್ಲಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು