ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯರ್-ತ್ರಿಪಾಠಿ ಅಬ್ಬರ: 4ನೇ ಸ್ಥಾನಕ್ಕೇರಿದ ಕೆಕೆಆರ್; ಮುಂಬೈ ತತ್ತರ

Last Updated 23 ಸೆಪ್ಟೆಂಬರ್ 2021, 18:08 IST
ಅಕ್ಷರ ಗಾತ್ರ

ಅಬುಧಾಬಿ: ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ವೆಂಕಟೇಶ ಅಯ್ಯರ್ (53) ಹಾಗೂ ರಾಹುಲ್ ತ್ರಿಪಾಠಿ (74*) ಬಿರುಸಿನ ಅರ್ಧಶತಕಗಳ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

156 ರನ್ ಗುರಿ ಬೆನ್ನತ್ತಿದ ಕೋಲ್ಕತ್ತ ಇನ್ನು 4.5 ಓವರ್‌ಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಕೇವಲ 25 ಎಸೆತಗಳಲ್ಲೇ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಅಯ್ಯರ್, ಅಬ್ಬರಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ರಾಹುಲ್ 29 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು. ಅಂತಿಮವಾಗಿ 15.1 ಓವರ್‌ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಈ ಗೆಲುವಿನೊಂದಿಗೆ ಆರನೇ ಸ್ಥಾನದಲ್ಲಿದ್ದ ಕೆಕೆಆರ್, ಎಂಟು ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ನೆಗೆದಿದೆ. ಅತ್ತ ನಾಲ್ಕನೇ ಸ್ಥಾನದಲ್ಲಿದ್ದ ಮುಂಬೈ ಆರನೇ ಸ್ಥಾನಕ್ಕೆ ಕುಸಿದಿದೆ.

156 ರನ್ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡಕ್ಕೆ ಯುವ ಓಪನರ್‌ಗಳಾದ ಶುಭಮನ್ ಗಿಲ್ ಹಾಗೂ ವೆಂಕಟೇಶ ಅಯ್ಯರ್ ಬಿರುಸಿನ ಆರಂಭವೊದಗಿಸಿದರು. ಪರಿಣಾಮ ಮೊದಲೆರಡು ಓವರ್‌ಗಳಲ್ಲಿ 30 ರನ್ ಹರಿದು ಬಂದಿದ್ದವು.

ಟ್ರೆಂಟ್ ಬೌಲ್ಟ್ ಹಾಗೂ ಆ್ಯಡಂ ಮಿಲ್ನೆ ಅವರಂತಹ ಅಂತರರಾಷ್ಟ್ರೀಯ ದರ್ಜೆಯ ವೇಗಿಗಳನ್ನು ಎಡಗೈ ಆರಂಭಿಕ ವೆಂಕಟೇಶ ಚಚ್ಚಿದರು. ಈ ನಡುವೆ ಜಸ್‌ಪ್ರೀತ್ ಬೂಮ್ರಾ ದಾಳಿಯಲ್ಲಿ ಗಿಲ್ (13) ಕ್ಲೀನ್ ಬೌಲ್ಡ್ ಆದರು. ಆಗಲೇ ಮೊದಲ ವಿಕೆಟ್‌ಗೆ ಮೂರು ಓವರ್‌ಗಳಲ್ಲಿ 40 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಪವರ್ ಪ್ಲೇ ಅಂತ್ಯಕ್ಕೆ 63 ರನ್‌ಗಳು ಹರಿದು ಬಂದಿದ್ದವು. ವೆಂಕಟೇಶ ಅಯ್ಯರ್‌ಗೆ ರಾಹುಲ್ ತ್ರಿಪಾಠಿ ಉತ್ತಮ ಸಾಥ್ ನೀಡಿದರು. ಅಲ್ಲದೆ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಯುವ ಆಟಗಾರ ವೆಂಕಟೇಶ ಅಯ್ಯರ್ ಕೇವಲ 25 ಎಸೆತಗಳಲ್ಲೇ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಸಾಧನೆ ಮಾಡಿದರು. ಇದಾದ ಬೆನ್ನಲ್ಲೇ ರಾಹುಲ್ ತ್ರಿಪಾಠಿ 29 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ಮಿಂಚಿದರು.

ಅರ್ಧಶತಕದ ಬಳಿಕ ಬೂಮ್ರಾ ದಾಳಿಯಲ್ಲಿ ಅಯ್ಯರ್ ಕ್ಲೀನ್ ಬೌಲ್ಡ್ ಆದರು. ಆಗಲೇ 30 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು.

ಇನ್ನೊಂದೆಡೆ ಆಕ್ರಮಣಕಾರಿ ಆಟ ಪ್ರದರ್ಶಿಸಿದ ತ್ರಿಪಾಠಿ ತಂಡವನ್ನು ಗೆಲುವಿನ ದಡ ಸೇರಿಸಿದರು. 42 ಎಸೆತಗಳನ್ನು ಎದುರಿಸಿದ ತ್ರಿಪಾಠಿ ಎಂಟು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 74 ರನ್ ಗಳಿಸಿ ಔಟಾಗದೆ ಉಳಿದರು.

ಇನ್ನುಳಿದಂತೆ ಏಯಾನ್ ಮಾರ್ಗನ್ (7) ಹಾಗೂ ನಿತೀಶ್ ರಾಣಾ (4*) ರನ್ ಗಳಿಸಿದರು. ಮುಂಬೈ ಪರ ಬೂಮ್ರಾ 43 ರನ್ ತೆತ್ತು ಮೂರು ವಿಕೆಟ್ ಗಳಿಸಿದರು.

ಈ ಮೊದಲು ನಾಯಕ ರೋಹಿತ್ ಶರ್ಮಾ ಆಗಮನದೊಂದಿಗೆ ಮುಂಬೈ ತಂಡವು ಬಲ ವೃದ್ಧಿಸಿಕೊಂಡಿತು. ಇದಕ್ಕೆ ತಕ್ಕಂತೆ ಕ್ವಿಂಟನ್ ಡಿ ಕಾಕ್ ಜೊತೆ ಸೇರಿ ಮೊದಲ ವಿಕೆಟ್‌ಗೆ 9.2 ಓವರ್‌ಗಳಲ್ಲೇ 78 ರನ್‌ಗಳ ಜೊತೆಯಾಟವನ್ನು ನೀಡಿದರು.

ಈ ಮಧ್ಯೆ ರೋಹಿತ್, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸಹಸ್ರ ರನ್‌ಗಳ ದಾಖಲೆಯನ್ನು ಬರೆದರು. ಉತ್ತಮವಾಗಿ ಆಡುತ್ತಿದ್ದ ರೋಹಿತ್ ಅವರನ್ನು ಸುನಿಲ್ ನಾರಾಯಣ್ ಹೊರದಬ್ಬಿದರು. 30 ಎಸೆತಗಳನ್ನು ಎದುರಿಸಿದ ಹಿಟಮ್ಯಾನ್ ನಾಲ್ಕು ಬೌಂಡರಿಗಳ ನೆರವಿನಿಂದ 33 ರನ್ ಗಳಿಸಿದರು.

ಇದಾದ ಬೆನ್ನಲ್ಲೇ ಕೆಕೆಆರ್ ವೇಗಿ ಕನ್ನಡಿಗ ಪ್ರಸಿದ್ಧ ಕೃಷ್ಣ, ಅಪಾಯಕಾರಿ ಸೂರ್ಯಕುಮಾರ್ ಯಾದವ್ (5) ವಿಕೆಟ್ ಪಡೆದು ಮಿಂಚಿದರು.

ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಕ್ವಿಂಟನ್ ಡಿ ಕಾಕ್ ಅರ್ಧಶತಕದ ಸಾಧನೆ ಮಾಡಿದರು. ಆದರೆ ಫಿಫ್ಟಿ ಬೆನ್ನಲ್ಲೇ ಪ್ರಸಿದ್ಧ ದಾಳಿಯಲ್ಲೇ ವಿಕೆಟ್ ಒಪ್ಪಿಸಿದರು. 42 ಎಸೆತಗಳನ್ನು ಎದುರಿಸಿದ ಡಿ ಕಾಕ್ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು.

ನಿರಂತರ ಅಂತರಾಳದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಹಾಲಿ ಚಾಂಪಿಯನ್ನರಿಗೆ ಹಿನ್ನೆಡೆಯಾಗಿ ಪರಿಣಮಿಸಿತು. ಅಂತಿಮ ಹಂತದಲ್ಲಿ ಕೀರನ್ ಪೊಲಾರ್ಡ್ 21 ರನ್ ಗಳಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಇನ್ನುಳಿದಂತೆ ಇಶಾನ್ ಕಿಶನ್ (14), ಕೃಣಾಲ್ ಪಾಂಡ್ಯ (12) ರನ್ ಗಳಿಸಿದರು.

ಆ ಮೂಲಕ ಆರು ವಿಕೆಟ್ ನಷ್ಟಕ್ಕೆ 155 ರನ್ ಪೇರಿಸಿತು. ಕೆಕೆಆರ್ ಪರ ಲಾಕಿ ಫರ್ಗ್ಯುಸನ್ ಹಾಗೂ ಪ್ರಸಿದ್ದ ಕೃಷ್ಣ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT