ಸೋಮವಾರ, ಜುಲೈ 4, 2022
22 °C

68ರಿಂದ 115; ಆರ್‌ಸಿಬಿ ಸೋಲಿಗೆ ಕಾರಣಗಳೇನು?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪುಣೆ: ಐಪಿಎಲ್ 2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಸೋಲಿನ ಆಘಾತಕ್ಕೆ ಒಳಗಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 68 ರನ್ನಿಗೆ ಆಲೌಟ್ ಆಗಿದ್ದ ಆರ್‌ಸಿಬಿ, ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ 115 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರೊಂದಿಗೆ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಮೊದಲು ಬ್ಯಾಟಿಂಗ್ ಹಾಗೂ ಚೇಸಿಂಗ್ ವೇಳೆ ಅತಿ ಕಡಿಮೆ ರನ್ನಿಗೆ ಆಲೌಟ್ ಆದ ತಂಡವೆಂಬ ಅಪಖ್ಯಾತಿಗೆ ಒಳಗಾಗಿದೆ.

ಇದನ್ನೂ ಓದಿ: 

ಅಗ್ರ ಕ್ರಮಾಂಕದ ವೈಫಲ್ಯ
ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಸತತ ವೈಫಲ್ಯ ಆರ್‌ಸಿಬಿ ತಂಡವನ್ನು ಬಲವಾಗಿ ಕಾಡುತ್ತಿವೆ. ಅನುಜ್ ರಾವತ್ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದರೂ ಈ ಯೋಜನೆ ಫಲ ಕೊಡಲಿಲ್ಲ.

ಕೊಹ್ಲಿ ಕೇವಲ ಒಂಬತ್ತು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕಳೆದೆರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ವಿರಾಟ್ ಅವರ ಕಳಪೆ ಆಟ ಮುಂದುವರಿಯಿತು.

ಅನುಜ್ ಸ್ಥಾನದಲ್ಲಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡ ರಜತ್ ಪಾಟೀದಾರ್, ಎಸೆತಕ್ಕೆ ಒಂದರಂತೆ 16 ರನ್ ಗಳಿಸಿ ಔಟ್ ಆದರು.

ದಿಢೀರ್ ಪತನ...
ಹಿಂದಿನ ಪಂದ್ಯಕ್ಕೆ ಸಮಾನವಾಗಿ ಆರ್‌ಸಿಬಿ ದಿಢೀರ್ ಪತನಕ್ಕೊಳಗಾಯಿತು. ನಾಯಕ ಫಫ್ ಡುಪ್ಲೆಸಿ (23) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (0) ಅವರನ್ನು ಬೆನ್ನು ಬೆನ್ನಿಗೆ ಹೊರದಬ್ಬಿದ ಯುವ ವೇಗಿ ಕುಲ್‌ದೀಪ್ ಸೆನ್ ಬಲವಾದ ಪೆಟ್ಟು ನೀಡಿದರು. ಇಲ್ಲಿಂದ ಬಳಿಕ ಆರ್‌ಸಿಬಿ ಚೇತರಿಸಿಕೊಳ್ಳಲೇ ಇಲ್ಲ.

 

 

 

ಬಲಾಢ್ಯ ಮಧ್ಯಮ ಕ್ರಮಾಂಕದ ಕೊರತೆ...
ಇತರೆ ತಂಡಗಳಿಗೆ ಹೋಲಿಸಿದಾಗ ಬಲಾಢ್ಯ ಮಧ್ಯಮ ಕ್ರಮಾಂಕದ ಕೊರತೆಯನ್ನು ಆರ್‌ಸಿಬಿ ಎದುರಿಸುತ್ತಿದೆ. ಶಹಬಾಜ್ ಅಹ್ಮದ್ ಉಪಯುಕ್ತ ಇನ್ನಿಂಗ್ಸ್ ಕಟ್ಟಿ ಗಮನ ಸೆಳೆಯುತ್ತಿದ್ದರೂ ಸುಯಾಶ್ ಪ್ರಭುದೇಸಾಯಿ ನಿರೀಕ್ಷೆ ಮುಟ್ಟುವಲ್ಲಿ ವಿಫಲರಾಗಿದ್ದಾರೆ.

 

ಕೆಳ ಮಧ್ಯಮ ಕ್ರಮಾಂಕದಲ್ಲಿ ಹೊಡೆ-ಬಡಿ ದಾಂಡಿಗರ ಕೊರತೆಯನ್ನು ಎದುರಿಸುತ್ತಿದೆ. ನಿರ್ಣಾಯಕ ಹಂತದಲ್ಲಿ ಫಿನಿಶರ್ ದಿನೇಶ್ ಕಾರ್ತಿಕ್ ರನೌಟ್ ಆಗುವುದರೊಂದಿಗೆ ಆರ್‌ಸಿಬಿ ಗೆಲುವಿನ ಕನಸು ಕಮರಿತು.

ಬೌಲಿಂಗ್‌ನಲ್ಲಿ ಸ್ಥಿರತೆ ಅಗತ್ಯ...
ರಾಜಸ್ಥಾನ್ ತಂಡವನ್ನು 144 ರನ್ನಿಗೆ ನಿಯಂತ್ರಿಸಲೂ ಯಶಸ್ವಿಯಾದರೂ ಕೊನೆಯ ಎರಡು ಓವರ್‌ನಲ್ಲಿ ಆರ್‌ಸಿಬಿ 30 ರನ್‌ಗಳನ್ನು ಬಿಟ್ಟುಕೊಟ್ಟಿತ್ತು ಎಂಬುದು ಗಮನಾರ್ಹವೆನಿಸುತ್ತದೆ.

ಜೋಶ್ ಹ್ಯಾಜಲ್‌ವುಡ್ ಹಾಗೂ ವನಿಂದು ಹಸರಂಗ ಪರಿಣಾಮಕಾರಿ ಎನಿಸಿಕೊಂಡರೂ ಮೊಹಮ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ದುಬಾರಿಯೆನಿಸಿದ್ದಾರೆ.

ಗೆಲುವಿನ ಹಾದಿಗೆ ಮರಳಲು ಆರ್‌ಸಿಬಿ ಒಂದು ತಂಡವಾಗಿ ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಅನಿವಾರ್ಯವೆನಿಸಿದೆ. ಪ್ರಸ್ತುತ ಒಂಬತ್ತು ಪಂದ್ಯಗಳಲ್ಲಿ ಐದು ಗೆಲುವು ಹಾಗೂ ನಾಲ್ಕು ಸೋಲಿನೊಂದಿಗೆ 10 ಅಂಕ ಗಳಿಸಿರುವ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು