ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 | ನಾಲ್ಕನೇ ಪಂದ್ಯದಲ್ಲೂ ಮುಗ್ಗರಿಸಿದ ಚೆನ್ನೈ; ರೈಸರ್ಸ್‌ಗೆ ಮೊದಲ ಜಯ

Last Updated 9 ಏಪ್ರಿಲ್ 2022, 15:06 IST
ಅಕ್ಷರ ಗಾತ್ರ

ನವಿ ಮುಂಬೈ: ಹಾಲಿ ಚಾಂಪಿಯನ್ನರ ವಿರುದ್ಧ ಆಲ್‌ರೌಂಡ್‌ ಆಟ ಪ್ರದರ್ಶಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ 15ನೇ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿತು.

ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಪಂದ್ಯದಲ್ಲಿ 155 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ 14 ಎಸೆತಗಳು ಬಾಕಿ ಇರುವಾಗಲೇ ಎರಡು ವಿಕೆಟ್ ಕಳೆದುಕೊಂಡು ದಡ ಸೇರಿತು. ಮೊದಲ ಜಯದ ಕನಸು ಹೊತ್ತು ಕಣಕ್ಕೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ನಿರಾಸೆಗೆ ಒಳಗಾಯಿತು.

ಸಾಧಾರಣ ಗುರಿ ಬೆನ್ನತ್ತಿದ ಹೈದರಾಬಾದ್ ಪರ ಅಭಿಷೇಕ್ ಶರ್ಮಾ ಮತ್ತು ನಾಯಕ ಕೇನ್ ವಿಲಿಯಮ್ಸನ್ ಮೊದಲ ವಿಕೆಟ್‌ಗೆ 73 ಎಸೆತಗಳಲ್ಲಿ 89 ರನ್ ಗಳಿಸಿದರು. ವಿಲಿಯಮ್ಸನ್ ಔಟಾದ ನಂತರವೂ ಅಭಿಷೇಕ್ ಭರ್ಜರಿ ಆಟ ಮುಂದುವರಿಸಿದರು. ಗೆಲುವಿಗೆ 10 ರನ್ ಬೇಕಾಗಿದ್ದಾಗ ಅಭಿಷೇಕ್ ವಾಪಸಾದರು. ಆದರೆ 15 ಎಸೆತಗಳಲ್ಲಿ 39 ರನ್ ಸಿಡಿಸಿದ ರಾಹುಲ್ ತ್ರಿಪಾಠಿ ಸುಲಭ ಜಯ ತಂದುಕೊಟ್ಟರು.

ಖ್ಯಾತನಾಮರ ಬ್ಯಾಟಿಂಗ್ ವೈಫಲ್ಯ
ಟಾಸ್ ಗೆದ್ದ ಸನ್‌ರೈಸರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ರವೀಂದ್ರ ಜಡೇಜ, ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಮತ್ತು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರು. ಮೂರನೇ ಕ್ರಮಾಂಕದ ಮೋಯಿನ್ ಅಲಿ ಅವರ ದಿಟ್ಟ ಆಟದಿಂದಾಗಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಗಳಿಸಲು ಸಾಧ್ಯವಾಯಿತು.

ಒಂದು ಬೌಂಡರಿ ಗಳಿಸಿ ಮಿಂಚಿದ ಉತ್ತಪ್ಪ 11 ಎಸೆತಗಳಲ್ಲಿ 15 ರನ್‌ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಆಗ ತಂಡದ ಮೊತ್ತ 25 ಆಗಿತ್ತು. ನಂತರ 11 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕವಾಡ್ ಕೂಡ ವಾಪಸಾದರು.

ಈ ಸಂದರ್ಭದಲ್ಲಿ ಜೊತೆಗೂಡಿದ ಮೋಯಿನ್ ಮತ್ತು ಅಂಬಟಿ ರಾಯುಡು ಇನಿಂಗ್ಸ್‌ಗೆ ಬಲ ತುಂಬಿದರು. ಮೂರನೇ ವಿಕೆಟ್‌ಗೆ ಇವರಿಬ್ಬರು 62 ರನ್ ಸೇರಿಸಿ ಭರವಸೆ ಮೂಡಿಸಿದರು. ಉತ್ತಪ್ಪ ವಿಕೆಟ್ ಉರುಳಿಸಿದ ವಾಷಿಂಗ್ಟನ್ ಸುಂದರ್ ಅವರು ರಾಯುಡು ವಿಕೆಟ್ ಗಳಿಸಿ ಈ ಜೊತೆಯಾಟವನ್ನು ಕೂಡ ಮುರಿದರು. 35 ಎಸೆತಗಳಲ್ಲಿ 48 ರನ್ ಕಲೆ ಹಾಕಿದ್ದ ಮೋಯಿನ್ ತಂಡದ ಮೊತ್ತವನ್ನು ಮೂರಂಕಿ ದಾಟಿಸಿ ಔಟಾದರು.

ನಾಯಕ ರವೀಂದ್ರ ಜಡೇಜ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಇತರ ಬ್ಯಾಟರ್‌ಗಳಿಂದ ಅವರಿಗೆ ಪೂರಕ ಸಹಕಾರ ಸಿಗಲಿಲ್ಲ.

ಸಂಕ್ಷಿಪ್ತ ಸ್ಕೋರು
ಚೆನ್ನೈ ಸೂಪರ್ ಕಿಂಗ್ಸ್‌:
20 ಓವರ್‌ಗಳಲ್ಲಿ 7ಕ್ಕೆ 154 (ರಾಬಿನ್ ಉತ್ತಪ್ಪ 15, ಋತುರಾಜ್ ಗಾಯಕವಾಡ್‌ 16, ಮೋಯಿನ್ ಅಲಿ 48, ಅಂಬಟಿ ರಾಯುಡು 27, ರವೀಂದ್ರ ಜಡೇಜ 23; ಭುವನೇಶ್ವರ್ ಕುಮಾರ್ 36ಕ್ಕೆ1, ಮಾರ್ಕೊ ಜಾನ್ಸೆನ್‌ 30ಕ್ಕೆ1, ವಾಷಿಂಗ್ಟನ್ ಸುಂದರ್ 21ಕ್ಕೆ2, ಟಿ.ನಟರಾಜನ್ 30ಕ್ಕೆ 2, ಏಡನ್ ಮರ್ಕರಮ್ 8ಕ್ಕೆ1)

ಸನ್‌ರೈಸರ್ಸ್‌ ಹೈದರಾಬಾದ್: 17.4 ಓವರ್‌ಗಳಲ್ಲಿ 2ಕ್ಕೆ 155 (ಅಭಿಷೇಕ್ ಶರ್ಮಾ 75, ಕೇನ್ ವಿಲಿಯಮ್ಸನ್ 32, ರಾಹುಲ್ ತ್ರಿಪಾಠಿ ಔಟಾಗದೆ 39; ಮುಕೇಶ್ ಚೌಧರಿ 30ಕ್ಕೆ1, ಡ್ವೇನ್ ಬ್ರಾವೊ 29ಕ್ಕೆ1)

ಫಲಿತಾಂಶ: ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 8 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT