ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 KKR vs DC: ವಾರ್ನರ್, ಪೃಥ್ವಿ ಅಬ್ಬರ; ಡೆಲ್ಲಿಗೆ ಮಣಿದ ಕೆಕೆಆರ್

Last Updated 10 ಏಪ್ರಿಲ್ 2022, 14:10 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 44 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕೆಕೆಆರ್ ತಂಡಕ್ಕೆ ಸೋಲಿನ ರುಚಿ ತೋರಿಸಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಡೆಲ್ಲಿ, ಡೇವಿಡ್ ವಾರ್ನರ್ (61) ಹಾಗೂ ಪೃಥ್ವಿ ಶಾ (51) ಬಿರುಸಿನ ಅರ್ಧಶತಕಗಳ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 215 ರನ್ ಪೇರಿಸಿತ್ತು.

ಬೃಹತ್ ಗುರಿ ಬೆನ್ನತ್ತಿದ ಕೆಕೆಆರ್, ನಾಯಕ ಶ್ರೇಯಸ್ ಅಯ್ಯರ್ ದಿಟ್ಟ ಹೋರಾಟದ (54) ಹೊರತಾಗಿಯೂ 19.4 ಓವರ್‌ಗಳಲ್ಲಿ 171 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ನಾಯಕನ ಆಟವಾಡಿದ ಅಯ್ಯರ್ 33 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.

ನಿತೀಶ್ ರಾಣಾ 30, ಆಂಡ್ರೆ ರಸೆಲ್ 24, ವೆಂಕಟೇಶ್ ಅಯ್ಯರ್ 18 ಹಾಗೂ ಸ್ಯಾಮ್ಸ್ ಬಿಲ್ಲಿಂಗ್ಸ್ 15 ರನ್ ಗಳಿಸಿದರು. ಅಜಿಂಕ್ಯ ರಹಾನೆ (8), ಪ್ಯಾಟ್ ಕಮಿನ್ಸ್ (4), ಸುನಿಲ್ ನಾರಾಯಣ್ (4), ಉಮೇಶ್ ಯಾದವ್ (0) ನಿರಾಸೆ ಮೂಡಿಸಿದರು.

ಡೆಲ್ಲಿ ಪರ ಕುಲ್‌ದೀಪ್ ಯಾದವ್ ನಾಲ್ಕು, ಖಲೀಲ್ ಅಹ್ಮದ್ ಮೂರು ಹಾಗೂ ಶಾರ್ದೂಲ್ ಠಾಕೂರ್ ಎರಡು ವಿಕೆಟ್ ಕಿತ್ತು ಮಿಂಚಿದರು.

ವಾರ್ನರ್, ಪೃಥ್ವಿ ಅಬ್ಬರ...
ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಬಿರುಸಿನ ಆರಂಭವೊದಗಿಸಿದರು. ಅಲ್ಲದೆ ಪವರ್ ಪ್ಲೇನಲ್ಲಿ 68 ರನ್ ಒಟ್ಟುಗೂಡಿಸಿದರು.

ಚಿತ್ತಾಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಪೃಥ್ವಿ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ಆಗಲೇ ವಾರ್ನರ್ ಜೊತೆ ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 93 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಅತ್ತ ಪೃಥ್ವಿ ರೀತಿಯಲ್ಲಿ ಆಕ್ರಮಣಕಾರಿ ಇನ್ನಿಂಗ್ಸ್ ಕಟ್ಟಿದ ವಾರ್ನರ್ 35 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಅವರಿಗೆ ನಾಯಕ ರಿಷಭ್ ಪಂತ್ (27) ಅವರಿಂದಲೂ ಉತ್ತಮ ಬೆಂಬಲ ದೊರಕಿತು. 14 ಎಸೆತಗಳನ್ನು ಎದುರಿಸಿದ ಪಂತ್ ಇನ್ನಿಂಗ್ಸ್‌ನಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್‌ಗಳು ಸೇರಿದ್ದವು.

ಈ ನಡುವೆ ಲಲಿತ್ ಯಾದವ್ (1), ರೋವ್‌ಮ್ಯಾನ್ ಪೊವೆಲ್ (8) ಜೊತೆಗೆ ಸೆಟ್ ಬ್ಯಾಟರ್ ವಾರ್ನರ್ ಔಟ್ ಆಗುವುದರೊಂದಿಗೆ ಹಿನ್ನಡೆ ಅನುಭವಿಸಿತು. 45 ಎಸೆತಗಳನ್ನು ಎದುರಿಸಿದ ವಾರ್ನರ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರು.

ಕೊನೆ ಹಂತದಲ್ಲಿ ಶಾರ್ದೂಲ್ ಠಾಕೂರ್ (29*) ಹಾಗೂ ಅಕ್ಷರ್ ಪಟೇಲ್ (22*) ಬಿರುಸಿನ ಆಟದ ನೆರವಿನಿಂದ ಡೆಲ್ಲಿ ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಯಿತು.

ಇವರಿಬ್ಬರು ಮುರಿಯದ ಆರನೇ ವಿಕೆಟ್‌ಗೆ 49 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 11 ಎಸೆತಗಳನ್ನು ಎದುರಿಸಿದ ಠಾಕೂರ್ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 29 ರನ್ ಗಳಿಸಿ ಔಟಾಗದೆ ಉಳಿದರು. ಇನ್ನೊಂದೆಡೆ 14 ಎಸೆತಗಳನ್ನು ಎದುರಿಸಿದ ಅಕ್ಷರ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್‌ನಿಂದ 22 ರನ್ ಗಳಿಸಿ ಅಜೇಯರಾಗುಳಿದರು.

ಕೆಕೆಆರ್ ಪರ ಸುನಿಲ್ ನಾರಾಯಣ್ 21 ರನ್ ತೆತ್ತು ಎರಡು ವಿಕೆಟ್ ಕಬಳಿಸಿದರು.

i
ಕೆಕೆಆರ್ ಫೀಲ್ಡಿಂಗ್...
ಈ ಮೊದಲುಟಾಸ್ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಪ್ಲೇಯಿಂಗ್ ಇಲೆವೆನ್:

Delhi Capitals (Playing XI): Prithvi Shaw, David Warner, Rishabh Pant(w/c), Rovman Powell, Sarfaraz Khan, Lalit Yadav, Axar Patel, Shardul Thakur, Kuldeep Yadav, Mustafizur Rahman, Khaleel Ahmed

Kolkata Knight Riders (Playing XI): Ajinkya Rahane, Venkatesh Iyer, Shreyas Iyer(c), Sam Billings(w), Nitish Rana, Andre Russell, Sunil Narine, Pat Cummins, Umesh Yadav, Rasikh Salam, Varun Chakaravarthy

ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಭಾನುವಾರ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿಸುತ್ತಿದೆ.

ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತ ತಂಡವು ನಾಲ್ಕು ಪಂದ್ಯಗಳನ್ನಾಡಿ, ಮೂರರಲ್ಲಿ ಜಯಿಸಿದೆ. ಆಲ್‌ರೌಂಡರ್ ಆ್ಯಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಸುನೀಲ್ ನಾರಾಯಣ ಈ ತಂಡದ ಪ್ರಮುಖ ಶಕ್ತಿಯಾಗಿದ್ಧಾರೆ. ರಿಷಭ್ ಪಂತ್ ನಾಯಕತ್ವದ ಡೆಲ್ಲಿ ತಂಡವು ಮೂರು ಪಂದ್ಯಗಳನ್ನಾಡಿ ಎರಡರಲ್ಲಿ ಸೋತು ಒಂದು ಗೆದ್ದಿದೆ. ತಂಡದ ಬ್ಯಾಟರ್ ಪೃಥ್ವಿ ಶಾ, ರಿಷಭ್, ಸರ್ಫರಾಜ್ ಖಾನ್ ಉತ್ತಮ ಲಯದಲ್ಲಿದ್ಧಾರೆ.
ಬೌಲಿಂಗ್ ವಿಭಾಗದಲ್ಲಿ ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀ‍ಪ್ ಯಾದವ್ ಮತ್ತು ಮುಸ್ತಫಿಜುರ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದರೆ ತಂಡದ ಜಯದ ಹಾದಿ ನಿಚ್ಚಳವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT