ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 MI vs KKR: ಕಮಿನ್ಸ್ ಅರ್ಧಶತಕದ ಮಿಂಚು; ಕೋಲ್ಕತ್ತ ಜಯಭೇರಿ

Last Updated 6 ಏಪ್ರಿಲ್ 2022, 18:25 IST
ಅಕ್ಷರ ಗಾತ್ರ

ಪುಣೆ: ಆರಂಭಿಕ ಬ್ಯಾಟರ್ ವೆಂಕಟೇಶ್ ಅಯ್ಯರ್ ಅವರ ಅಮೋಘ ಅರ್ಧಶತಕದ ಬೆನ್ನಲ್ಲೇ ಏಳನೇ ಕ್ರಮಾಂಕದ ‍ಪ್ಯಾಟ್ ಕಮಿನ್ಸ್ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದರು. ಇವರಿಬ್ಬರ ಅಬ್ಬರದ ಆಟದ ಬಲದಿಂದ ಕೋಲ್ಕತ್ತ ನೈಟ್ ರೈಡರ್ಸ್ ಭರ್ಜರಿ ಜಯ ಸಾಧಿಸಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಂಗಣದಲ್ಲಿ ಬುಧವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ 5 ವಿಕೆಟ್‌ಗಳ ಜಯ ಗಳಿಸಿತು.

162 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೋಲ್ಕತ್ತ 24 ಎಸೆತಗಳು ಬಾಕಿ ಇರುವಾಗಲೇ ದಡ ಸೇರಿತು. ಅರಂಭಿಕ ಬ್ಯಾಟರ್ ಅಜಿಂಕ್ಯ ರಹಾನೆ ಬೇಗನೇ ಔಟಾಗಿದ್ದರು. ನಾಯಕ ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ಸ್ಯಾಮ್ ಬಿಲಿಂಗ್ಸ್, ನಿತೀಶ್ ರಾಣಾ ಮತ್ತು ಆ್ಯಂಡ್ರೆ ರಸೆಲ್ ಕೂಡ ಬೇಗನೇ ಔಟಾದರು. ಆದರೆ ವೆಂಕಟೇಶ್ ಅಯ್ಯರ್ ಕ್ರೀಸ್‌ನಲ್ಲಿ ಉಳಿದು ಇನಿಂಗ್ಸ್‌ಗೆ ಬಲ ತುಂಬಿದರು. 101 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ವೆಂಕಟೇಶ್ ಜೊತೆಗೂಡಿದ ಪ್ಯಾಟ್ ಕಮಿನ್ಸ್ 15 ಎಸೆತಗಳಲ್ಲಿ 56 ರನ್ ಗಳಿಸಿ ಸುಲಭ ಜಯಕ್ಕೆ ಕಾರಣರಾದರು. ಅವರ ಬ್ಯಾಟಿನಿಂದ 6 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳು ಸಿಡಿದವು.

ಮಿಂಚಿದ ಸೂರ್ಯಕುಮಾರ್

ಟಾಸ್ ಗೆದ್ದ ಕೋಲ್ಕತ್ತ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ನಾಯಕ ರೋಹಿತ್ ಶರ್ಮಾ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಕಂಡರು. ಆದರೆ ಸೂರ್ಯಕುಮಾರ್ ಯಾದವ್‌, ತಿಲಕ್ ವರ್ಮಾ ಮತ್ತು ಕೀರನ್ ಪೊಲಾರ್ಡ್ ತಂಡಕ್ಕೆ ಆಸರೆಯಾದರು.

ಇಶಾನ್ ಕಿಶನ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮೊದಲು ವಿಕೆಟ್ ಒಪ್ಪಿಸಿದರು. ಉಮೇಶ್ ಯಾದವ್ ಹಾಕಿದ ಮೊದಲ ಓವರ್‌ನಲ್ಲಿ ಕೇವಲ ಒಂದು ರನ್ ಮಾತ್ರ ಗಳಿಸಲು ಅವರಿಗೆ ಸಾಧ್ಯವಾಯಿತು. ಉಮೇಶ್‌ ಯಾದವ್ ಹಾಕಿದ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಶಾರ್ಟ್‌ ಎಸೆತವನ್ನು ಪುಲ್ ಮಾಡಲು ಪ್ರಯತ್ನಿಸಿದ ರೋಹಿತ್ ಅವರ ಬ್ಯಾಟಿನ ಅಂಚಿಗೆ ಸೋಕಿದ ಚೆಂಡು ಫೈನ್ ಲೆಗ್‌ನತ್ತ ಚಿಮ್ಮಿತು. ವಿಕೆಟ್ ಕೀಪರ್ ಸ್ಯಾಮ್ ಬಿಲಿಂಗ್ಸ್ ಸುಲಭ ಕ್ಯಾಚ್ ಪಡೆದರು.

ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿ ಇನಿಂಗ್ಸ್‌ನ ಮೊದಲ ಬೌಂಡರಿ ಮೂಡಿಬಂತು. ನಂತರ ಇಶಾನ್ ಮತ್ತು ಡಿವಾಲ್ಡ್ ಬ್ರೆವಿಸ್ ನಿಧಾನಕ್ಕೆ ರನ್ ಗತಿ ಏರಿಸಿದರು. ಅರನೇ ಓವರ್‌ನಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಗಳಿಸುವಲ್ಲಿ ಬ್ಯಾಟರ್‌ಗಳು ಯಶಸ್ವಿಯಾದರು. ಸ್ಪಿನ್ನರ್‌ಗಳಾದ ಸುನಿಲ್ ನಾರಾಯಣ್ ಮತ್ತು ವರುಣ್ ಚಕ್ರವರ್ತಿ ಅವರನ್ನು ದಾಳಿಗೆ ಇಳಿಸಿದ ಕೋಲ್ಕತ್ತ ನಾಯಕ ಶ್ರೇಯಸ್ ಅಯ್ಯರ್ ರನ್‌ ಗಳಿಕೆಗೆ ನಿಯಂತ್ರಣ ಹೇರಿದರು.

ವರುಣ್ ಎಸೆತದಲ್ಲಿ ಮಿಂಚಿನ ಸ್ಟಂಪಿಂಗ್ ಮಾಡಿದ ಬಿಲಿಂಗ್ಸ್, ಬ್ರೆವಿಸ್‌ ಅವರನ್ನು ವಾಪಸ್ ಕಳುಹಿಸಿದರು. 11ನೇ ಓವರ್‌ ಮುಕ್ತಾಯಗೊಂಡಾಗ 55 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಸೂರ್ಯಕುಮಾರ್ ಯಾದವ್ ಆಸರೆಯಾದರು. 13ನೇ ಓವರ್‌ನ ಕೊನೆಯ ಎರಡು ಎಸೆತಗಳನ್ನು ಕ್ರಮವಾಗಿ ಬೌಂಡರಿ ಮತ್ತು ಸಿಕ್ಸರ್‌ಗೆ ಅಟ್ಟಿದ ಅವರು ಮುಂದಿನ ಓವರ್‌ನಲ್ಲೂಬೌಂಡರಿ ಗಳಿಸಿದರು. ತಿಲಕ್ ವರ್ಮಾ ಅವರಿಂದ ಸೂರ್ಯಕುಮಾರ್‌ಗೆ ಉತ್ತಮ ಬೆಂಬಲ ಲಭಿಸಿತು. ಇಬ್ಬರೂ 83 ರನ್‌ಗಳ ಜೊತೆಯಾಟದ ಮೂಲಕ ಭರವಸೆ ಮೂಡಿಸಿದರು.

ಕೀರನ್ ಪೊಲಾರ್ಡ್ ಬೌಂಡರಿ ಭರ್ಜರಿ ಸಿಕ್ಸರ್‌ಗಳ ಮೂಲಕ ಮಿಂಚಿದರು. ಕಮಿನ್ಸ್ ಹಾಕಿದ ಕೊನೆಯ ಓವರ್‌ನಲ್ಲಿ ಸಿಡಿಸಿದ ಮೂರು ಸಿಕ್ಸರ್‌ ಒಳಗೊಂಡಂತೆ 5 ಎಸೆತಗಳಲ್ಲಿ 22 ರನ್ ಗಳಿಸಿದರು. ಕೊನೆಯ ಎರಡು ಎಸೆತಗಳಲ್ಲಿ ಗಳಿಸಿದ ಎರಡು ಸಿಕ್ಸರ್‌ಗಳೊಂದಿಗೆ ತಂಡದ ಮೊತ್ತ 160 ರನ್ ದಾಟಿತು.

ಜಂಟಿ ವೇಗದ ಅರ್ಧಶತಕ

ಕ್ವಾರಂಟೈನ್ ಮುಗಿಸಿದ ನಂತರ ಮೊದಲ ಪಂದ್ಯ ಆಡಿದ ಪ್ಯಾಟ್ ಕಮಿನ್ಸ್ ಅವರು ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಗಳಿಸಿದ ಜಂಟಿ ದಾಖಲೆ ಮಾಡಿದರು. 14 ಎಸೆತಗಳಲ್ಲಿ 50 ರನ್ ಪೂರ್ಣಗೊಳಿಸಿದರು. 2018ರಲ್ಲಿ ಕೆ.ಎಲ್‌.ರಾಹುಲ್ ಪಂಜಾಬ್ ಕಿಂಗ್ಸ್‌ ತಂಡದ ಪರ 14 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಗೆಲುವಿನ ಸಿಕ್ಸರ್‌ ಸೇರಿದಂತೆ 6 ಸಿಕ್ಸರ್‌ಗಳು ಅವರ ಬ್ಯಾಟಿನಿಂದ ಸಿಡಿದಿದ್ದವು.

ತಂಡಗಳು

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ತಿಲಕ್ ವರ್ಮಾ, ಅನ್ಮೋಲ್‌ಪ್ರೀತ್ ಸಿಂಗ್, ಕೀರನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ಡ್ಯಾನಿಲ್ ಸ್ಯಾಮ್ಸ್, ಮುರುಗನ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ಟೈಮಲ್ ಮಿಲ್ಸ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಅರ್ಜುನ್ ತೆಂಡೂಲ್ಕರ್, ಆರ್ಯನ್ ಜುಯಾಲ್, ಸಂಜಯ್ ಯಾದವ್.

ಕೋಲ್ಕತ್ತ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಆ್ಯಂಡ್ರೆ ರಸೆಲ್, ಸುನಿಲ್ ನಾರಾಯಣ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT