ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 | ಧೋನಿ ನಾಯಕತ್ವ ಪರ್ವಕ್ಕೆ ತೆರೆ: ಜಡೇಜಗೆ ಆರಂಭ

Last Updated 24 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು:ಮಹೇಂದ್ರಸಿಂಗ್ ಧೋನಿಯ ನಾಯಕತ್ವದ ಪರ್ವಕ್ಕೆ ಈಗ ಪೂರ್ಣವಿರಾಮ ಬಿದ್ದಿದೆ. ಕಳೆದ ಒಂದೂವರೆ ದಶಕದಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಜ್ಜೆಗುರುತು ಮೂಡಿಸಿರುವ ರವೀಂದ್ರ ಜಡೇಜ ನಾಯಕತ್ವದ ಕಾಲ ಈಗ ಆರಂಭವಾಗಿದೆ.

ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಧೋನಿ ಬಿಟ್ಟಿದ್ದು ಒಂದು ಅಚ್ಚರಿಯಾದರೆ, ಜಡೇಜ ಅವರನ್ನು ನಾಯಕತ್ವದ ಪಟ್ಟಕ್ಕೇರಿಸಿದ್ದು ಅನಿರೀಕ್ಷಿತ. ಏಕೆಂದರೆ, ಸುಮಾರು ಒಂದೂವರೆ ದಶಕದಿಂದ ಭಾರತ ತಂಡವನ್ನು ಎಲ್ಲ ಮಾದರಿಗಳಲ್ಲಿಯೂ ಪ್ರತಿನಿಧಿಸುತ್ತಿರುವ ಜಡೇಜ ಹೆಸರು ಯಾವತ್ತೂ ನಾಯಕತ್ವದ ರೇಸ್‌ನಲ್ಲಿ ಕೇಳಿಬಂದಿರಲಿಲ್ಲ. ಇತ್ತೀಚೆಗೆ ವಿರಾಟ್ ಬದಲಿಗೆ ನಾಯಕತ್ವದ ಹೊಣೆ ಯಾರಿಗೆಂಬ ಪ್ರಶ್ನೆ ಬಂದಾಗ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಅವರ ಹೆಸರುಗಳು ಕೇಳಿಬಂದಿದ್ದವು.

ಇದೇ ಮೊದಲ ಸಲ ಜಡೇಜ ನಾಯಕತ್ವದ ಹೊಣೆಯನ್ನು ನಿಭಾಯಿಸಲಿದ್ದಾರೆ. ಅದರಲ್ಲೂ ಧೋನಿಯ ಜಾಗವನ್ನು ತುಂಬುವ ಸವಾಲು ಅವರ ಮುಂದಿದೆ. ಆದರೆ, ಮಹಿ ತಂಡದಲ್ಲಿ ಆಟಗಾರನಾಗಿ ಮುಂದುವರಿಯುತ್ತಿರುವುದು ಜಡೇಜಗೆ ಅನುಕೂಲವಾಗಬಹುದು. ಧೋನಿ ಟೆಸ್ಟ್‌ಗೆ ವಿದಾಯ ಹೇಳಿದ ಮೂರು ವರ್ಷಗಳ ನಂತರ ಸೀಮಿತ ಓವರ್‌ಗಳ ತಂಡದ ಗದ್ದುಗೆಯನ್ನೂ ಬಿಟ್ಟುಕೊಟ್ಟಿದ್ದರು. ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ್ದ ಅವರು ತಂಡಕ್ಕೆ ತಮ್ಮ ಅನುಭವವನ್ನು ಧಾರೆಯೆರೆದಿದ್ದರು. ಯುಡಿಆರ್‌ಎಸ್ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಮನವಿಗಳನ್ನು ಸಲ್ಲಿಸಿ ಯಶಸ್ವಿ ಫಲಿತಾಂಶ ಪಡೆಯುವುದರಲ್ಲಿ ಸಿದ್ಧಹಸ್ತರಾಗಿದ್ದರು ಧೋನಿ. ಇದು ಕೊಹ್ಲಿಗೆ ವರದಾನವಾಯಿತು.

ಅದೇ ರೀತಿಯ ಅವಕಾಶ ಜಡೇಜಗೂ ಲಭಿಸಬಹುದು. 2014ರಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಚೆನ್ನೈ ತಂಡವು ಎರಡು ವರ್ಷಗಳ ನಿಷೇಧಕ್ಕೊಳಗಾಗಿತ್ತು. ಮತ್ತೆ ಮರಳಿದ ನಂತರ ತಂಡವನ್ನು ಧೋನಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದರು. ದೊಡ್ಡ ಬ್ರ್ಯಾಂಡ್ ಮೌಲ್ಯ ಮತ್ತು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸೆಳೆಯುವಲ್ಲಿ ಧೋನಿ ಸಫಲರಾದರು. ಅವರ ನಿರ್ಧಾರ ತೆಗೆದುಕೊಳ್ಳುವ ಗುಣ, ಶಾಂತಚಿತ್ತತೆ ಮತ್ತು ಯೋಜನೆಗಳನ್ನು ರೂಪಿಸುವ ಕಲೆಯನ್ನೂ ಕರಗತ ಮಾಡಿಕೊಳ್ಳುವ ಸವಾಲು ಕೂಡ ಜಡೇಜ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT