ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 MI vs KKR: ಮುಂಬೈ ಮಣಿಸಿದ ಕೆಕೆಆರ್ ಪ್ಲೇ-ಆಫ್ ಕನಸು ಜೀವಂತ

ಅಕ್ಷರ ಗಾತ್ರ

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ 52 ರನ್ ಅಂತರದ ಗೆಲುವು ದಾಖಲಿಸಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಪ್ಲೇ-ಆಫ್ ಪ್ರವೇಶದ ಕನಸು ಜೀವಂತವಾಗಿರಿಸಿದೆ.

ಇದರೊಂದಿಗೆ ಮುಂಬೈ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಚೊಚ್ಚಲ ಐದು ವಿಕೆಟ್ ಸಾಧನೆಯು ವ್ಯರ್ಥವೆನಿಸಿದೆ.

ಸೋಮವಾರ ಮುಂಬೈನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಒಂಬತ್ತು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.

ಬಳಿಕ ಪ್ಯಾಟ್ ಕಮಿನ್ಸ್ (22ಕ್ಕೆ 3) ಸೇರಿದಂತೆ ಕೋಲ್ಕತ್ತ ಬೌಲರ್‌ಗಳ ದಾಳಿಗೆ ನಲುಗಿದ ಮುಂಬೈ, ಇಶಾನ್ ಕಿಶನ್ ಅರ್ಧಶತಕದ (51) ಹೊರತಾಗಿಯೂ 17.3 ಓವರ್‌ಗಳಲ್ಲಿ 113 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಇದರೊಂದಿಗೆ ಆಡಿರುವ 12ನೇ ಪಂದ್ಯದಲ್ಲಿ ಐದನೇ ಗೆಲುವು ದಾಖಲಿಸಿರುವ ಕೋಲ್ಕತ್ತ, ಒಟ್ಟು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತಲುಪಿದೆ. ಅತ್ತ ಕೊನೆಯ ಸ್ಥಾನದಲ್ಲಿರುವ ಮುಂಬೈ 11 ಪಂದ್ಯಗಳಲ್ಲಿ ಒಂಬತ್ತನೇ ಸೋಲಿಗೆ ಶರಣಾಗಿದೆ.

ಸವಾಲಿನ ಮೊತ್ತ ಬೆನ್ನಟ್ಟಿದ ಮುಂಬೈ ಆರಂಭ ಉತ್ತಮವಾಗಿರಲಿಲ್ಲ. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ (2) ವಿಕೆಟ್ ನಷ್ಟವಾಯಿತು.

ಯುವ ಬ್ಯಾಟರ್ ತಿಲಕ್ ವರ್ಮಾ (6) ಅವರಿಗೂ ಪರಿಣಾಮಕಾರಿ ಎನಿಸಿಕೊಳ್ಳಲು ಸಾಧ್ಯವಾಗಿಲ್ಲ. ಅತ್ತ ಇಶಾನ್ ಕಿಶನ್ ದಿಟ್ಟ ಹೋರಾಟ ತೋರಿದರು.

ಗಾಯಾಳು ಸೂರ್ಯಕುಮಾರ್ ಯಾದವ್ ಸ್ಥಾನದಲ್ಲಿ ಕಾಣಿಸಿಕೊಂಡ ರಮನ್‌ದೀಪ್ ಸಿಂಗ್ (12) ಹಾಗೂ ಟಿಮ್ ಡೇವಿಡ್ (13) ಸಹ ವೈಫಲ್ಯ ಅನುಭವಿಸಿದರು.

ಇನ್ನೊಂದೆಡೆ ಅರ್ಧಶತಕ ಬೆನ್ನಲ್ಲೇ ಇಶಾನ್ ಕಿಶನ್ ಔಟ್ ಆದರು. 43 ಎಸೆತಗಳನ್ನು ಎದುರಿಸಿದ ಕಿಶನ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.

ಡ್ಯಾನಿಯಲ್ ಸ್ಯಾಮ್ಸ್ (1) ಹಾಗೂ ಮುರುಗನ್ ಅಶ್ವಿನ್ (0) ಪೆವಿಲಿಯನ್‌ ಸೇರುವುದರೊಂದಿಗೆ ಮುಂಬೈ 102ಕ್ಕೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

15ನೇ ಓವರ್‌ನಲ್ಲಿ ಮೂರು ವಿಕೆಟ್ ಗಳಿಸಿದ ಕಮಿನ್ಸ್, ಮುಂಬೈ ಓಟಕ್ಕೆ ಕಡಿವಾಣ ಹಾಕಿದರು.

ಕೊನೆಯ ಐದು ಓವರ್‌ಗಳಲ್ಲಿ ಮುಂಬೈ ಗೆಲುವಿಗೆ 64 ರನ್ ಬೇಕಾಗಿತ್ತು. ಆದರೆ ಕೀರನ್ ಪೊಲಾರ್ಡ್ (15) ಅವರಿಗೂ ಹೆಚ್ಚೇನು ಮಾಡಲಾಗಲಿಲ್ಲ. ಅಂತಿಮವಾಗಿ 113 ರನ್ನಿಗೆ ಆಲೌಟ್ ಆಯಿತು.

ಕೆಕೆಆರ್ ಪರ ಪ್ಯಾಟ್ ಕಮಿನ್ಸ್ ಮೂರು ವಿಕೆಟ್ ಕಿತ್ತು ಮಿಂಚಿದರು. ಆ್ಯಂಡ್ರೆ ರಸೆಲ್ ಎರಡು ಹಾಗೂ ಟಿಮ್ ಸೌಥಿ ಒಂದು ವಿಕೆಟ್ ಗಳಿಸಿ ಪ್ರಭಾವಿ ಎನಿಸಿದರು.

ಬೂಮ್ರಾ ಚೊಚ್ಚಲ ಐದು ವಿಕೆಟ್; ಕೋಲ್ಕತ್ತ 165/9

ಈ ಮೊದಲು ಜಸ್‌ಪ್ರೀತ್ ಬೂಮ್ರಾ ಚೊಚ್ಚಲ ಐದು ವಿಕೆಟ್ (10ಕ್ಕೆ 5) ಸಾಧನೆ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು 165 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು.

ಕೋಲ್ಕತ್ತ ಪರ ನಿತೀಶ್ ರಾಣಾ ಹಾಗೂ ವೆಂಕಟೇಶ್ ಅಯ್ಯರ್ ತಲಾ 43 ರನ್ ಗಳಿಸಿದರು. ಈ ಮೂಲಕ ಒಂಬತ್ತು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಈ ಪಂದ್ಯಕ್ಕಾಗಿ ಕೆಕೆಆರ್ ತಂಡದಲ್ಲಿ ಐದು ಬದಲಾವಣೆಗಳನ್ನು ತರಲಾಗಿತ್ತು. ಮಗದೊಮ್ಮೆ ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಹಾಗೂ ಅಜಿಂಕ್ಯ ರಹಾನೆ (25) ಮೊದಲ ವಿಕೆಟ್‌ಗೆ 5.4 ಓವರ್‌ಗಳಲ್ಲಿ 60 ರನ್ ಪೇರಿಸಿದರು.

ಬಳಿಕ ಕ್ರೀಸಿಗಿಳಿಸಿದ ನಿತೀಶ್ ರಾಣಾ ಅಬ್ಬರಿಸಿದರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ವೆಂಕಟೇಶ್ ವಿಕೆಟ್ ನಷ್ಟವಾಯಿತು. 24 ಎಸೆತಗಳನ್ನು ಎದುರಿಸಿದ ವೆಂಕಟೇಶ್ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 43 ರನ್ ಗಳಿಸಿದರು.

ನಾಯಕ ಶ್ರೇಯಸ್ ಅಯ್ಯರ್ (6) ಹಾಗೂ ಆ್ಯಂಡ್ರೆ ರಸೆಲ್ (9) ವೈಫಲ್ಯ ಅನುಭವಿಸಿರುವುದು ಕೆಕೆಆರ್‌ಗೆ ಹಿನ್ನಡೆಗೆ ಕಾರಣವಾಯಿತು.

ಬೂಮ್ರಾ ಮಾರಕ ದಾಳಿ...
15ನೇ ಓವರ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಡಬಲ್ ಆಘಾತ ನೀಡಿದರು. ರಸೆಲ್ ಜೊತೆಗೆ ನಿತೀಶ್ ರಾಣಾ ಅವರನ್ನು ಹೊರದಬ್ಬಿದರು. ಪರಿಣಾಮ 14.5 ಓವರ್‌ಗಳಲ್ಲಿ 139 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿತು. 26 ಎಸೆತಗಳನ್ನು ಎದುರಿಸಿದ ರಾಣಾ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 43 ರನ್ ಗಳಿಸಿದರು.

18ನೇ ಓವರ್‌ನಲ್ಲಿ ಮತ್ತೆ ಮೂರು ವಿಕೆಟ್ ಗಳಿಸಿದ ಬೂಮ್ರಾ ಬಲವಾದ ಪೆಟ್ಟು ನೀಡಿದರು. ಶೆಲ್ಡನ್ ಜ್ಯಾಕ್ಸನ್ (5), ಪ್ಯಾಟ್ ಕಮಿನ್ಸ್ (0) ಹಾಗೂ ಸುನಿಲ್ ನಾರಾಯಣ್ (0) ನಿರಾಸೆ ಮೂಡಿಸಿದರು.

ಈ ಮೂಲಕ ಬೂಮ್ರಾ 10 ರನ್ ನೀಡಿ ಐಪಿಎಲ್‌ನಲ್ಲಿಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದರು. ಕೊನೆಯ ಹಂತದಲ್ಲಿ ರಿಂಕು ಸಿಂಗ್ 23* ರನ್‌ಗಳ ಕಾಣಿಕೆ ನೀಡಿದರು.

ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್...

ಈ ಮೊದಲು ಟಾಸ್ ಗೆದ್ದಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿರುವ ತಂಡಗಳ ನಡುವಣ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ.

ಈಗಾಗಲೇ ಪ್ಲೇ-ಆಫ್ ಹಾದಿಯಿಂದ ನಿರ್ಗಮಿಸಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಪಾಲಿಗೆ ಈ ಪಂದ್ಯವು ಪ್ರತಿಷ್ಠೆಗಷ್ಟೇ ಸೀಮಿತಗೊಂಡಿದೆ.

ಅತ್ತ ಈ ಪಂದ್ಯದಲ್ಲಿ ಸೋಲು ಅನುಭವಿಸಿದರೆ ಕೆಕೆಆರ್ ಕನಸು ಸಹ ಭಗ್ನಗೊಳ್ಳಲಿದೆ. ಹಾಗಾಗಿ ಕೋಲ್ಕತ್ತ ಪಾಲಿಗಿದು ಮಹತ್ವದ ಪಂದ್ಯವೆನಿಸಿದೆ.

11 ಪಂದ್ಯಗಳಲ್ಲಿ ನಾಲ್ಕು ಗೆಲುವು ದಾಖಲಿಸಿರುವ ಕೆಕೆಆರ್, ಒಟ್ಟು ಎಂಟುಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಅತ್ತ ಮುಂಬೈ 10 ಪಂದ್ಯಗಳಲ್ಲಿ ಎರಡು ಗೆಲುವು ಮಾತ್ರ ಗಳಿಸಿದ್ದು, ನಾಲ್ಕು ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಹನ್ನೊಂದರ ಬಳಗ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT