ಗುರುವಾರ , ಮೇ 19, 2022
21 °C

IPL 2022 MI vs PBKS: 5 ಬಾರಿಯ ಚಾಂಪಿಯನ್ ಮುಂಬೈಗೆ ಸತತ 5ನೇ ಸೋಲು!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 12 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

ಈ ಮೂಲಕ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಸತತ ಐದನೇ ಸೋಲಿನ ಮುಖಭಂಗಕ್ಕೆ ಒಳಗಾಗಿದೆ. ಇನ್ನೊಂದೆಡೆ ಮಯಂಕ್ ಪಡೆ, ಆಡಿರುವ ಐದು ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿದೆ. 

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್, ನಾಯಕ ಮಯಂಕ್ ಅಗರವಾಲ್ (52) ಹಾಗೂ ಅನುಭವಿ ಬ್ಯಾಟರ್ ಶಿಖರ್ ಧವನ್ (70) ಆಕರ್ಷಕ ಅರ್ಧಶತಕಗಳ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 198 ರನ್ ಪೇರಿಸಿತ್ತು. 

ಬಳಿಕ ಗುರಿ ಬೆನ್ನತ್ತಿದ ಮುಂಬೈ ಒಂಬತ್ತು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಬೃಹತ್ ಮೊತ್ತ ಬೆನ್ನತ್ತಿದ ಮುಂಬೈಗೆ ನಾಯಕ ರೋಹಿತ್ ಶರ್ಮಾ (28 ರನ್, 17 ಎಸೆತ, 3 ಬೌಂಡರಿ, 2 ಸಿಕ್ಸರ್) ಉತ್ತಮ ಆರಂಭವೊದಗಿಸಿದರು. ಆದರೆ ಇಶಾನ್ ಕಿಶನ್ (3) ನಿರಾಸೆ ಮೂಡಿಸಿದರು. 

ಈ ಹಂತದಲ್ಲಿ ಜೊತೆಗೂಡಿದ ಯುವ ಆಟಗಾರರಾದ ಡೆವಾಲ್ಡ್ ಬ್ರೆವಿಸ್ ಹಾಗೂ ತಿಲಕ್ ವರ್ಮಾ ದಿಟ್ಟ ಉತ್ತರವನ್ನು ನೀಡಿದರು. ಪಂಜಾಬ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೂರನೇ ವಿಕೆಟ್‌ಗೆ 84 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. 

ಕೇವಲ 29 ಎಸೆತಗಳನ್ನು ಎದುರಿಸಿದ ಬ್ರೆವಿಸ್, ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ತಿಲಕ್, 20 ಎಸೆತಗಳಲ್ಲಿ 36 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿದರು. 

ಈ ನಡುವೆ ಕೀರನ್ ಪೊಲಾರ್ಡ್ (10) ರನೌಟ್ ಆದರೂ ವಿಕೆಟ್‌ನ ಇನ್ನೊಂದು ತುದಿಯಿಂದ ಬಿರುಸಿನ ಆಟವಾಡಿದ ಸೂರ್ಯಕುಮಾರ್ ಯಾದವ್ ಆಸರೆಯಾದರು. 

ಆದರೆ 19ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ ಮುಂಬೈ ಗೆಲುವಿನ ಆಸೆ ಕಮರಿತು. 30 ಎಸೆತಗಳನ್ನು ಎದುರಿಸಿದ ಸೂರ್ಯ 43 ರನ್ (1 ಬೌಂಡರಿ, 4 ಸಿಕ್ಸರ್) ಗಳಿಸಿದರು. 
  
ಪಂಜಾಬ್ ಪರ ಒಡೀನ್ ಸ್ಮಿತ್ ನಾಲ್ಕು ಹಾಗೂ ಕಗಿಸೊ ರಬಾಡ ಎರಡು ವಿಕೆಟ್ ಕಬಳಿಸಿದರು. 

ಮಯಂಕ್, ಧವನ್ ಆಕರ್ಷಕ ಅರ್ಧಶತಕ...
ಪಂಜಾಬ್ ತಂಡಕ್ಕೆ ಮಯಂಕ್ ಹಾಗೂ ಧವನ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 57 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ಕಟ್ಟಿದರು. 

ಫಾರ್ಮ್‌ಗೆ ಮರಳಿದ ಮಯಂಕ್ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಆದರೆ ಅರ್ಧಶತಕದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. 32 ಎಸೆತಗಳನ್ನು ಎದುರಿಸಿದ ಮಯಂಕ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು. 

ಈ ನಡುವೆ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೆಸ್ಟೊ (12) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (2) ವಿಕೆಟ್ ನಷ್ಟವಾಯಿತು. 

ಅತ್ತ ಕಲಾತ್ಮಕ ಇನ್ನಿಂಗ್ಸ್ ಕಟ್ಟಿದ ಧವನ್ ಐಪಿಎಲ್‌ನಲ್ಲಿ 45ನೇ ಅರ್ಧಶತಕ ಗಳಿಸಿದರು. ಆದರೆ ಕೊನೆಯ ಹಂತದಲ್ಲಿ ರನ್ ಏರಿಸುವ ಭರದಲ್ಲಿ ವಿಕೆಟ್ ಒಪ್ಪಿಸಿದರು. 50 ಎಸೆತಗಳನ್ನು ಎದುರಿಸಿದ ಧವನ್ 70 ರನ್ (5 ಬೌಂಡರಿ, 3 ಸಿಕ್ಸರ್) ಗಳಿಸಿದರು. 

ಇನ್ನಿಂಗ್ಸ್‌ನ ಕೊನೆಯಲ್ಲಿ ಐದನೇ ವಿಕೆಟ್‌ಗೆ ಕೇವಲ 16 ಎಸೆತಗಳಲ್ಲಿ 46 ರನ್‌ಗಳ ಜೊತೆಯಾಟ ಕಟ್ಟಿದ ಜಿತೇಶ್ ಶರ್ಮಾ (ಅಜೇಯ 30 ರನ್, 15 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಶಾರೂಕ್ ಖಾನ್ (15 ರನ್, 6 ಎಸೆತ, 2 ಸಿಕ್ಸರ್) ಪಂಜಾಬ್ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. 

ಮುಂಬೈ ಫೀಲ್ಡಿಂಗ್...
ಈ ಮೊದಲು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. 

ಐದು ಬಾರಿಯ ಚಾಂಪಿಯನ್ ಮುಂಬೈ, ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಜಯದ ಲಯಕ್ಕೆ ಮರಳಬೇಕಾದರೆ ರೋಹಿತ್ ಬಳಗವು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. 

ಅತ್ತ ಮಯಂಕ್ ಅಗರವಾಲ್ ನೇತೃತ್ವದಲ್ಲಿ ಕಣಕ್ಕಿಳಿದಿರುವ ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿ ಇದುವರೆಗೆ ಮಿಶ್ರ ಫಲ ಕಂಡಿದೆ. ಎರಡು ಪಂದ್ಯಗಳಲ್ಲಿ ಗೆದ್ದಿರುವ ತಂಡ ಮತ್ತೆರಡು ಪಂದ್ಯಗಳಲ್ಲಿ ಸೋತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು