ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 PBKS vs CSK: ಗೆಲುವಿನ ಹಾದಿಗೆ ಮರಳಿದ ಪಂಜಾಬ್; ಚೆನ್ನೈಗೆ 6ನೇ ಸೋಲು

Last Updated 25 ಏಪ್ರಿಲ್ 2022, 18:20 IST
ಅಕ್ಷರ ಗಾತ್ರ

ಮುಂಬೈ: ಶಿಖರ್ ಧವನ್ ಅಜೇಯ ಅರ್ಧಶತಕ (88*) ಹಾಗೂ ಬೌಲರ್‌ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 11 ರನ್ ಅಂತರದ ಗೆಲುವು ದಾಖಲಿಸಿದೆ.

ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಶಿಖರ್ ಧವನ್ ಸಮಯೋಚಿತ ಅರ್ಧಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಚೆನ್ನೈ, ಅಂಬಟಿ ರಾಯುಡು (78) ದಿಟ್ಟ ಹೋರಾಟದ ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಇದರೊಂದಿಗೆ ಗೆಲುವಿನ ಹಾದಿಗೆ ಮರಳಿರುವ ಮಯಂಕ್ ಅಗರವಾಲ್ ಪಡೆ, ಎಂಟು ಪಂದ್ಯಗಳಲ್ಲಿ ನಾಲ್ಕನೇ ಗೆಲುವಿನೊಂದಿಗೆ ಎಂಟು ಅಂಕ ಸಂಪಾದಿಸಿ ಆರನೇ ಸ್ಥಾನಕ್ಕೇರಿದೆ. ಅತ್ತ ಚೆನ್ನೈ ಎಂಟು ಪಂದ್ಯಗಳಲ್ಲಿ ಆರನೇ ಸೋಲಿಗೆ ಶರಣಾಗಿದೆ.

ಸವಾಲಿನ ಮೊತ್ತ ಬೆನ್ನಟ್ಟಿದ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ತಂಡವು 40 ರನ್ ಗಳಿಸುವಷ್ಟರಲ್ಲಿ ರಾಬಿನ್ ಉತ್ತಪ್ಪ (1), ಮಿಚೆಲ್ ಸ್ಯಾಂಟ್ನರ್ (9), ಶಿವಂ ದುಬೆ (8) ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಪೈಕಿ 2016ರ ಬಳಿಕ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ರಿಷಿ ಧವನ್, ಫೇಸ್ ಶೀಲ್ಡ್ ಧರಿಸಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು. ಅಲ್ಲದೆ ದುಬೆ ವಿಕೆಟ್ ಕಬಳಿಸಿ ಮಿಂಚಿದರು. 2016ರಲ್ಲಿ ರಣಜಿ ಟ್ರೋಫಿ ವೇಳೆ ರಿಷಿ ಗಾಯಗೊಂಡಿದ್ದರು.

ಈ ಹಂತದಲ್ಲಿ ಜೊತೆಗೂಡಿದ ಋತುರಾಜ್ ಗಾಯಕವಾಡ್ ಹಾಗೂ ಅಂಬಟಿ ರಾಯುಡು 49 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಗಾಯಕವಾಡ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ರಾಯುಡು ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು.

ಗಾಯಕವಾಡ್ 30 ರನ್ ಗಳಿಸಿ ಔಟ್ ಆದರು. ಅತ್ತ ಆಕ್ರಮಣಕಾರಿ ಆಟ ಪ್ರದರ್ಶಿಸಿದ ರಾಯುಡು 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಅಂತಿಮ 5 ಓವರ್‌ಗಳಲ್ಲಿ ಸಿಎಸ್‌ಕೆ ಗೆಲುವಿಗೆ 70 ರನ್ ಅಗತ್ಯವಿತ್ತು. ಸಂದೀಪ್ ಶರ್ಮಾ ಎಸೆದ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸೇರಿದಂತೆ 23 ರನ್ ಬಾರಿಸಿದ ರಾಯುಡು ಅಬ್ಬರಿಸಿದರು.

ರಾಯುಡು ಹಾಗೂ ಜಡೇಜ ಐದನೇ ವಿಕೆಟ್‌ಗೆ 32 ಎಸೆತಗಳಲ್ಲಿ 64 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ 18ನೇ ಓವರ್‌ನಲ್ಲಿ ಔಟ್ ಆಗುವ ಮೂಲಕ ರಾಯುಡು ನಿರಾಸೆಗೊಳಗಾದರು. 39 ಎಸೆತಗಳನ್ನು ಎದುರಿಸಿದ ರಾಯುಡು ಏಳು ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ 78 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಕಗಿಸೊ ರಬಾಡ ಹಾಗೂ ಅರ್ಶದೀಪ್ ಸಿಂಗ್ ನಿಖರ ದಾಳಿ ಮಾಡುವ ಮೂಲಕ ಚೆನ್ನೈ ಗೆಲುವಿನ ಪ್ರಯತ್ನಕ್ಕೆ ತಡೆಯೊಡ್ಡಿದರು.

ಕೊನೆಯ ಓವರ್‌ನಲ್ಲಿ ಗೆಲುವಿಗೆ 27 ರನ್ ಬೇಕಾಗಿತ್ತು. ಆದರೆ ಈ ಬಾರಿ ಫಿನಿಶರ್ ಮಹೇಂದ್ರ ಸಿಂಗ್ ಧೋನಿಗೆ (12) ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮ ಓವರ್ ಎಸೆದ ರಿಷಿ ಧವನ್ ಮಗದೊಮ್ಮೆ ಪ್ರಭಾವಿ ಎನಿಸಿದರು.

ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ರವೀಂದ್ರ ಜಡೇಜ 21 ರನ್ ಗಳಿಸಿ ಔಟಾಗದೆ ಉಳಿದರು.

ಪಂಜಾಬ್ ಪರ ರಬಾಡ ಹಾಗೂ ರಿಷಿ ಧವನ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಅರ್ಶದೀಪ್ 23 ರನ್ ತೆತ್ತು ಒಂದು ವಿಕೆಟ್ ಗಳಿಸಿದರು.

200ನೇ ಐಪಿಎಲ್ ಪಂದ್ಯದಲ್ಲಿ ಧವನ್ ಫಿಫ್ಟಿ...

ಈ ಮೊದಲು 200ನೇ ಐಪಿಎಲ್ ಪಂದ್ಯ ಆಡುತ್ತಿರುವ ಧವನ್ ಅರ್ಧಶತಕದ (88*) ನೆರವಿನಿಂದ ಪಂಜಾಬ್ತಂಡವುನಾಲ್ಕು ವಿಕೆಟ್ ನಷ್ಟಕ್ಕೆ 187 ರನ್ ಪೇರಿಸಿತ್ತು.

ಇದನ್ನೂ ಓದಿ:

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ತಂಡಕ್ಕೆ ನಾಯಕ ಮಯಂಕ್ ಅಗರವಾಲ್ (18) ಹಾಗೂ ಅನುಭವಿ ಶಿಖರ್ ಧವನ್ ಎಚ್ಚರಿಕೆಯ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 37 ರನ್ ಪೇರಿಸಿದರು.

ಬಳಿಕ ಭಾನುಕ ರಾಜಪಕ್ಸ ಜೊತೆ ಸೇರಿದ ಧವನ್ ತಂಡವನ್ನು ಮುನ್ನಡೆಸಿದರು. ಈ ನಡುವೆ ಧವನ್, ಐಪಿಎಲ್‌ನಲ್ಲಿ 6,000 ಹಾಗೂ ಟಿ20 ಕ್ರಿಕೆಟ್‌ನಲ್ಲಿ 9,000 ರನ್‌ಗಳ ಸಾಧನೆ ಮಾಡಿದರು.

ಅಲ್ಲದೆ 37 ಎಸೆತಗಳಲ್ಲಿ ಐಪಿಎಲ್‌ನಲ್ಲಿ 46ನೇ ಅರ್ಧಶತಕ ಗಳಿಸಿದರು. ಚೆನ್ನೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಧವನ್-ಭಾನುಕ ಜೋಡಿ ದ್ವಿತೀಯ ವಿಕೆಟ್‌ಗೆ ಶತಕದ (110)ಜೊತೆಯಾಟದಲ್ಲಿ ಭಾಗಿಯಾದರು.

32 ಎಸೆತಗಳನ್ನು ಎದುರಿಸಿದ ರಾಜಪಕ್ಸ 42 ರನ್ (2 ಬೌಂಡರಿ, 2 ಸಿಕ್ಸರ್) ಗಳಿಸಿದರು.

ಬಳಿಕ ಕ್ರೀಸಿಗಿಳಿದ ಲಿಯಾಮ್ ಲಿವಿಂಗ್‌ಸ್ಟೋನ್, ಕೇವಲ 6 ಎಸೆತಗಳಲ್ಲಿ 19 ರನ್ ಗಳಿಸಿ ಅಬ್ಬರಿಸಿದರು.

ಅತ್ತ ಅಮೋಘ ಆಟ ಪ್ರದರ್ಶಿಸಿದ ಧವನ್ 88 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ಪಂಜಾಬ್ ನಾಲ್ಕು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. 59 ಎಸೆತಗಳನ್ನು ಎದುರಿಸಿದ ಧವನ್ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು.

ಚೆನ್ನೈ ಫೀಲ್ಡಿಂಗ್...
ಈ ಮೊದಲುಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರವೀಂದ್ರ ಜಡೇಜ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.


ಹನ್ನೊಂದರ ಬಳಗ:

ಮಹೇಂದ್ರಸಿಂಗ್ ಧೋನಿ ತಾವು ಈಗಲೂ ಫಿನಿಷರ್ ಎಂಬುದನ್ನು ಈಚೆಗೆ ಮುಂಬೈ ಇಂಡಿಯನ್ಸ್ ತಂಡದ ಎದುರಿನ ಪಂದ್ಯದಲ್ಲಿ ತೋರಿಸಿದ್ದಾರೆ. ಅಂದು ಅವರು ಆಡಿದ ಆಟವು ಚೆನ್ನೈ ಸೂಪರ್ ಕಿಂಗ್ಸ್‌ ತಂಡದೊಳಗೆ ಸಂಚಲನ ಮೂಡಿಸಿದೆ. ನಾಯಕ ರವೀಂದ್ರ ಜಡೇಜ ಆತ್ಮವಿಶ್ವಾಸವೂ ಇಮ್ಮಡಿಸಿದೆ.

ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಸೋತಿರುವ ಕಹಿಯನ್ನು ಮರೆತು ಪುಟಿದೇಳುವತ್ತ ಜಡೇಜ ಬಳಗ ಚಿತ್ತ ನೆಟ್ಟಿದೆ. ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ತಂಡವು ಮಯಂಕ್ ಅಗರವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಎದುರು ಕಣಕ್ಕಿಳಿಯಲಿದೆ. ಮೊದಲ ಸುತ್ತಿನಲ್ಲಿ ಅನುಭವಿಸಿದ ಸೋಲಿನ ಮುಯ್ಯಿ ತೀರಿಸಿಕೊಳ್ಳಲು ಚೆನ್ನೈ ಸಿದ್ಧವಾಗಿದೆ.

ಮಯಂಕ್ ಬಳಗವೂ ಇದುವರೆಗೆ ಏಳು ಪಂದ್ಯಗಳನ್ನು ಆಡಿದೆ. ಮೂರರಲ್ಲಿ ಗೆದ್ದು, ನಾಲ್ಕರಲ್ಲಿ ಸೋತಿದೆ. ಆದರೆ, ಕಳೆದೆರಡು ಪಂದ್ಯಗಳಲ್ಲಿ ಸತತ ಸೋಲಿನ ಕಹಿ ಅನುಭವಿಸಿದೆ. ಗೆಲುವಿನ ಹಾದಿಗೆ ಮರಳುವ ತವಕದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದಲ್ಲಿ ಪಂಜಾಬ್ ತಂಡವು ಕಳಪೆ ಬ್ಯಾಟಿಂಗ್‌ಗೆ ಬೆಲೆ ತೆರಬೇಕಾಯಿತು. ಶಿಖರ್ ಧವನ್, ಜಾನಿ ಬೆಸ್ಟೊ, ಲಿವಿಂಗ್‌ಸ್ಟೋನ್, ಶಾರುಕ್ ಖಾನ್ ಅವರಲ್ಲಿ ಒಬ್ಬರೂ ಮಿಂಚಲಿಲ್ಲ. ಇದರಿಂದಾಗಿ ಎದುರಾಳಿ ತಂಡಕ್ಕೆ ನೀಡಿದ ಸಾಧಾರಣ ಗುರಿಯನ್ನು ರಕ್ಷಿಸಿಕೊಳ್ಳುವ ಬೌಲರ್‌ಗಳ ಪ್ರಯತ್ನ ಫಲ ಕೊಡಲಿಲ್ಲ. ರಾಹುಲ್ ಚಾಹರ್ ಮತ್ತು ಕಗಿಸೊ ರಬಾಡ ಅವರ ಅನುಭವದ ಮೇಲೆಯೇ ತಂಡವು ಅವಲಂಬಿತವಾಗಿದೆ.

ಚೆನ್ನೈನ ಋತುರಾಜ್ ಗಾಯಕವಾಡ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮೋಯಿನ್ ಅಲಿ, ಧೋನಿ ಅವರ ಆಟಕ್ಕೆ ಕಡಿವಾಣ ಹಾಕುವ ಸವಾಲು ಇವರ ಮುಂದಿದೆ. ಚೆನ್ನೈನ ಮುಖೇಶ್ ಚೌಧರಿ, ಜಡೇಜ ಮತ್ತು ಬ್ರಾವೊ ಚೆನ್ನೈ ತಂಡದ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT