ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 RR vs LSG: ಲಖನೌ ವಿರುದ್ಧ ರಾಜಸ್ಥಾನ್‌ಗೆ ರೋಚಕ ಗೆಲುವು

Last Updated 10 ಏಪ್ರಿಲ್ 2022, 18:10 IST
ಅಕ್ಷರ ಗಾತ್ರ

ಮುಂಬೈ:ಶಿಮ್ರಾನ್ ಹೆಟ್ಮೆಯರ್ ಬಿರುಸಿನ ಅರ್ಧಶತಕ (59*) ಹಾಗೂ ಬೌಲರ್‌ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಭಾನುವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 3 ರನ್ ಅಂತರದ ರೋಚಕ ಜಯ ದಾಖಲಿಸಿದೆ.

33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಹೆಟ್ಮೆಯರ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಆರು ವಿಕೆಟ್ ನಷ್ಟಕ್ಕೆ 165 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.

ಬಳಿಕ ರಾಜಸ್ಥಾನ್ ಬೌಲರ್‌ಗಳ ದಾಳಿಗೆ ಸಿಲುಕಿದ ಲಖನೌ ಎಂಟು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ನಾಯಕ ಕೆ.ಎಲ್. ರಾಹುಲ್ (0), ಕೃಷ್ಣಪ್ಪ ಗೌತಮ್ (0), ಜೇಸನ್ ಹೋಲ್ಡರ್ (8) ಹಾಗೂ ಆಯುಷ್ ಬಡೋನಿ (5) ವೈಫಲ್ಯ ಅನುಭವಿಸಿದರು. ಕ್ವಿಂಟನ್ ಡಿ ಕಾಕ್ 39, ದೀಪಕ್ ಹೂಡಾ 25 ಹಾಗೂ ಕೃಣಾಲ್ ಪಾಂಡ್ಯ 22 ರನ್ ಗಳಿಸಿದರೂ ಪ್ರಭಾವಿ ಎನಿಸಿಕೊಳ್ಳಲಾಗಲಿಲ್ಲ.

ಕೊನೆಯ ಹಂತದಲ್ಲಿ ಮಾರ್ಕಸ್ ಸ್ಟೋಯ್ನಿಸ್ (38*) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ.

ರಾಜಸ್ಥಾನ್ ಪರ ಯಜುವೇಂದ್ರ ಚಾಹಲ್ ನಾಲ್ಕು, ಟ್ರೆಂಟ್ ಬೌಲ್ಟ್ ಎರಡು ಮತ್ತು ಪ್ರಸಿದ್ಧ ಕೃಷ್ಣ ಹಾಗೂ ಕುಲ್‌ದೀಪ್ ಸೆನ್ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು.

ಹೆಟ್ಮೆಯರ್ ಬಿರುಸಿನ ಅರ್ಧಶತಕ...

ಈ ಮೊದಲು 67 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ರಾಜಸ್ಥಾನ್ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಐದನೇ ವಿಕೆಟ್‌ಗೆ ಶಿಮ್ರಾನ್ ಹೆಟ್ಮೆಯರ್ ಹಾಗೂ ರವಿಚಂದ್ರನ್ ಅಶ್ವಿನ್ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಕೇವಲ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಹೆಟ್ಮೆಯರ್, ಲಖನೌ ಬೌಲರ್‌ಗಳನ್ನು ಕಾಡಿದರು. ಅಂತಿಮವಾಗಿ 36 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿ ಔಟಾಗದೆ ಉಳಿದರು.

ರವಿಚಂದ್ರನ್ ಅಶ್ವಿನ್ 28 ರನ್ ಗಳಿಸಿ ನಿವೃತ್ತಿ ಹೊಂದಿದರು. ದೇವದತ್ ಪಡಿಕ್ಕಲ್ 29, ಜೋಸ್ ಬಟ್ಲರ್ 13 ಹಾಗೂ ನಾಯಕ ಸಂಜು ಸ್ಯಾಮ್ಸನ್ 13 ರನ್ ಗಳಿಸಿ ಔಟ್ ಆದರು.

ಲಖನೌ ಪರ ಕನ್ನಡಿಗ ಕೆ. ಗೌತಮ್ ಹಾಗೂ ಜೇಸನ್ ಹೋಲ್ಡರ್ ತಲಾ ಎರಡು ಮತ್ತು ಆವೇಶ್ ಖಾನ್ ಒಂದು ವಿಕೆಟ್ ಕಬಳಿಸಿದರು.

ಲಖನೌ ಫೀಲ್ಡಿಂಗ್ ಆಯ್ಕೆ...
ಈ ಮೊದಲುಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್‌ ನಾಯಕ ಕೆ.ಎಲ್. ರಾಹುಲ್ ಮೊದಲು ಪೀಲ್ಡಿಂಗ್ ಆಯ್ದುಕೊಂಡರು.

ಸತತ ಮೂರು ಪಂದ್ಯಗಳಲ್ಲಿ ಜಯಗಳಿಸಿರುವ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್‌ ತಂಡಕ್ಕೆ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಬಳಗವು ಸವಾಲೊಡ್ಡಲು ಸಿದ್ಧವಾಗಿದೆ.

ಮೊದಲ ಐಪಿಎಲ್ ಆಡುತ್ತಿರುವ ಲಖನೌ ತಂಡದ ಪಯಣ ಇಲ್ಲಿಯವರೆಗೂ ಉತ್ತಮವಾಗಿದೆ. ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯಿಸಿ, ಒಂದರಲ್ಲಿ ಸೋತಿದೆ. ರಾಜಸ್ಥಾನ ತಂಡವು ಮೊದಲೆರಡು ಪಂದ್ಯಗಳಲ್ಲಿ ಅಮೋಘ ಜಯ ದಾಖಲಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಮುಗ್ಗರಿಸಿತು. ಇದೀಗ ಮತ್ತೆ ಗೆಲುವಿನ ಹಾದಿಗೆ ಮರಳುವ ಛಲದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT