ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 RCB vs SRH: ಡುಪ್ಲೆಸಿ ಫಿಫ್ಟಿ, ಹಸರಂಗ 5 ವಿಕೆಟ್; ಆರ್‌ಸಿಬಿಗೆ ಜಯ

ಅಕ್ಷರ ಗಾತ್ರ

ಮುಂಬೈ: ನಾಯಕ ಫಫ್ ಡುಪ್ಲೆಸಿ ಆಕರ್ಷಕ ಅರ್ಧಶತಕ (73*) ಹಾಗೂ ಸ್ಪಿನ್ನರ್ ವನಿಂದು ಹಸರಂಗ ಐದು ವಿಕೆಟ್ ಸಾಧನೆ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 67 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಪ್ಲೇ-ಆಫ್‌ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. 12 ಪಂದ್ಯಗಳಲ್ಲಿ ಏಳನೇ ಗೆಲುವು ದಾಖಲಿಸಿರುವ ಆರ್‌ಸಿಬಿ 14 ಅಂಕಗಳೊಂದಿಗೆ, ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ.

ಅತ್ತ ಹೈದರಾಬಾದ್ 11 ಪಂದ್ಯಗಳಲ್ಲಿ ಆರನೇ ಸೋಲಿಗೆ ಶರಣಾಗಿದೆ. ಈ ಮೂಲಕ ಪ್ಲೇ-ಆಫ್ ಪ್ರವೇಶ ಮತ್ತಷ್ಟು ಕಠಿಣವೆನಿಸಿದೆ.

ಭಾನುವಾರ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ನಾಯಕ ಡುಪ್ಲೆಸಿ ಹಾಗೂ ರಜತ್ ಪಾಟಿದಾರ್ (48) ಶತಕದ ಜೊತೆಯಾಟದ ಬಲದಿಂದ ಮೂರು ವಿಕೆಟ್ ನಷ್ಟಕ್ಕೆ 192 ರನ್ ಪೇರಿಸಿತ್ತು. ಕೊನೆಯ ಹಂತದಲ್ಲಿ ಕೇವಲ ಎಂಟು ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದ್ದ ಕಾರ್ತಿಕ್ ಅಬ್ಬರಿಸಿದ್ದರು.

ಬಳಿಕ ಗುರಿ ಬೆನ್ನಟ್ಟಿದ ಹೈದರಾಬಾದ್, ಹಸರಂಗ ಕೈಚಳಕಕ್ಕೆ ಸಿಲುಕಿ 19.2 ಓವರ್‌ಗಳಲ್ಲಿ 125 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ರಾಹುಲ್ ತ್ರಿಪಾಠಿ ಹೋರಾಟ ವ್ಯರ್ಥವೆನಿಸಿತು.

ಎಸ್‌ಆರ್‌ಎಚ್ ಆರಂಭಿಕರು ಖಾತೆ ತೆರೆಯುವಲ್ಲಿ ವಿಫಲರಾದರು. ನಾಯಕ ಕೇನ್ ವಿಲಿಯಮ್ಸನ್ ರನೌಟ್ ಆದರೆ ಅಭಿಷೇಕ್ ಶರ್ಮಾ ಅವರನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಕ್ಲೀನ್ ಬೌಲ್ಡ್ ಮಾಡಿದರು.

ಏಡನ್ ಮಾರ್ಕರಮ್ (21) ಹಾಗೂ ನಿಕೋಲಸ್ ಪೂರನ್ (19) ಉತ್ತಮ ಆರಂಭ ಪಡೆದರೂ ಅದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ.

ಇನ್ನೊಂದೆಡೆ ದಿಟ್ಟ ಹೋರಾಟ ನೀಡಿದ ತ್ರಿಪಾಠಿ ಬಿರುಸಿನ ಅರ್ಧಶತಕ ಗಳಿಸಿದರು. ಆದರೆ ವಿಕೆಟ್‌ನ ಇನ್ನೊಂದು ಬದಿಯಿಂದ ಸೂಕ್ತ ಬೆಂಬಲ ದೊರಕಲಿಲ್ಲ.

37 ಎಸೆತಗಳನ್ನು ಎದುರಿಸಿತ ತ್ರಿಪಾಠಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದರು. ಇನ್ನುಳಿದಂತೆ ಜಗದೀಶ ಸುಚಿತ್ (2), ಶಶಾಂಕ್ ಸಿಂಗ್ (8), ಕಾರ್ತಿಕ್ ತ್ಯಾಗಿ (0), ಉಮ್ರಾನ್ ಮಲಿಕ್ (0), ಫಜಲ್‌ಹಕ್ ಫಾರೂಕಿ (2) ಹಾಗೂ ಭುವನೇಶ್ವರ್ ಕುಮಾರ್ (8) ನಿರಾಸೆ ಮೂಡಿಸಿದರು.

ನಾಲ್ಕು ಓವರ್‌ಗಳಲ್ಲಿ ಒಂದು ಮೇಡನ್ ಸಹಿತ 18 ರನ್ ಮಾತ್ರ ನೀಡಿದ ಹಸರಂಗ, ಐಪಿಎಲ್‌ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದರು. ಜೋಶ್ ಹ್ಯಾಜಲ್‌ವುಡ್ ಎರಡು ವಿಕೆಟ್ ಕಿತ್ತು ಮಿಂಚಿದರು.

ಡುಪ್ಲೆಸಿ, ಪಾಟಿದಾರ್,ಕಾರ್ತಿಕ್ ಅಬ್ಬರ...

ಈ ಮೊದಲು ನಾಯಕ ಫಫ್ ಡುಪ್ಲೆಸಿ (73*) ಹಾಗೂ ರಜತ್ ಪಾಟಿದಾರ್ (48) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವುಮೂರು ವಿಕೆಟ್ ನಷ್ಟಕ್ಕೆ 192ರನ್ ಗಳಿಸಿತು.

ಕೊನೆಯ ಹಂತದಲ್ಲಿ ದಿನೇಶ್ ಕಾರ್ತಿಕ್ (ಅಜೇಯ 30) ಬಿರುಸಿನ ಆಟವಾಡುವ ಮೂಲಕ ಸವಾಲಿನ ಮೊತ್ತ ಪೇರಿಸಲು ನೆರವಾದರು.

ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ಆರ್‌ಸಿಬಿಗೆ ಆಘಾತ ಎದುರಾಗಿತ್ತು. ವಿರಾಟ್ ಅವರನ್ನು ಕರ್ನಾಟಕದ ಸ್ಪಿನ್ನರ್ ಜಗದೀಶ ಸುಚಿತ್ ಹೊರದಬ್ಬಿದರು.

ಈ ಹಂತದಲ್ಲಿ ಜೊತೆ ಸೇರಿದ ನಾಯಕ ಫಫ್ ಡುಪ್ಲೆಸಿ ಹಾಗೂ ರಜತ್ ಪಾಟಿದಾರ್ ಆಕ್ರಮಣಕಾರಿ ಆಟವಾಡಿದರು. ಇವರಿಬ್ಬರು ಹೈದರಾಬಾದ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

ನಾಯಕನ ಆಟವಾಡಿದ ಡುಪ್ಲೆಸಿ 34 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಲ್ಲದೆ ಪಾಟಿದಾರ್ ಎರಡನೇ ವಿಕೆಟ್‌ಗೆ 12.2 ಓವರ್‌ಗಳಲ್ಲಿ 105 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಪಾಟಿದಾರ್ ವಿಕೆಟ್ ನಷ್ಟವಾಯಿತು. ಕೇವಲ ಎರಡು ರನ್ ಅಂತರದಿಂದ ಅರ್ಧಶತಕದಿಂದ ವಂಚಿತರಾದರು. 38 ಎಸೆತಗಳಲ್ಲಿ 48 ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿದ ಪಾಟಿದಾರ್ ಅವರನ್ನು ಸುಚಿತ್ ಔಟ್ ಮಾಡಿದರು.

ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದ ಡುಪ್ಲೆಸಿ, ಆರ್‌ಸಿಬಿ ಸವಾಲಿನ ಮೊತ್ತ ಪೇರಿಸಲು ನೆರವಾದರು. 24 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 33 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿದರು.

ಕೊನೆಯ ಹಂತದಲ್ಲಿ ದಿನೇಶ್ ಕಾರ್ತಿಕ್ ಅಬ್ಬರಿಸಿದರು. ಈ ಮೂಲಕ ಆರ್‌ಸಿಬಿ ಮೂರು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಕೇವಲ 8 ಎಸೆತ ಎದುರಿಸಿದ ಕಾರ್ತಿಕ್ 30 ರನ್ ಗಳಿಸಿ (4 ಸಿಕ್ಸರ್, 1 ಬೌಂಡರಿ) ಔಟಾಗದೆ ಉಳಿದರು.

ಅತ್ತ ಕೊನೆಯವರೆಗೂ ಔಟಾಗದೆ ಉಳಿದ ಡುಪ್ಲೆಸಿ, 50 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದರು.

ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ...

ಈ ಮೊದಲು ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್ ಡುಪ್ಲೆಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಗೋ ಗ್ರೀನ್ ಅಭಿಯಾನ...
'ಗೋ ಗ್ರೀನ್' ಅಭಿಯಾನದ ಭಾಗವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಹಸಿರು ಪೋಷಾಕು ಧರಿಸಿ ಕಣಕ್ಕಿಳಿಯುತ್ತಿದೆ.

ಪರಿಸರ ಸಂರಕ್ಷಣೆ ಹಾಗೂ ಅದರ ಮಹತ್ವದ ಕುರಿತು ಸಂದೇಶ ನೀಡುವ ಸಲುವಾಗಿ ಆರ್‌ಸಿಬಿ ಗ್ರೋ ಗ್ರೀನ್ ಅಭಿಯಾನ ಹಮ್ಮಿಕೊಂಡಿದೆ.

ಮಹತ್ವದ ಪಂದ್ಯ...
ಪ್ಲೇ-ಆಫ್ ಹಾದಿಯಲ್ಲಿ ಇತ್ತಂಡಗಳ ಪಾಲಿಗೂ ಈ ಪಂದ್ಯ ಮಹತ್ವದೆನಿಸಿದೆ. ಅಲ್ಲದೆ ಮಗದೊಂದು ರೋಚಕ ಹಣಾಹಣಿ ನಿರೀಕ್ಷಿಸಲಾಗುತ್ತಿದೆ.

11 ಪಂದ್ಯಗಳಲ್ಲಿ ಆರು ಗೆಲುವು ಹಾಗೂ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಆರ್‌ಸಿಬಿ ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಅತ್ತ ಎಸ್‌ಆರ್‌ಎಚ್ 10 ಪಂದ್ಯಗಳಲ್ಲಿ ತಲಾ ಐದು ಗೆಲುವು ಹಾಗೂ ಸೋಲಿನೊಂದಿಗೆ 10 ಅಂಕ ಗಳಿಸಿದ್ದು, ಆರನೇ ಸ್ಥಾನದಲ್ಲಿದೆ.

ಹನ್ನೊಂದರ ಬಳಗ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT