ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023 LSG vs RCB| ಮುಯ್ಯಿ ತೀರಿಸಿಕೊಂಡ ಆರ್‌ಸಿಬಿ

Published 1 ಮೇ 2023, 18:21 IST
Last Updated 1 ಮೇ 2023, 18:21 IST
ಅಕ್ಷರ ಗಾತ್ರ

ಲಖನೌ: ಬೌಲರ್‌ಗಳು ಮೇಲುಗೈ ಸಾಧಿಸಿದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 18 ರನ್‌ಗಳಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡವನ್ನು ಮಣಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ ತನಗೆ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.

ಏಕನಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಎರಡೂ ತಂಡಗಳ ಬೌಲರ್‌ಗಳು ಮಿಂಚಿದರು. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ತಂಡವನ್ನು ಲಖನೌ ಸ್ಪಿನ್ನರ್‌ಗಳು 20 ಓವರುಗಳಲ್ಲಿ 9 ವಿಕೆಟ್‌ಗೆ 126 ರನ್‌ಗಳಿಗೆ ನಿಯಂತ್ರಿಸಿದರು.

ಆದರೆ ಫಫ್‌ ಡುಪ್ಲೆಸಿ ಬಳಗದ ಬೌಲರ್‌ಗಳೂ ಪರಿಣಮಕಾರಿ ದಾಳಿ ನಡೆಸಿ ಎದುರಾಳಿ ತಂಡವನ್ನು 108 ರನ್‌ಗಳಿಗೆ ಆಲೌಟ್‌ ಮಾಡಿತು. ಜೋಶ್ ಹ್ಯಾಜಲ್‌ವುಡ್‌ (15ಕ್ಕೆ2) ಮತ್ತು ಕರ್ಣ ಶರ್ಮಾ (20ಕ್ಕೆ 2) ಮಿಂಚಿದರು. ಆರ್‌ಸಿಬಿ ಪರ ಬೌಲ್‌ ಮಾಡಿದ ಏಳು ಮಂದಿಯಲ್ಲಿ ಆರು ಬೌಲರ್‌ಗಳೂ ವಿಕೆಟ್‌ ಪಡೆದರು.

ಸಾಧಾರಣ ಗುರಿ ಮುಂದಿದ್ದರೂ ಲಖನೌ ತಂಡ ಆರ್‌ಸಿಬಿಯ ಶಿಸ್ತಿನ ಬೌಲಿಂಗ್‌ ಮುಂದೆ ತಡಬಡಾಯಿಸಿತು. ಫೀಲ್ಡಿಂಗ್‌ ವೇಳೆ ಬಲತೊಡೆಯ ಸ್ನಾಯು ಸೆಳೆತದಿಂದ ಅಂಗಳದಿಂದ ನಿರ್ಗಮಿಸಿದ್ದ ಲಖನೌ ತಂಡದ ನಾಯಕ ಕೆ.ಎಲ್‌.ರಾಹುಲ್‌ ಇನಿಂಗ್ಸ್‌ ಆರಂಭಿಸಲಿಲ್ಲ. ಅವರು ಕೊನೆಯವರಾಗಿ ಕ್ರೀಸ್‌ಗೆ ಬಂದರು.

ಕೈಲ್ ಮೇಯರ್ಸ್‌ (0) ಎರಡನೇ ಎಸೆತದಲ್ಲಿ ಮೊಹಮ್ಮದ್‌ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಅವರ ಜತೆ ಇನಿಂಗ್ಸ್‌ ಆರಂಭಿಸಿದ್ದ ಆಯುಷ್‌ ಬಡೋಣಿ (4) ಕೂಡಾ ವಿಫಲರಾದರು. ಮಾರ್ಕಸ್‌ ಸ್ಟೊಯಿನಿಸ್‌ ಮತ್ತು ನಿಕೊಲಸ್‌ ಪೂರನ್‌ ಅವರ ಮಹತ್ವದ ವಿಕೆಟ್‌ ಪಡೆದ ಕರ್ಣ ಶರ್ಮಾ, ಲಖನೌ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು.

ಕನ್ನಡಿಗ ಕೆ.ಗೌತಮ್‌ (23 ರನ್‌, 13 ಎ.) ಅಲ್ಪ ಹೋರಾಟದ ಸೂಚನೆ ನೀಡಿದರೂ, ರನೌಟ್‌ ಆದರು. ಆ ಬಳಿಕ ಆತಿಥೇಯ ತಂಡ ಸೋಲಿನ ಹಾದಿ ಹಿಡಿಯಿತು.

ಉತ್ತಮ ಆರಂಭ: ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ‌ಉತ್ತಮ ಆರಂಭ ಮಾಡಿತ್ತು. ಆದರೆ ನಂತರ ಸ್ಪಿನ್ನರ್‌ಗಳ ಶಿಸ್ತುಬದ್ಧ ಬೌಲಿಂಗ್ ಎದುರು ಬ್ಯಾಟರ್‌ಗಳು ಪರದಾಡಿದರು. ಆರಂಭ ಆಟಗಾರ ಫಫ್‌ ಡುಪ್ಲೆಸಿ (44, 40ಎ,4x1, 6x1) ಬಿಟ್ಟರೆ ಉಳಿದವರಿಂದ ಅಂಥ ಕೊಡುಗೆ ಬರಲಿಲ್ಲ. ಅವರು ನಾಯಕ ವಿರಾಟ್‌ ಕೊಹ್ಲಿ (31, 30ಎ, 4x3) ಜೊತೆ 8.5 ಓವರುಗಳಲ್ಲಿ 62 ರನ್‌ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು.

ನಿಧಾನಗತಿಯ ಪಿಚ್‌ನಲ್ಲಿ ಹೊಡೆತಗಳಿಗೆ ಹೋಗುವುದು ಸುಲಭವಾಗಿರಲಿಲ್ಲ. ರವಿ ಬಿಷ್ಣೋಯಿ 9ನೇ ಓವರ್‌ನಲ್ಲಿ ಈ ಜೊತೆಯಾಟ ಮುರಿದರು. ಅವರ ‘ಗೂಗ್ಲಿ’ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ  ಮುನ್ನುಗ್ಗಿದ ಕೊಹ್ಲಿ ನೇರ ಗುರುತಿಸದೇ ಸ್ಟಂಪ್ಡ್ ಆದರು.

ಮಧ್ಯಮ ಕ್ರಮಾಂಕ ಎಂದಿನಂತೆ ಕೈಕೊಟ್ಟಿತು. ಅನುಜ್ ರಾವತ್ (9), ಆಫ್‌ ಸ್ಪಿನ್ನರ್‌ ಕೃಷ್ಣಪ್ಪ ಗೌತಮ್ ಅವರಿಗೆ ವಿಕೆಟ್‌ ತೆತ್ತರು. ಗ್ಲೆನ್‌ ಮ್ಯಾಕ್ಸ್‌ವೆಲ್‌ (4), ರವಿ ಬಿಷ್ಣೋಯಿ ಲೆಗ್‌ ಬ್ರೇಕ್‌ ಎಸೆತದಲ್ಲಿ ರಿವರ್ಸ್‌ ಸ್ವೀಪ್‌ ಯತ್ನದಲ್ಲಿ ಲೆಗ್‌ಬಿಫೋರ್‌ ಬಲೆಗೆ ಬಿದ್ದರು. 16ನೇ ಓವರ್‌ನಲ್ಲಿ ಮೊತ್ತ 4 ವಿಕೆಟ್‌ಗೆ 93 ರನ್‌ಗಳಾಗಿದ್ದಾಗ ಮಳೆಯಿಂದ ಕೆಲಕಾಲ ಆಟಕ್ಕೆ ಅಡ್ಡಿಯಾಯಿತು. ಒಂದೆಡೆ ವಿಕೆಟ್‌ಗಳು ಬೀಳುತ್ತಿದ್ದರೂ ಸ್ಥಿರವಾಗಿ ಆಡುತ್ತಿದ್ದ ಡುಪ್ಲೆಸಿ 17ನೇ ಓವರ್‌ನಲ್ಲಿ ನಿರ್ಗಮಿಸಿದರು.

ಕೊಹ್ಲಿ–ಗಂಭೀರ್‌ ‘ಜಟಾಪಟಿ’: ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ ಮತ್ತು ಲಖನೌ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ ನಡುವೆ ಮಾತಿನ ಚಕಮಕಿ ನಡೆಯಿತು. ಸಹ ಆಟಗಾರರು ಇಬ್ಬರನ್ನೂ ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT