ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿಗೆ ಜನಪ್ರಿಯತೆಯಷ್ಟೇ ಸಾಕೆ? ಕಪ್ ಬೇಡವೇ?

Published 22 ಮೇ 2023, 13:29 IST
Last Updated 22 ಮೇ 2023, 13:29 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಹದಿನಾರು ವರ್ಷಗಳಲ್ಲಿ ಕ್ರಿಕೆಟ್‌ ಲೋಕದಲ್ಲಿ ಮಹತ್ತರ ಬದಲಾವಣೆಗಳು ಆಗಿವಹೋಗಿವೆ. ಜಗತ್ತಿನಲ್ಲಿಯೂ ಹಲವಾರು ಬದಲಾವಣೆಗಳಾಗಿವೆ. ಆದರೆ, ಈ ಅವಧಿಯಲ್ಲಿ ಬದಲಾಗದೇ ಉಳಿದಿರುವುದು ಒಂದೇ. ಅದು  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು  ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸದಿರುವುದು.

ಈ ತಂಡವನ್ನು ಕ್ರಿಕೆಟ್ ಲೋಕದ ಹಲವು ದಿಗ್ಗಜರು ಪ್ರತಿನಿಧಿಸಿದ್ದಾರೆ. ಅವರಿಂದಾಗಿ ತಂಡದ ಬ್ರ್ಯಾಂಡ್ ಮೌಲ್ಯ ಉತ್ತರೋತ್ತರವಾಗಿ ಬೆಳೆದಿದೆ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಮಾತ್ರ ಒಲಿದಿಲ್ಲ. 

ಪ್ರತಿ ಬಾರಿಯೂ ’ಈ ಸಲ್ ಕಪ್ ನಮ್ದೆ‘ ಎಂಬ ಘೋಷಣೆ ಮಾಡುವ ಅಭಿಮಾನಿಗಳ ದಂಡು ಆರ್‌ಸಿಬಿಯನ್ನು ಬೆಂಬಲಿಸುವ ಪರಿ ಅಸಾಧಾರಣ. ಒಂದು ಲೆಕ್ಕಾಚಾರದ ಪ್ರಕಾರ ಐದು ಬಾರಿ ಪ್ರಶಸ್ತಿ ಜಯಿಸಿರುವ ಮುಂಬೈ ಇಂಡಿಯನ್ಸ್‌ಗಿಂತಲೂ ಆರ್‌ಸಿಬಿ ಅಭಿಮಾನಿಗಳ ದೊಡ್ಡದಂತೆ. ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಈ ಬಾರಿ ಐಪಿಎಲ್ ಪಂದ್ಯಗಳು ನಡೆದವು. ಅನ್‌ಬಾಕ್ಸ್‌ ಕಾರ್ಯಕ್ರಮದಿಂದ ಹಿಡಿದು ಭಾನುವಾರ (ಮೇ 21) ಮುಗಿದ ಕೊನೆಯ ಪಂದ್ಯದವರೆಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಅಭಿಮಾನಿಗಳು ಸೇರಿದ್ದರು.  ಉರಿಬಿಸಿಲು ಮತ್ತು ಮಳೆಯನ್ನೂ ಲೆಕ್ಕಿಸದೇ ಜನರು ಮುಗಿಬಿದ್ದರು. ಆದರೆ  ಈ ಸಲವೂ ನಿರಾಶೆ ತಪ್ಪಲಿಲ್ಲ.

ನಾಯಕ ಫಫ್ ಡುಪ್ಲೆಸಿ,  ರನ್ ಯಂತ್ರ ವಿರಾಟ್ ಕೊಹ್ಲಿ ಮತ್ತು ಸಿಡಿಲುಮರಿ ಗ್ಲೆನ್‌ ಮ್ಯಾಕ್ಸ್‌ವೆಲ್ ಅವರ ಬ್ಯಾಟಿಂಗ್ ಬಲದ ಮೇಲೆಯೇ ಇಡೀ ಟೂರ್ನಿಯಲ್ಲಿ 14 ಅಂಕ ಗಳಿಸಿದ್ದು ತಂಡದ ಸಾಧನೆ. ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್‌ ಎದುರೂ ಬೆಂಗಳೂರು ಬೌಲರ್‌ಗಳ ದೌರ್ಬಲ್ಯ ಬಹಿರಂಗವಾಯಿತು. ಜೊತೆಗೆ ಮೂವರು ಬ್ಯಾಟರ್‌ಗಳ ಮೇಲಿನ ಅವಲಂಬನೆಯ ’ಅಡ್ಡಪರಿಣಾಮ‘ವೂ ಕಣ್ಣಿಗೆ ರಾಚಿತು. ವಿರಾಟ್ ಕೊಹ್ಲಿ ಅಜೇಯ ಶತಕ ಹೊಡೆದಿದ್ದರಿಂದ ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು. ಆದರೆ ಯುವತಾರೆ ಶುಭಮನ್ ಗಿಲ್ ಅಜೇಯ ಶತಕದ ಮೂಲಕ ಆರ್‌ಸಿಬಿಯ ಕೈಯಿಂದ ಪ್ಲೇ ಆಫ್ ಅವಕಾಶವನ್ನು ಕಿತ್ತುಕೊಂಡರು.

ಕಳೆದ ಮೂರು ವರ್ಷಗಳಲ್ಲಿ ಪ್ಲೇ ಆಫ್‌ ಹಂತವನ್ನು ಪ್ರವೇಶಿಸಿದ್ದ ತಂಡವು ಈ ಬಾರಿ ಲೀಗ್ ಹಂತ ದಾಟಲಿಲ್ಲವೆಂಬ ಬೇಸರವಿದ್ದರೂ ಅಭಿಮಾನಿಗಳು ಕ್ರೀಡಾಂಗಣದಿಂದ ಹೊರಹೋಗುವಾಗಲೂ ’ಆರ್‌ಸಿಬಿ..ಆರ್‌ಸಿಬಿ..‘ ಎಂದು ಅಭಿಮಾನ ವ್ಯಕ್ತಪಡಿಸುತ್ತಲೇ ಇದ್ದರು. ಮುಂದಿನ ವರ್ಷವೂ ಇಂತಹ ಅಭಿಮಾನದ ಹೊಳೆ ಹರಿಯುವುದರಲ್ಲಿ ಅನುಮಾನವೇ ಇಲ್ಲ.  ಆದರೆ ಕಪ್ ಗೆಲ್ಲುವುದು ಸಾಧ್ಯವೇ ಅದನ್ನು ಕಾಲವೇ ಹೇಳಬೇಕು. 

ಅಷ್ಟಕ್ಕೂ; ಆರ್‌ಸಿಬಿಗೆ 2008ರಿಂದಲೂ ಸ್ಟಾರ್‌ ಮೌಲ್ಯ ದೊರೆಯುವಲ್ಲಿ ಹಲವು ದಿಗ್ಗಜರ ಪಾತ್ರವಿದೆ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ನ್ಯೂಜಿಲೆಂಡ್‌ನ ಡೇನಿಯಲ್ ವೆಟೊರಿ, ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ  ಫಫ್‌ ಡುಪ್ಲೆಸಿ  ನಾಯಕರಾಗಿ ಈ ತಂಡವನ್ನು ಆಯಾ ಕಾಲಘಟ್ಟದಲ್ಲಿ ಮುನ್ನಡೆಸಿದ್ದಾರೆ. ಇವರಲ್ಲದೇ ದಕ್ಷಿಣ ಆಫ್ರಿಕಾದ  ಜಾಕಸ್ ಕ್ಯಾಲಿಸ್, ಎಬಿ ಡಿವಿಲಿಯರ್ಸ್, ವೆಸ್ಟ್ ಇಂಡೀಸ್‌ನ ’ಯುನಿವರ್ಸಲ್ ಬಾಸ್‘ ಕ್ರಿಸ್ ಗೇಲ್, ಶ್ರೀಲಂಕೆಯ ತಿಲಕರತ್ನೆ ದಿಲ್ಶಾನ್, ಮುತ್ತಯ್ಯ ಮುರಳೀಧರನ್, ಭಾರತದ  ಜಹೀರ್ ಖಾನ್, ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್ ಹಾಗೂ  ಮನೀಷ್ ಪಾಂಡೆ ಅವರಂತಹ ಆಟಗಾರರು ಈ ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ಕಪ್ ಒಲಿಯಲಿಲ್ಲ.

ಇದಕ್ಕೆ ಕಾರಣಗಳು ಹತ್ತಾರು ಇವೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿರುವಂತೆ,  ತಂಡವು ಒಳ್ಳೆಯ ಕ್ರಿಕೆಟ್ ಆಡುತ್ತದೆ. ಅಭಿಮಾನಿಗಳಿಗೆ ಅಪ್ಪಟ ಮನರಂಜನೆ ನೀಡುವುದು ಮತ್ತು ಸ್ನೇಹಪರವಾಗಿರುವುದು ನಮ್ಮ ಧ್ಯೇಯ. ಸೋಲು, ಗೆಲುವು ಆಟದಲ್ಲಿ ಸಾಮಾನ್ಯ.

ಅವರ ಮಾತಿನಲ್ಲಿ ಒಂದಿಷ್ಟು ಹುರುಳಿದೆ. ಐಪಿಎಲ್‌ನಲ್ಲಿ ಇದುವರೆಗೆ ಪ್ರಶಸ್ತಿ ಜಯಿಸದ ತಂಡಗಳಲ್ಲಿ ಆರ್‌ಸಿಬಿ ಒಂದೇ ಅಲ್ಲ. ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್‌ (ಎರಡು ಬಾರಿ ಟೈಟಲ್ ಬದಲಾಗಿದೆ) ಅಂತಹ ತಂಡಗಳೂ ಇವೆ. ಆದರೆ ಯಾವುದೇ ತಂಡದ ಸೋಲು ಚರ್ಚೆಗೆ ಗ್ರಾಸವಾಗುವುದಿಲ್ಲ.  ಆದರೆ ಆ್‌ಸಿಬಿ ಸೋಲು ಮತ್ತು ಗೆಲುವುಗಳು ಸದಾ ಚರ್ಚೆಯಲ್ಲಿರುತ್ತವೆ. ಇದು ಅಭಿಮಾನಿಗಳ ಹೃದಯ ವೈಶಾಲ್ಯವೋ ಅಥವಾ ಅಭಿಮಾನದ ಹುಚ್ಚುಹೊಳೆಯೋ ಗೊತ್ತಿಲ್ಲ. ಅಭಿಮಾನಿಗಳ ಸಂಖ್ಯಾಬಲದ ಜೊತೆಗೆ ತಂಡದ ಬ್ರ್ಯಾಂಡ್‌ ಮೌಲ್ಯವೂ ₹ 7.5 ಸಾವಿರ ಕೋಟಿಗೆ ಏರಿದೆ. ಈ ವಿಷಯದಲ್ಲಿ ನಾಲ್ಕು ಬಾರಿ ಪ್ರಶಸ್ತಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡಗಳ ನಂತರ ಆರ್‌ಸಿಬಿ ಸ್ಥಾನ ಇದೆ. ಆದರೆ ಇದೇ ರೀತಿ ಎಷ್ಟು ವರ್ಷ ಮುಂದುವರಿಯಬಹುದು. ಈ ಕುರಿತು ವಿಚಾರ ಮಾಡಲು ತಂಡಕ್ಕೆ ಇದು ಸೂಕ್ತ ಕಾಲ.

ಏಕೆಂದರೆ 34 ವರ್ಷದ ವಿರಾಟ್ ಕೊಹ್ಲಿ ಇರುವುದರಿಂದಲೇ ತಂಡಕ್ಕೆ ’ಫ್ಯಾನ್‌ ಫಾಲೋಯಿಂಗ್‘ ಎಂಬುದರಲ್ಲಿ ಅನುಮಾನವೇ ಇಲ್ಲ. ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ವಿರಾಟ್ ಅವರೇ ಪ್ರಮುಖ ತಾರೆ.  ಜನಪ್ರಿಯತೆಯ ವಿಷಯದಲ್ಲಿ ಅವರಿಗೆ ಸರಿಸಾಟಿಯಾಗುವಂತಹ ಆಟಗಾರ ಭಾರತವೂ ಸೇರಿದಂತೆ ಬೇರೆ ಯಾವ ತಂಡದಲ್ಲಿಯೂ ಸದ್ಯಕ್ಕಂತೂ ಕಾಣುತ್ತಿಲ್ಲ.

ಸೂಪರ್ ಫಿಟ್ ಆಗಿರುವ ಅವರು ಇನ್ನೂ ಆರೇಳು ವರ್ಷಗಳಂತೂ ಆಡಬಲ್ಲರು. 40 ವರ್ಷ ದಾಟಿದ ನಂತರವೂ ಅವರು ಆಡಬಹುದು.  ಆದರೆ ಅವರ ನಿವೃತ್ತಿಯ ನಂತರವೂ ಆರ್‌ಸಿಬಿಯ ಫ್ಯಾನ್ ಫಾಲೋಯಿಂಗ್ ಇದೇ ರೀತಿ ಮುಂದುವರಿಯಲು ಮತ್ತಷ್ಟು ತಾರೆಗಳು ಬೆಳೆಯಬೇಕು. ಅದಕ್ಕೆ ಇರುವ ಉತ್ತಮ ದಾರಿಯೆಂದರೆ ಚಾಂಪಿಯನ್ ಆಗುವುದಷ್ಟೇ. ಅದಕ್ಕೆ ಉದಾಹರಣೆ ಮುಂಬೈ ತಂಡ. ರೋಹಿತ್ ನಿವೃತ್ತಿಯ ನಂತರವೂ  ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಅವರಂತಹ ಪ್ರತಿಭಾನ್ವಿತರು ಬೆಳೆಯುತ್ತಿದ್ದಾರೆ. ಆರ್‌ಸಿಬಿಗೂ ಇದು ಅನಿವಾರ್ಯವಾಗಬಹುದು. ಜೊತೆಗೆ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಕೊಟ್ಟರೆ ಫ್ಯಾನ್‌ ಬೇಸ್ ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇದೆ.

ಆರ್‌ಸಿಬಿ ತಂಡದ ಸಂಭ್ರಮ
ಆರ್‌ಸಿಬಿ ತಂಡದ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT