ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳು ಹಾರ್ದಿಕ್‌ರನ್ನು ಗೇಲಿ ಮಾಡಬಾರದು: ಸೌರವ್ ಗಂಗೂಲಿ

Published 6 ಏಪ್ರಿಲ್ 2024, 11:25 IST
Last Updated 6 ಏಪ್ರಿಲ್ 2024, 11:25 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ ಅವರನ್ನು ಅಭಿಮಾನಿಗಳು ಗೇಲಿ ಮಾಡಬಾರದು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಶನಿವಾರ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ನಾಯಕರಾಗಿ ಆಯ್ಕೆಯಾಗಿದ್ದು ಹಾರ್ದಿಕ್ ಅವರ ತಪ್ಪು ಅಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರೂ ಆಗಿರುವ ಗಂಗೂಲಿ ಹೇಳಿದ್ದಾರೆ.

ಇಂದು (ಶನಿವಾರ) ವಾಂಖೆಡೆ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತಿ ಅವಧಿಯ ವೇಳೆ ಈ ಕುರಿತು ಪ್ರತಿಕ್ರಿಯಿಸಿದ ಗಂಗೂಲಿ, 'ಹಾರ್ದಿಕ್ ಅವರನ್ನು ಗೇಲಿ ಮಾಡಬಾರದು. ಇದು ಸರಿಯಲ್ಲ. ಫ್ರಾಂಚೈಸಿಯು ಹಾರ್ದಿಕ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಿದೆ. ಕ್ರೀಡೆಯಲ್ಲಿ ಇದು ಸಹಜ' ಎಂದು ಹೇಳಿದ್ದಾರೆ.

'ನಿಸ್ಸಂಶಯವಾಗಿಯೂ ರೋಹಿತ್ ಶರ್ಮಾ ವಿಭಿನ್ನ ಮಟ್ಟದ ನಾಯಕ. ಓರ್ವ ನಾಯಕ ಹಾಗೂ ಆಟಗಾರನಾಗಿಯೂ ಭಾರತ ಹಾಗೂ ಮುಂಬೈ ಪರ ಅವರ ನಿರ್ವಹಣೆ ಅತ್ಯುತ್ತಮವಾಗಿದೆ' ಎಂದು ಅವರು ಹೇಳಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ಅಚ್ಚರಿಯ ಬೆಳವಣಿಗೆಯಲ್ಲಿ ರೋಹಿತ್ ಶರ್ಮಾ ಅವರ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ಇದಕ್ಕೂ ಮೊದಲು ಗುಜರಾತ್ ಟೈಟನ್ಸ್ ತಂಡದಲ್ಲಿದ್ದ ಹಾರ್ದಿಕ್ ಅವರನ್ನು ಮುಂಬೈ ತಂಡ ಖರೀದಿಸಿತ್ತು.

ಇದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತಲ್ಲದೆ ಮುಂಬೈ ಈವರೆಗೆ ಆಡಿದ ಪಂದ್ಯಗಳಲ್ಲಿ ಹಾರ್ದಿಕ್ ಅವರನ್ನು ಹೀಯಾಳಿಸಲಾಗಿತ್ತು.

ಅಭಿಮಾನಿಗಳ ಅಚ್ಚುಮೆಚ್ಚಿನ ನಾಯಕರಾಗಿದ್ದ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಮುಂಬೈ ಐದು ಬಾರಿ ಟ್ರೋಫಿ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT