ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಹಾರ್ದಿಕ್ ಪಾಂಡ್ಯ ಕಳಪೆ ನಾಯಕತ್ವ; ವ್ಯಾಪಕ ಟ್ರೋಲ್

Published 28 ಮಾರ್ಚ್ 2024, 6:41 IST
Last Updated 28 ಮಾರ್ಚ್ 2024, 6:41 IST
ಅಕ್ಷರ ಗಾತ್ರ

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಕಪ್ತಾನ ಹಾರ್ದಿಕ್ ಪಾಂಡ್ಯ ನಾಯಕತ್ವವು ತೀರಾ ಕಳಪೆ ಮಟ್ಟದಲ್ಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟೀಕಿಸಿದ್ದಾರೆ.

ಐಪಿಎಲ್ 2024ನೇ ಸಾಲಿನ ಟಿ20 ಟೂರ್ನಿಯಲ್ಲಿ ಸತತ ಎರಡನೇ ಸೋಲಿಗೆ ಗುರಿಯಾಗಿರುವ ಮುಂಬೈ ಮೊದಲ ಗೆಲುವಿನ ಹುಡುಕಾಟದಲ್ಲಿದೆ.

ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ 31 ರನ್ ಅಂತರದ ಸೋಲಿಗೆ ಶರಣಾಗಿತ್ತು.

ಮೊದಲು ಬ್ಯಾಟಿಂಗ್ ನಡೆಸಿದ ಎಸ್‌ಆ‌ರ್‌ಎಚ್ ದಾಖಲೆಯ 277 ರನ್ ಪೇರಿಸಿತ್ತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರಣನೀತಿಯನ್ನು ಇರ್ಫಾನ್ ಪಠಾಣ್ ಪ್ರಶ್ನೆ ಮಾಡಿದ್ದಾರೆ.

12 ಓವರ್‌ಗಳಲ್ಲಿ ಹೈದರಾಬಾದ್ ಮೂರು ವಿಕೆಟ್ ನಷ್ಟಕ್ಕೆ 173 ರನ್ ಪೇರಿಸಿತ್ತು. ಹೈದರಾಬಾದ್ ಬ್ಯಾಟರ್‌ಗಳು ಎಲ್ಲ ಬೌಲರ್‌ಗಳನ್ನು ಮನಬಂದಂತೆ ದಂಡಿಸುತ್ತಿದ್ದರು. ಆದರೆ ಅಲ್ಲಿಯವರೆಗೆ ವಿಶ್ವದ ಅಗ್ರಮಾನ್ಯ ಬೌಲರ್ ಜಸ್‌ಪ್ರೀತ್ ಬೂಮ್ರಾಗೆ ಕೇವಲ ಒಂದು ಓವರ್ ಮಾತ್ರ ನೀಡಲಾಗಿತ್ತು. ಬೂಮ್ರಾ ಅವರನ್ನು ಹೊರಗಿರಿಸಿದ ಪಾಂಡ್ಯ ಅವರ ತಂತ್ರಗಾರಿಕೆ ನನಗೆ ಕಿಂಚಿತ್ತು ಅರ್ಥವಾಗುತ್ತಿಲ್ಲ ಎಂದು ಇರ್ಫಾನ್ ಟೀಕಿಸಿದ್ದಾರೆ.

ಮಗದೊಂದು ಟ್ವೀಟ್‌ನಲ್ಲಿ ಪಾಂಡ್ಯ ಬ್ಯಾಟಿಂಗ್ ಬಗ್ಗೆಯೂ ಇರ್ಫಾನ್ ತಗಾದೆ ಎತ್ತಿದ್ದಾರೆ. 'ಇಡೀ ತಂಡವೇ 200ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸುತ್ತಿರುವಾಗ ನಾಯಕನಿಗೆ 120ರ ಸ್ಟ್ರೈಕ್‌ರೇಟ್‌ನಲ್ಲೂ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.

ಅಂತಿಮವಾಗಿ 246 ರನ್ ಗಳಿಸಿದ್ದ ಮುಂಬೈ 31 ರನ್ ಅಂತರದಿಂದ ಪರಾಭವಗೊಂಡಿತ್ತು.

ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಆರು ರನ್ ಅಂತರದಿಂದ ಸೋಲು ಅನುಭವಿಸಿತ್ತು. ಇಲ್ಲಿ ಕೆಳಕ್ರಮಾಂಕದಲ್ಲಿ ಆಡಿದ್ದ ಹಾರ್ದಿಕ್ ಅವರನ್ನು ಇರ್ಫಾನ್ ಟೀಕಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಹಾರ್ದಿಕ್ ನಾಯಕತ್ವವನ್ನು ಹೀಯಾಳಿಸಿ ವ್ಯಾಪಕ ಟ್ರೋಲ್ ಹರಿದಾಡುತ್ತಿದೆ. ರೋಹಿತ್ ಶರ್ಮಾ ಅವರ ಬದಲು ಹಾರ್ದಿಕ್ ಪಾಂಡ್ಯಗೆ ನಾಯಕತ್ವ ವಹಿಸಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಸ್ಟೇಡಿಯಂನಲ್ಲಿ ಪ್ರೇಕ್ಷಕರು ಪಾಂಡ್ಯ ಅವರನ್ನು ಗೇಲಿ ಮಾಡಿದ ಪ್ರಸಂಗವೂ ಎದುರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT